ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಶಿಕ್ಷಣ ನೀಡಿದ ಮೊದಲ ಶಾಲೆ ಇದು!

1863ರಲ್ಲೇ ಕನ್ನಡ ಜ್ಞಾನದೀಪ ಹಚ್ಚಿದ ಪ್ರೌಢಶಾಲೆ ಬಂಕಿಕೊಡ್ಲ ಆನಂದಾಶ್ರಮ
Last Updated 31 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಅಂಕೋಲಾ: ಇತಿಹಾಸ ಪ್ರಸಿದ್ಧ ಗೋಕರ್ಣದ ಅನತಿ ದೂರದಲ್ಲಿರುವ ಹಸಿರಿನಿಂದ ಕಂಗೊಳಿಸುತ್ತಿರುವ ಪುಟ್ಟಹಳ್ಳಿ ಬಂಕಿಕೊಡ್ಲ ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತ ಬಂದಿದೆ. ಇಲ್ಲಿನ ಆನಂದಾಶ್ರಮ ಪ್ರೌಢಶಾಲೆ1863ರಲ್ಲೇ ಈಗಿನ ಮಾದರಿಯಲ್ಲಿ ತರಗತಿ ಶಿಕ್ಷಣವನ್ನು ನೀಡುತ್ತಿತ್ತು ಎನ್ನುವುದು ಗಮನಾರ್ಹ.

ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ದೇಶಾಭಿಮಾನ ಬಡಿದೆಬ್ಬಿಸುವ ದೃಷ್ಟಿಯಿಂದ ಸ್ವಾತಂತ್ರ್ಯ ಹೋರಾಟಗಾರರು ಶಿಕ್ಷಣದ ಮಹತ್ವನ್ನು ಅರಿತರು.ಊರಿನ ಭಂಕನಾಥೇಶ್ವರ ದೇವಸ್ಥಾನದ ಜಗುಲಿಯಲ್ಲಿ ತರಗತಿಗಳು ನಡೆಯುತ್ತಿದ್ದವು.ಅಂದಿನ ದಿನಗಳಲ್ಲಿ ಚಿತ್ರಾಪುರ ಸಾರಸ್ವತ ನಾಡಕರ್ಣಿ ಕುಟುಂಬದವರು ಶೈಕ್ಷಣಿಕ ದೀಪ ಹಚ್ಚಿದವರಲ್ಲಿ ಮುಂಚೂಣಿಯಲ್ಲಿದ್ದರು ಎಂದು ಅನೇಕ ದಾಖಲೆಗಳಿಂದತಿಳಿದುಬರುತ್ತದೆ.

ನಂತರ1884ರಲ್ಲಿ ‘ಆಂಗ್ಲೋ ವರ್ನಾಕ್ಯುಲರ್ ಶಾಲೆ’ ಎಂದು ಜಿಲ್ಲೆಯಲ್ಲಿ ಕಾರವಾರ, ಅಂಕೋಲಾ, ಬಂಕಿಕೊಡ್ಲ, ಕುಮಟಾ, ಹೊನ್ನಾವರ, ಶಿರಸಿ ಭಾಗಗಳಲ್ಲಿ ಪ್ರೌಢಶಾಲೆಗಳನ್ನು ಅಧಿಕೃತವಾಗಿ ತೆರೆಯಲಾಯಿತು.1911ರಲ್ಲಿ ಬಂಕಿಕೊಡ್ಲ ಪ್ರೌಢಶಾಲೆಯ ಉಸ್ತುವಾರಿಯನ್ನು ದತ್ತು ಮಾಸ್ತರ್ ವಹಿಸಿಕೊಂಡಿದ್ದರು.

1941ರಲ್ಲಿಚಿತ್ರಾಪುರ ಮಠದ ರೂರಲ್ ಎಜುಕೇಶನ್ ಸೊಸೈಟಿ ಉಸ್ತುವಾರಿಗೆ ಒಳಪಟ್ಟ ಈ ಶಾಲೆಗೆ ‘ಆನಂದಾಶ್ರಮ ಪ್ರೌಢಶಾಲೆ‌’ ಎಂದು ಮರುನಾಮಕರಣ ಮಾಡಲಾಯಿತು. 1967ರಲ್ಲಿ ವೇತನಾನುದಾನಕ್ಕೆ ಒಳಪಟ್ಟಿತು ಎಂದು ದಾಖಲೆಗಳಲ್ಲಿ ಉಲ್ಲೇಖವಿದೆ.

ಈ ಪ್ರೌಢಶಾಲೆ ಸಾಹಿತಿಗಳ ಅಚ್ಚುಮೆಚ್ಚಿನ ತಾಣವಾಗಿತ್ತು ಎಂಬುದೂ ಗಮನಾರ್ಹ.ಪ್ರೌಢಶಾಲೆಗೆ 50ರ ದಶಕದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ್, ದ.ರಾ.ಬೇಂದ್ರೆ ಮುಂತಾದವರು ಭೇಟಿ ನೀಡಿದ್ದರು. ಅದೇ ರೀತಿ, ಕೃಷ್ಣಮೂರ್ತಿ ಪುರಾಣಿಕ್, ದಿನಕರ ದೇಸಾಯಿ, ಯಶವಂತ ಚಿತ್ತಾಲ, ಚಂದ್ರಶೇಖರ ಪಾಟೀಲ, ಪಾಟೀಲ ಪುಟ್ಟಪ್ಪ ಸೇರಿದಂತೆ ಅನೇಕರು ಶಾಲೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರ ಹಸ್ತಾಕ್ಷರಗಳು ಶಾಲೆಯಲ್ಲಿ ಇಂದಿಗೂ ಇವೆ.

ಸು.ರಂ.ಎಕ್ಕುಂಡಿ ಅವರು ಈ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾಗ ಅನೇಕ ಸಾಹಿತಿಗಳು, ಕವಿಗಳು ಭೇಟಿ ನೀಡಿದ್ದಾರೆ. ಗೌರೀಶ ಕಾಯ್ಕಿಣಿ ಅವರ ನೆಚ್ಚಿನ ತಾಣವೂ ಇದಾಗಿತ್ತು. ಇಂದು ಈ ಶಾಲೆಯಲ್ಲಿ ಕನ್ನಡ ಕಲರವ ತುಂಬಿದೆ.

‘ಸಾಹಿತ್ಯ ಲೋಕದೊಂದಿಗೆ ಈ ಶಾಲೆಯ ನೆಂಟು ಕನ್ನಡನಾಡಿಗೆ ಕಿರೀಟ ಪ್ರಾಯವಾಗಿದೆ. ಅಂದಿನಿಂದ ಇಂದಿನವರೆಗೂ ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ವಿವೇಕ ನಾಡಕರ್ಣಿ ‘ಪ್ರಜಾವಾಣಿ’ಯೊಂದಿಗೆ ಹೆಮ್ಮೆಯಿಂದ ಮಾತಿಗಿಳಿದರು.

‘ಎತ್ತರವಾದ ಕಟ್ಟಡ, ಹೂದೋಟ, ಕ್ರೀಡಾಂಗಣ, ಸುಂದರವಾದ ಶಾಲಾ ವಾತಾವರಣ ಇಲ್ಲಿದೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು, ಸಾಹಿತಿಗಳನ್ನು, ಕವಿಗಳನ್ನು ಹುಟ್ಟು ಹಾಕಿದ ಈ ಶಾಲೆಯ ಕೀರ್ತಿ ನಾಡಿನೆಲ್ಲೆಡೆ ಬೆಳಗಲಿ’ ಎಂದು ಅವರು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT