ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಆಧರಿಸಿ ಅನುದಾನ ಹಂಚಿಕೆಯಾಗಲಿ: ಪ್ರೊ.ಎಂ.ಎ.ಹೆಗಡೆ ಅಭಿಮತ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ
Last Updated 19 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ಕಲಾವಿದ ಪ್ರೊ.ಎಂ.ಎ.ಹೆಗಡೆ ಅವರು ಯಕ್ಷಗಾನದ ಮೂಲಬೇರನ್ನು ಬಲಗೊಳಿಸುವ ಹಲವಾರು ಕನಸು ಹೊಂದಿದ್ದಾರೆ. ಕನಸಿಗೆ ಬಣ್ಣ ಹಚ್ಚಲು ಹೊರಟಿರುವ ಅವರಿಗೆ ಕಡಿತಗೊಂಡಿರುವ ಅನುದಾನ ತಡೆಯೊಡ್ಡಿದೆ. ಲಭ್ಯ ಅನುದಾನದಲ್ಲೇ ಹಾಕಿಕೊಂಡಿರುವ ಯೋಜನೆಗಳನ್ನು ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

* ಹಿಂದಿನ ಅವಧಿಯಲ್ಲಿ ಹಾಕಿಕೊಂಡಿದ್ದ ಯೋಜನೆ ಅನುಷ್ಠಾನ ಸಾಧ್ಯವಾಯಿತಾ ?
ಎರಡು ಚುನಾವಣೆಗಳ ನೀತಿಸಂಹಿತೆ ಅವಧಿ ಹೊರತುಪಡಿಸಿದರೆ ನಾನು ಅಧ್ಯಕ್ಷನಾಗಿ ಕೆಲಸ ಮಾಡಿದ್ದು ಒಂದು ವರ್ಷವಷ್ಟೇ. ಆಗ ಕೈಗೊಂಡ ಕಾರ್ಯಕ್ರಮಗಳು ಅರ್ಧಕ್ಕೆ ನಿಂತಿದ್ದವು. ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣಗೊಳಿಸುವ ‘ಪ್ರಸಂಗ ಕೋಶ’ ಯೋಜನೆಯಡಿ 100 ಪ್ರಸಂಗಗಳು ಸಿದ್ಧಗೊಂಡಿದ್ದವು. ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ. ಆಸಕ್ತರು ಉಚಿತವಾಗಿ ಇವುಗಳನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಯಕ್ಷಗಾನದಲ್ಲಿ 6000ಕ್ಕೂ ಹೆಚ್ಚು ಪ್ರಸಂಗಗಳಿವೆ. ಹಂತಹಂತವಾಗಿ ಡಿಜಿಟಲೀಕರಣ ಮಾಡಲಾಗುವುದು.

* ಯಕ್ಷಗಾನ ತರಬೇತಿ ಮುಂದುವರಿಸುವ ಯೋಜನೆ ಇದೆಯಾ ?
ಸುಮಾರು 100 ಯಕ್ಷಗಾನ ತರಬೇತಿ ಕೇಂದ್ರಗಳನ್ನು ಗುರುತಿಸಿ, ಎರಡು ತಿಂಗಳ ತರಬೇತಿಗೆ ಅವಕಾಶ ಕೊಟ್ಟು ಪ್ರೋತ್ಸಾಹಧನ ನೀಡಲಾಗಿತ್ತು. ಇದು ಜನಮೆಚ್ಚಿದ ಯೋಜನೆಯಾಗಿ ರೂಪುಗೊಂಡಿದೆ. ಹೊಸಪಟ್ಟಿ ಸಿದ್ಧಪಡಿಸುವ ವೇಳೆಗೆ ಅಧಿಕಾರ ಹೋಯಿತು. ಈಗ ಮತ್ತೆ ಇದಕ್ಕೆ ಚಾಲನೆ ನೀಡಬೇಕಾಗಿದೆ. ಹಿಂದಿನ ವರ್ಷ ನೆರವು ನೀಡಿರುವ ಸಂಸ್ಥೆ ಹೊರತುಪಡಿಸಿ, ಇನ್ನುಳಿದ ಸಂಸ್ಥೆಗೆ ಆದ್ಯತೆ ನೀಡಲಾಗುವುದು. ಎರಡು ತಿಂಗಳ ತರಬೇತಿಯಲ್ಲಿ ಮಕ್ಕಳು ಪರಿಣಿತರಾಗುವುದಿಲ್ಲ, ಆದರೆ, ಅವರಲ್ಲ ಯಕ್ಷಗಾನ ಕಲಿಕೆಯ ಆಸಕ್ತಿ ಬೆಳೆಯುತ್ತದೆ.

* ‘ಹಿರಿಯರ ನೆನಪು’ ಕೂಡ ಪ್ರಚಲಿತಗೊಂಡಿತ್ತಲ್ಲವೇ ?
ಹೌದು. ಯಾವ ನಿರೀಕ್ಷೆಯಿಲ್ಲದೇ, ಇಡೀ ಬದುಕನ್ನು ಯಕ್ಷಗಾನ ಮುಡಿಪಾಗಿಟ್ಟಿದ್ದ ಅನೇಕ ತೆರೆಮರೆಯ ಕಲಾವಿದರು ನಮ್ಮಮಧ್ಯೆ ಇಲ್ಲ. ಆದರೆ, ಗ್ರಾಮೀಣ ಪರಿಸರದಲ್ಲಿ ಈ ಕಲೆಯನ್ನು ಜೀವಂತವಾಗಿಡುವಲ್ಲಿ ಅವರ ಕೊಡುಗೆ ದೊಡ್ಡದು. ಅಂಥವರ ಸಂಸ್ಮರಣೆಯಲ್ಲಿ ಸ್ಥಳೀಯವಾಗಿ ತಾಳಮದ್ದಲೆ ನಡೆಸಿದರೆ ₹ 10ಸಾವಿರ ನೆರವು ನೀಡುವ ಯೋಜನೆಯಿದು. ಕಳೆದ ವರ್ಷ ಎರಡು ಕಾರ್ಯಕ್ರಮ ನಡೆದಿದ್ದವು. ಇದು ಮುಂದುವರಿಯಲಿದೆ.

* ಪುಸ್ತಕ ಮುದ್ರಣ ಎಲ್ಲಿಗೆ ಬಂದಿದೆ ..
ಪುಸ್ತಕ ಮರುಮುದ್ರಣ ಅಕಾಡೆಮಿಯ ಮಹತ್ವಾಕಾಂಕ್ಷಿ ಯೋಜನೆ. ಇದನ್ನು ಮುಂದುವರಿಸಬೇಕಾಗಿದೆ. 12 ಜಿಲ್ಲೆಗಳಲ್ಲಿರುವ ಮೂಡಲಪಾಯ ಯಕ್ಷಗಾನ ಅಳಿವಿನ ಅಂಚಿನಲ್ಲಿದೆ. ಇರುವ ಕೆಲವೇ ಕಲಾವಿದರು ಬದುಕಿನ ಸಂಜೆಯಲ್ಲಿದ್ದಾರೆ. ಒಂದು ಕಲೆ ಅಳಿದರೆ ಅದರಿಂದಾಗುವ ನಷ್ಟ ತುಂಬಲು ಸಾಧ್ಯವಿಲ್ಲ. ಹೀಗಾಗಿ ಇದಕ್ಕೆ ವಿಶೇಷ ಲಕ್ಷ್ಯನೀಡಿ ವಿಶೇಷ ತರಬೇತಿ ನೀಡಬೇಕಾಗಿದೆ ಮತ್ತು ಇದಕ್ಕೆ ಸಂಬಂಧಿಸಿದ ಕೃತಿ ಮುದ್ರಿಸಬೇಕಾಗಿದೆ.

* ಮತ್ತೆ ಯಾವುದಾದರೂ ಹೊಸ ಕಾರ್ಯಕ್ರಮ ರೂಪಿಸಿದ್ದೀರಾ ?
ಹಿರಿಯ ಕಲಾವಿದರ ಮೇಲೆ ಜೀವನ ಮತ್ತು ಸಾಧನೆ ಒಳಗೊಂಡ ಸಾಕ್ಷ್ಯಚಿತ್ರ ಚಿತ್ರೀಕರಿಸುವ ಕಾರ್ಯ ನಡೆದಿತ್ತು. ಪ್ರಸ್ತುತ ಗೋಡೆ ನಾರಾಯಣ ಹೆಗಡೆ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಮೂಡಲಪಾಯದ ಎ.ಎಸ್.ನಂಜಪ್ಪ ಅವರ ಮೇಲೆ ಸಾಕ್ಷ್ಯಚಿತ್ರ ಚಿತ್ರೀಕರಣ ನಡೆಯುತ್ತಿದೆ. ಯಕ್ಷಗಾನಕ್ಕೆ ದೀರ್ಘಕಾಲೀನ ಯೋಜನೆಗಳು ಸಾಕಷ್ಟಿವೆ.

ಗುರುಕುಲದಲ್ಲಿ ಕಲಿಯುವ ಮಕ್ಕಳೇ ಮುಂದೆ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವವರು. ಗುರುಕುಲ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಕಳೆದ ವರ್ಷ ಪ್ರೋತ್ಸಾಹಧನ ನೀಡಲಾಗಿತ್ತು. ಈ ವರ್ಷದ ಅನುದಾನದಲ್ಲಿ ಇದನ್ನು ಮುಂದುವರಿಸುವುದು ಕಷ್ಟ. ಕಸೆಸೀರೆ ತಯಾರಿಸುವವರು ಒಬ್ಬರು ಮಾತ್ರ ಇದ್ದಾರೆ. ಈ ಪರಂಪರೆ ಮುಂದುವರಿಸಲು ನಾಲ್ಕೈದು ಜನರಿಗೆ ತರಬೇತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT