ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಶೀಲ ಕಲಾವಿದ ಚಂದ್ರಹಾಸ ಹುಡಗೋಡ

ಪಾತ್ರಧಾರಿಯಾಗಿ ರಂಗಸ್ಥಳದಲ್ಲಿದ್ದಾಗಲೇ ನಿಧನರಾದ ಯಕ್ಷಗಾನ ಕಲಾವಿದ
Last Updated 11 ಮಾರ್ಚ್ 2019, 19:48 IST
ಅಕ್ಷರ ಗಾತ್ರ

ಹೊನ್ನಾವರ: ಹೊಸ ತಲೆಮಾರಿನ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಚಂದ್ರಹಾಸ ನಾಯ್ಕ ಹುಡಗೋಡ (50) ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತಾಲ್ಲೂಕಿನ ಹುಡಗೋಡ ಎಂಬ ಪುಟ್ಟ ಊರಿನಲ್ಲಿ 1969ರ ಮೇ 8ರಂದು ತಿಮ್ಮಪ್ಪ ನಾಯ್ಕ ಹಾಗೂ ಕನ್ನೆ ಅವರ ಮಗನಾಗಿ ಜನಿಸಿದರು. ಬಾಲ್ಯದಿಂದಲೇ ಯಕ್ಷಗಾನ ಕಲೆಯ ಆಕರ್ಷಣೆಗೊಳಗಾದರು.

ಪ್ರೌಢಶಾಲೆಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದ ಬಳಿಕ ಯಕ್ಷಗಾನದತ್ತ ಮುಖ ಮಾಡಿದರು. ಗುಂಡಿಬೈಲ್‌ನಸುಬ್ರಾಯ ಭಟ್ಟ ಅವರನ್ನು ತಮ್ಮ ಯಕ್ಷಗುರು ಎಂದು ಸ್ವೀಕರಿಸಿದ್ದರು. ಸಾಂಪ್ರದಾಯಿಕ ಯಕ್ಷಗಾನ ಶಿಕ್ಷಣ ಪಡೆಯದಿದ್ದರೂ ತಾಳ–ಲಯ ಹಾಗೂ ನೃತ್ಯದಲ್ಲಿ ಹಿಡಿತ ಹೊಂದಿದ್ದರು. ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದ ಅವರ ರಂಗದ ಮೇಲಿನ ನಡೆ, ಹಾವಭಾವದಲ್ಲಿ ಹಿರಿಯಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಗಾಢ ಪ್ರಭಾವ ಎದ್ದು ಕಾಣುತ್ತಿತ್ತು.

ಗುಂಡಬಾಳ, ಗೋಳಿಗರಡಿ, ನಾಗರಕೋಡಿ, ಬಚ್ಚಗಾರು, ಸಾಲಿಗ್ರಾಮ, ಪೆರ್ಡೂರು, ಅಮೃತೇಶ್ವರಿ ಹೀಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ವಿವಿಧ ಡೇರೆ ಹಾಗೂ ಬಯಲಾಟದ ಮೇಳಗಳಲ್ಲಿ ಬಣ್ಣ ಹಚ್ಚಿದ್ದರು. ಇವರು ಕೆಲವು ವರ್ಷಗಳ ಹಿಂದೆ ತಮ್ಮದೇ ಆದ ಕಲಾಶ್ರೀ ಯಕ್ಷ ಮಿತ್ರ ಮಂಡಳಿ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದರು. ವಿವಿಧ ಸಂದರ್ಭಗಳಲ್ಲಿ ಅತಿಥಿ ಕಲಾವಿದರಾಗಿಯೂ ಭಾಗವಹಿಸುತ್ತಿದ್ದರು.

ರಾಜಕೀಯದಲ್ಲೂ ಆಸಕ್ತಿ:ಪೌರಾಣಿಕ ಕಥಾ ಪ್ರಸಂಗಗಳಲ್ಲಿ ಕೌರವ, ಸಾಲ್ವ, ಭಸ್ಮಾಸುರ, ಕೀಚಕ, ಭೀಮ ಮೊದಲಾದ ಪಾತ್ರಗಳ ಜೊತೆಗೆ ‘ಮೃತ್ಯು ಸಿಂಹಾಸನ’ ಎಂಬ ಹೊಸ ಪ್ರಸಂಗದಲ್ಲಿ ದಳವಾಯಿಯ ಪಾತ್ರಗಳು ಚಂದ್ರಹಾಸ ಅವರಿಗೆ ಹೆಸರು ತಂದುಕೊಟ್ಟಿದ್ದವು. ರಾಜಕೀಯ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದ ಅವರು, ಹಡಿನಬಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದರು.

ಅಂತಿಮ ನಮನ:ಚಂದ್ರಹಾಸ ನಾಯ್ಕ ಅವರ ಪಾರ್ಥಿವ ಶರೀರವನ್ನುಬೈಂದೂರಿನಿಂದಸೋಮವಾರ ಬೆಳಿಗ್ಗೆ ಹುಡಗೋಡಿನ ಮನೆಗೆ ತರಲಾಯಿತು. ಶಾಸಕ ಸುನೀಲ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯ ದೀಪಕ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ಆರ್.ಪಿ.ನಾಯ್ಕ, ಕಾಂಗ್ರೆಸ್ ಮುಖಂಡ ಮಂಕಾಳ ವೈದ್ಯ, ಪ್ರಮುಖರಾದ ಹರಿಯಪ್ಪ ನಾಯ್ಕ, ಕೇಶವ ನಾಯ್ಕ ಬಳಕೂರು, ಯಕ್ಷಗಾನ ಕಲಾವಿದರಾದ ಸರ್ವೇಶ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಮೂರೂರು ಅಂತಿಮ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ‘ಯಕ್ಷಗಾನದಹೊಸ ತಲೆಮಾರಿನ ಪಕ್ವ ಕಲಾವಿದರಲ್ಲಿ ಚಂದ್ರಹಾಸ ಹುಡಗೋಡ ಒಬ್ಬರಾಗಿದ್ದರು. ಅವರು ಕೋಡಂಗಿ ವೇಷದಿಂದ ಆರಂಭ ಮಾಡಿ ಚಂದ್ರಹಾಸ, ದುಷ್ಟಬುದ್ಧಿ, ಕೌರವ, ಹನುಮಂತ, ಅರ್ಜುನ, ಮಾಗಧ, ಸಾಲ್ವ ಮುಂತಾದ ಅನೇಕ ಪಾತ್ರಗಳ ಮೂಲಕ ರಂಗಸ್ಥಳದಲ್ಲಿ ವ್ಯವಸಾಯ ಮಾಡಿಪ್ರಯೋಗಶೀಲ ಕಲಾವಿದ ಎನಿಸಿಕೊಂಡಿದ್ದರು’ ಎಂದು ಸ್ಮರಿಸಿದರು.

ಮೃತ ಚಂದ್ರಹಾಸ ನಾಯ್ಕ ಅವರಿಗೆ ಪತ್ನಿ ಕಲಾವತಿ ಹಾಗೂ ಪುತ್ರರಾದ ಪ್ರದೀಪ, ಸುದೀಪ ಇದ್ದಾರೆ. ಮೃತರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಹುಡಗೋಡಿನಲ್ಲಿ ಸೋಮವಾರ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT