ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ ವಿಧಾನಸಭಾ ಕ್ಷೇತ್ರ | ಹೆಬ್ಬಾರರಿಗೆ ಈಗ ಬಿಜೆಪಿಯೇ ಸವಾಲು !

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರ ಕುಟುಂಬಸ್ಥರಿಗೆ ಟಿಕೆಟ್ ನೀಡಲು ವಿರೋಧ
Last Updated 1 ಡಿಸೆಂಬರ್ 2019, 10:56 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಅವರು ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲು ತಂತ್ರ ರೂಪಿಸಿದ್ದಾರೆ. ಆದರೆ, ಅವರನ್ನು ಹೊರತುಪಡಿಸಿ, ಬೇರೆಯವರು ಸ್ಪರ್ಧಿಸಿದರೆ, ಸೆಡ್ಡು ಹೊಡೆಯಲು ಬಿಜೆಪಿ ಪಡೆ ಮುಂದಾಗಿದೆ.

ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು (ಸೆ.23) ನಡೆಯಲಿದೆ. ಒಂದೊಮ್ಮೆ ವಿಚಾರಣೆ ಮುಂದೂಡಿಕೆಯಾದರೆ, ಶಿವರಾಮ ಹೆಬ್ಬಾರ್ ಅವರಿಗೆ ಸ್ಪರ್ಧಿಸುವ ಅವಕಾಶ ತಪ್ಪುತ್ತದೆ. ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ಪ್ರಮುಖರನ್ನು ಭೇಟಿ ಮಾಡಿರುವ ಅವರು, ತಮಗೆ ಸ್ಪರ್ಧಿಸುವ ಅವಕಾಶ ಇಲ್ಲದಿದ್ದರೆ, ಮಗ ವಿವೇಕ ಹೆಬ್ಬಾರ್ ಅಥವಾ ಪತ್ನಿ ವನಜಾಕ್ಷಿ ಹೆಬ್ಬಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಅವರು ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಚಾರ ಬಿಜೆಪಿಗರನ್ನು ಕೆಣಕಿದೆ. ‘ಹೆಬ್ಬಾರ್ ಬಿಜೆಪಿಗೆ ಬರುವುದನ್ನೇ ಆಂತರಿಕವಾಗಿ ವಿರೋಧಿಸಿದ್ದ ಕ್ಷೇತ್ರದ ಕಾರ್ಯಕರ್ತರು, ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿಯುವ ಕಾರಣಕ್ಕೆ ಮೌನವಾಗಿದ್ದರು. ಈಗಲೂ ಶಿವರಾಮ ಹೆಬ್ಬಾರ್ ಸ್ವತಃ ಸ್ಪರ್ಧಿಸಿದರೆ ನಮ್ಮ ಆಕ್ಷೇಪವಿಲ್ಲ. ಆದರೆ, ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಲು ನಮ್ಮ ಸಮ್ಮತಿಯಿಲ್ಲ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಸೋತಿದ್ದರು. ಹೆಬ್ಬಾರರಿಗೆ ಸ್ಪರ್ಧಿಸಲು ಆಗದಿದ್ದರೆ, ವಿ.ಎಸ್.ಪಾಟೀಲರಿಗೆ ಟಿಕೆಟ್ ನೀಡಬೇಕು’ ಎಂದು ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.

ಈ ಕುರಿತು ವಿ.ಎಸ್.ಪಾಟೀಲ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಬಿಜೆಪಿ ಅಧಿಕಾರಕ್ಕೆ ತರಲು ಶಾಸಕ ಸ್ಥಾನ ತ್ಯಾಗ ಮಾಡಿರುವ ಶಿವರಾಮ ಹೆಬ್ಬಾರ್ ಅವರಿಗೆ ಟಿಕೆಟ್ ನೀಡಿದರೆ, ನಾನು ಅವರನ್ನು ಬೆಂಬಲಿಸುತ್ತೇನೆ. ಇಲ್ಲವಾದರೆ, ನಾನು ಕೂಡ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. 2004ರಿಂದ ಇಲ್ಲಿಯವರೆಗೂ ನಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೇ. ಕಳೆದ ಚುನಾವಣೆಯಲ್ಲಿ ನಾನು ಕೇವಲ 1483 ಮತಗಳ ಅಂತರದಿಂದ ಸೋತಿದ್ದೇನೆ. ಸೋಮವಾರ ಬೆಂಗಳೂರಿನಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಈ ಎಲ್ಲ ವಿಷಯಗಳನ್ನು ಚರ್ಚಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT