‘ಕೆರೆ ಸಂಜೀವಿನಿ’ ಅನುದಾನ ಬಾಕಿ

ಸೋಮವಾರ, ಏಪ್ರಿಲ್ 22, 2019
31 °C
ನನೆಗುದಿಗೆ ಬಿದ್ದಿರುವ ಹಿಂದಿನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

‘ಕೆರೆ ಸಂಜೀವಿನಿ’ ಅನುದಾನ ಬಾಕಿ

Published:
Updated:
Prajavani

ಶಿರಸಿ: ಕುಡಿಯುವ ನೀರಿನ ಮೂಲ ಪುನಶ್ಚೇತನಗೊಳಿಸುವ ಹಾಗೂ ಕೆರೆಗಳ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಾರಿಯಾಗಿದ್ದ ‘ಕೆರೆ ಸಂಜೀವಿನಿ’ ಯೋಜನೆ ನನೆಗುದಿಗೆ ಬಿದ್ದಿದೆ. ಕಳೆದ ವರ್ಷ ನಡೆದಿರುವ ಕಾಮಗಾರಿಗೆ ಸರ್ಕಾರ ಇನ್ನೂ ಅನುದಾನ ಮಂಜೂರುಗೊಳಿಸಿಲ್ಲ.

ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ 2016ರ ಬಜೆಟ್‌ನಲ್ಲಿ ‘ಕೆರೆ ಸಂಜೀವಿನಿ’ ಯೋಜನೆಯನ್ನು ಘೋಷಿಸಿ, ₹ 100 ಕೋಟಿ ಅನುದಾನ ಮೀಸಲಿಟ್ಟಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಂಡಿತ್ತು. ಬರಪೀಡಿತ ತಾಲ್ಲೂಕುಗಳಲ್ಲಿ ಬರ ಕಾಮಗಾರಿಯಡಿ ಹೂಳೆತ್ತುವ ಕಾರ್ಯ ಮಾಡಿ, ರೈತರ ಕೈಗೆ ಕೆಲಸ ಕೊಡುವ ಜತೆಗೆ ಹೊಲಗಳಿಗೆ ಹೂಳಿನ ಮಣ್ಣನ್ನು ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿತ್ತು.

ಈ ಯೋಜನೆಯಡಿ 2017–18ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಶಿರಸಿ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳ 30 ಕೆರೆಗಳ ಅಭಿವೃದ್ಧಿಗೆ ₹ 40 ಲಕ್ಷ ಅನುದಾನ ಮಂಜೂರು ಆಗಿತ್ತು. ಅದರಂತೆ ತಾಲ್ಲೂಕುಗಳಲ್ಲಿ ಕೆರೆ ಕಾಮಗಾರಿಗಳು ಕಳೆದ ಏಪ್ರಿಲ್–ಮೇ ತಿಂಗಳುಗಳಲ್ಲಿ ನಡೆದಿವೆ. ಆದರೆ, ಮಂಜೂರು ಆಗಿರುವ ಅನುದಾನದಲ್ಲಿ ಸರ್ಕಾರದಿಂದ ₹ 28.25 ಲಕ್ಷ ಅನುದಾನ ಬಿಡುಗಡೆ ಬಾಕಿ ಉಳಿದಿದೆ.

ಕಾಮಗಾರಿ ಮಂಜೂರು ಆದ ಆರಂಭದಲ್ಲಿ ಅನುದಾನ ಬಿಡುಗಡೆಯಾಗಿದ್ದು ಬಿಟ್ಟರೆ, ಆನಂತರ ಅನುದಾನ ಬಂದಿಲ್ಲ. ಪುನಶ್ಚೇತನಗೊಳಿಸಿರುವ ಭೈರುಂಬೆ ಪಂಚಾಯ್ತಿಯ ಬೆಳಲೆ, ಬಿಸಲಕೊಪ್ಪ ಪಂಚಾಯ್ತಿಯ ಕಾಟೀಮನೆ ಹಾಗೂ ಉಲ್ಲಾಳ, ಸುಗಾವಿ ಪಂಚಾಯ್ತಿಯ ನವಣಗೇರಿ ಕೆರೆ ಕಾಮಗಾರಿಯ ಅನುದಾನ ಬಿಡುಗಡೆ ಆಗಬೇಕಾಗಿದೆ. ಈ ವರ್ಷ ಯೋಜನೆಯಡಿ ಹೊಸ ಕೆರೆ ಹೂಳೆತ್ತುವ ಆದೇಶ ಬಂದಿಲ್ಲ. ಹೊಸ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು. 

ಈ ಕುರಿತು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಸ್ಥಳೀಯ ಕಚೇರಿಯ ಎಂಜಿನಿಯರ್ ರಾಮಚಂದ್ರ ಗಾಂವಕರ ಅವರನ್ನು ಪ್ರಶ್ನಿಸಿದಾಗ, ‘ಕಳೆದ ಮಾರ್ಚ್‌ನಲ್ಲಿ ಕಾಮಗಾರಿ ನಡೆಸುವಂತೆ ಆದೇಶವಾಗಿತ್ತು. ಮಾರ್ಚ್‌ವರೆಗೆ ಕೆರೆಯಲ್ಲಿ ನೀರಿದ್ದ ಕಾರಣ, ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಿಸಿ, ಮೇನಲ್ಲಿ ಪೂರ್ಣಗೊಳಿಸಲಾಗಿದೆ’ ಎಂದರು.

**

ಸರ್ಕಾರದ ನಿರ್ದೇಶನದಂತೆ ಕಾಮಗಾರಿ ನಡೆಸಿ, ಬಿಲ್‌ ಅನ್ನು ಸಲ್ಲಿಸಿದ್ದೇವೆ. ಬಾಕಿ ಉಳಿದಿರುವ ಅನುದಾನ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ.
–ರಾಮಚಂದ್ರ ಗಾಂವಕರ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !