ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ | ಕೊರೋನಾದಿಂದ ಮದುಮಗ ಸಾವು: ಮದುವೆಗೆ ಹೋಗಿದ್ದವರಿಗೆ ತೀವ್ರ ಆತಂಕ

ಸೋಂಕು ಲಕ್ಷಣವಿದ್ದರೂ ಮಾಹಿತಿ ನೀಡದ ಯುವಕ: ಮಂಗಳೂರಿನಲ್ಲಿ ಕೊನೆಯುಸಿರು
Last Updated 1 ಜುಲೈ 2020, 13:52 IST
ಅಕ್ಷರ ಗಾತ್ರ

ಕಾರವಾರ:ಭಟ್ಕಳದಲ್ಲಿ ಜೂನ್ 25ರಂದು ಮದುವೆಯಾಗಿದ್ದ 25 ವರ್ಷದಯುವಕ, ಕೋವಿಡ್ 19ನಿಂದ ಮಂಗಳೂರಿನಲ್ಲಿ ಮಂಗಳವಾರಮೃತಪಟ್ಟಿದ್ದಾರೆ. ಹೀಗಾಗಿ ಅವರ ಮದುವೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಈಗ ಆತಂಕ ಮನೆ ಮಾಡಿದೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಆ ಯುವಕ ಮದುವೆ ಸಲುವಾಗಿ ಜೂನ್ 22ರಂದು ಭಟ್ಕಳದ ತಮ್ಮ ಕುಟುಂಬ ಮೂಲ ಮನೆಗೆ ಬಂದಿದ್ದರು. ಅವರ ಪಾಲಕರು ಮಂಗಳೂರಿನಲ್ಲಿ ನೆಲೆಸಿದ್ದಾರೆ.25ರಂದು ಮದುವೆ ಕಾರ್ಯ ಮುಗಿಸಿ 26ರಂದು ಅವರು ಮಂಗಳೂರಿಗೆ ತೆರಳಿದ್ದರು’ ಎಂದು ವಿವರಿಸಿದರು.

‘ಅಲ್ಲಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ, ಗಂಟಲುದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 30ರಂದು ಅದರ ವರದಿ ಬರುವ ಮೊದಲೇ ಮೃತಪಟ್ಟಿದ್ದಾರೆ. ಅವರು ಬೇರೆ ಜಿಲ್ಲೆಯಲ್ಲಿ ಮೃತಪಟ್ಟಿರುವ ಕಾರಣ ದಾಖಲೆಯಲ್ಲಿ ‘ಇತರ’ ಎಂದು ನಮೂದಿಸಲಾಗುವುದು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 31 ಜನರಿಗೆ ಈಗಾಗಲೇ ಕೋವಿಡ್ ದೃಢಪಟ್ಟಿದೆ. ಸುಮಾರು 70 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತಷ್ಟು ಜನರ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದರು.

‘ಅವರು ತಮಗೆ ಅನಾರೋಗ್ಯ ಇರುವ ಬಗ್ಗೆ ಮೊದಲೇ ತಿಳಿಸಿದ್ದರೆ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಬಹುದಿತ್ತು. ನಾಗರಿಕರು ತಮ್ಮ ಅನಾರೋಗ್ಯ ಸಮಸ್ಯೆಯನ್ನು ಮರೆಮಾಚದೇ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಸಲಹೆ ನೀಡಿದರು.

‘ಯಲ್ಲಾಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಹಿರಿಯ ಮಹಿಳೆಯುಕೋವಿಡ್‌ನಿಂದಾಗಿ ಮೃತಪಟ್ಟಿಲ್ಲ. ಸ್ನಾನಗೃಹದಲ್ಲಿ ಜಾರಿ ಬಿದ್ದಾಗ ಅವರಿಗೆ ಹೃದಯಸ್ತಂಭನವಾಗಿತ್ತು. ಅವರ ಗಂಟಲುದ್ರವದ ಪರೀಕ್ಷೆ ಮಾಡಿದಾಗ ಕೋವಿಡ್ 19 ದೃಢಪಟ್ಟಿದೆ’ ಎಂದು ಸ್ಪಷ್ಟಪಡಿಸಿದರು.

‘ಕ್ರಿಮ್ಸ್‌’ನಲ್ಲಿ 75 ಹಾಸಿಗೆಗಳ ಮತ್ತೊಂದು ವಾರ್ಡ್‌ ಅನ್ನು ಸಿದ್ಧಪಡಿಸಲಾಗುತ್ತಿದ್ದು, ರೋಗಲಕ್ಷಣ ರಹಿತ ಸೋಂಕಿತರನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಈಗಿನ ವಾರ್ಡಿನಲ್ಲಿರೋಗಲಕ್ಷಣ ಇರುವವರಿಗೆ ಕನಿಷ್ಠ 10 ಹಾಸಿಗೆಗಳು ಇರುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಕರಣ ದಾಖಲು:‘ಭಟ್ಕಳದಲ್ಲಿ ಮದುವೆಯಾದ ಯುವಕ ತಮಗೆ ರೋಗ ಲಕ್ಷಣಗಳಿದ್ದರೂ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಇತರರಿಗೂ ಸೋಂಕು ಹರಡಿದೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದರು.

ಪ್ರಾರ್ಥನಾ ಮಂದಿರ, ದೇವಸ್ಥಾನ, ಮಸೀದಿಗಳಲ್ಲಿ ಜನರು ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಇದನ್ನು ಪಾಲಿಸದಭಟ್ಕಳದ ಎರಡು ಮಸೀದಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT