ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟ–ಗುಡ್ಡಗಳಲ್ಲಿ ಕೀಬೋರ್ಡ್ ಕಲರವ !

ಲಾಕ್‌ಡೌನ್ ಕಾರಣಕ್ಕೆ ಹಳ್ಳಿಗೆ ಬಂದಿರುವ ಉದ್ಯೋಗಿಗಳಿಗೆ ಮರದ ನೆರಳೇ ಆಸರೆ
Last Updated 18 ಮೇ 2020, 19:30 IST
ಅಕ್ಷರ ಗಾತ್ರ

ಶಿರಸಿ: ಮಲೆನಾಡಿನ ಬೆಟ್ಟ–ಗುಡ್ಡಗಳಲ್ಲಿ ಈ ಬಾರಿ ಕಾಡು ಹಣ್ಣಿನ ಹುಡುಕಾಟಕ್ಕಿಂತ ನೆಟ್‌ವರ್ಕ್ ಹುಡುಕಾಟವೇ ಜೋರಾಗಿದೆ. ಹಳ್ಳಿ ಮಕ್ಕಳಿಗಿಂತ ಪೇಟೆಯ ಯುವಕ–ಯುವತಿಯರೇ ಕಾಡು–ಮೇಡಿನ ಅಲೆದಾಟದಲ್ಲಿ ಹೆಚ್ಚು ಕಾಣತೊಡಗಿದ್ದಾರೆ !

ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾದಾಗ ಮಹಾನಗರಗಳ ಬಾಡಿಗೆ ಮನೆಗೆ ಬೀಗ ಹಾಕಿ, ಹಳ್ಳಿಯ ಮೂಲಮನೆಗೆ ಸೇರಿರುವ ಮಹಾನಗರಗಳ ಉದ್ಯೋಗಿಗಳಿಗೆ ಈಗ ಮನೆಯೇ ಉದ್ಯೋಗದ ತಾಣ. ಬಹುತೇಕ ಎಲ್ಲ ಕಂಪನಿಗಳು ಮನೆಯಿಂದಲೇ ಕೆಲಸ (work from home)ಕ್ಕೆ ಅವಕಾಶ ನೀಡಿವೆ. ಹೀಗಾಗಿ, ಏರ್ ಕಂಡಿಷನ್ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಇವರು, ಈಗ ಹಳ್ಳಿಯಲ್ಲಿ ಬೆಟ್ಟದ ಮೇಲೇರಿ, ಮರದ ನೆರಳಿನ ಆಶ್ರಯದಲ್ಲಿ, ಗೋಣಿಚೀಲ ಹಾಸಿನ ಮೇಲೆ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಾರೆ.

‘ಗ್ರಾಮೀಣ ಪ್ರದೇಶದ ಬಹುತೇಕ ಕಡೆಗಳಲ್ಲಿ ಸ್ಥಿರ ದೂರವಾಣಿ ಸಂಪರ್ಕ ಸಮರ್ಪಕವಾಗಿಲ್ಲ. ಸ್ಥಿರ ದೂರವಾಣಿ ಇದ್ದರೆ ಬ್ರಾಡ್‌ಬ್ಯಾಂಡ್ ಸಂಪರ್ಕ ಸಿಗುತ್ತಿತ್ತು. ಹೀಗಾಗಿ, ನೆಟ್‌ವರ್ಕ್ ಹುಡುಕಿ ಬೆಟ್ಟಕ್ಕೆ ಹೋಗುವುದು ಅನಿವಾರ್ಯ. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಬೇಕು. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ತೋರಬೇಕು’ ಎನ್ನುತ್ತಾರೆ ಮನೆಯಿಂದ ಕೆಲಸ ನಿರ್ವಹಿಸುತ್ತಿರುವ ಚಿನ್ಮಯ ಹೆಗಡೆ, ಶ್ರೀಧರ ಕಿಚ್ಚಿಕೇರಿ.

‘ಅಂತರ್ಜಾಲ ಸಂಪರ್ಕ ಹುಡುಕಿಕೊಂಡು ಮನೆಯಿಂದ 2–3 ಕಿ.ಮೀ ದೂರದವರೆಗೆ ಹೋಗುವವರೂ ಇದ್ದಾರೆ. ಇಂಟರ್‌ನೆಟ್ ಈಗ ಮೂಲ ಅಗತ್ಯಗಳಲ್ಲಿ ಒಂದು. ಹಳ್ಳಿಗಳಲ್ಲಿ ಈ ಸೌಲಭ್ಯವಿದ್ದರೆ, ಕೃಷಿ ಜೊತೆಗೆ ಉದ್ಯೋಗ ಮುಂದುವರಿಸಬಹುದು. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಸಕ್ತಿಯಿದ್ದರೂ ಸೌಕರ್ಯಗಳ ಕೊರತೆ ಅನಿವಾರ್ಯವಾಗಿ ಅವರನ್ನು ನಗರಕ್ಕೆ ದೂಡುತ್ತಿದೆ’ ಎನ್ನುತ್ತಾರೆ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ರಾಜೀವ ಅಂದಳ್ಳಿ.

ಲ್ಯಾಪ್‌ಟಾಪ್‌ ಬೇಡಿಕೆ ಜೋರು:

ಅಂದಾಜಿನ ಪ್ರಕಾರ ಘಟ್ಟದ ಮೇಲಿನ ಭಾಗದಲ್ಲಿ 5000ಕ್ಕೂ ಹೆಚ್ಚು ಉದ್ಯೋಗಿಗಳು, ವಿದ್ಯಾರ್ಥಿಗಳು ಹಳ್ಳಿಗೆ ಮರಳಿದ್ದಾರೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು, ಉದ್ಯೋಗಿಗಳಿಗೆ ಮನೆಯಿಂದ ಕೆಲಸವಿರುವ ಕಾರಣ ಅಂತರ್ಜಾಲದ ಬಳಕೆ ಕಳೆದ ಒಂದೂವರೆ ತಿಂಗಳಿನಿಂದ ಈ ಭಾಗದಲ್ಲಿ ಹೆಚ್ಚಾಗಿದೆ.

ಲಾಕ್‌ಡೌನ್‌ ಘೋಷಣೆಯಾದಾಗ ಅನೇಕರು ಗಡಿಬಿಡಿಯಲ್ಲಿ ಮನೆ ಸೇರಿದರು. ಲ್ಯಾಪ್‌ಟಾಪ್ ಬಿಟ್ಟು ಬಂದವರು, ಸ್ಥಳೀಯವಾಗಿ ಲಭ್ಯವಿರುವ ಕಂಪ್ಯೂಟರ್ ಹಾರ್ಡ್‌ವೇರ್‌ ಕೇಂದ್ರಗಳಿಗೆ ಮೊರೆ ಹೋದರು. ನಗರದಲ್ಲಿರುವ 25ಕ್ಕೂ ಹೆಚ್ಚು ಕಂಪ್ಯೂಟರ್ ಹಾರ್ಡ್‌ವೇರ್‌ ಕೇಂದ್ರಗಳಿಂದ 200ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು ಮಾರಾಟವಾಗಿರುವ ಅಂದಾಜಿದೆ ಎನ್ನುತ್ತಾರೆ ಹಾರ್ಡ್‌ವೇರ್ ಅಂಗಡಿಯ ಸಿಬ್ಬಂದಿಯೊಬ್ಬರು.

‘ಮರುಬಳಕೆಯ ಲ್ಯಾಪ್‌ಟಾಪ್, ಸಿಗ್ನಲ್‌ಗಾಗಿ ಬೂಸ್ಟರ್, ಇನ್ವರ್ಟರ್ ಬ್ಯಾಟರಿ, ಕಂಪ್ಯೂಟರ್ ಬೇಡಿಕೆ ಹೆಚ್ಚಿದೆ. ಚೀನಾದಿಂದ ಬರುವ ಹಾರ್ಡ್‌ವೇರ್ ಸಾಮಗ್ರಿಗಳು ಬಂದಾಗಿರುವುದರಿಂದ, ಸಾಮಗ್ರಿಗಳ ಕೊರತೆ ಉಂಟಾಗಿದೆ’ ಎನ್ನುತ್ತಾರೆ ವಿಂಟೆಕ್ ಕಂಪ್ಯೂಟರ್ಸ್ ಮಾಲೀಕ ಅಶೋಕ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT