ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯಕ್ಷಾಮ | ಕಾರ್ಗಿಲ್ ಮೀನುಗಳ ಹೊಟ್ಟೆಯಲ್ಲಿ ‘ಝೂಪ್‌ಲ್ಯಾಂಕ್ಟನ್‌’ ಕುರುಹು

100ಕ್ಕೂ ಹೆಚ್ಚು ಮಾದರಿಗಳ ಅಧ್ಯಯನದಲ್ಲಿ ಪತ್ತೆಯಾಗದ ಇತರ ಮೀನುಗಳ ಅವಯವ
Last Updated 6 ನವೆಂಬರ್ 2019, 3:46 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದ ಕರಾವಳಿಯಲ್ಲಿ ಕಳೆದ ತಿಂಗಳು ಭಾರಿ ಸುದ್ದಿ ಮಾಡಿದ್ದ ‘ಕಾರ್ಗಿಲ್ ಮೀನು’ಗಳು (ಟ್ರಿಗ್ಗರ್ ಫಿಶ್), ಇತರ ಜಾತಿಯ ಮೀನುಗಳನ್ನು ಬೇಟೆಯಾಡಿಲ್ಲ. ಅವುಗಳ ಹೊಟ್ಟೆಯಲ್ಲಿ‘ಝೂಪ್‌ಲ್ಯಾಂಕ್ಟನ್‌’ಗಳ ಕುರುಹುಗಳು ಅಧ್ಯಯನದ ವೇಳೆ ಕಂಡುಬಂದಿವೆ. ಹಾಗಾಗಿ ಕಾರ್ಗಿಲ್ ಮೀನುಗಳಿಂದ ಮತ್ಸ್ಯಕ್ಷಾಮ ಕಾಣಿಸಿಕೊಂಡಿದೆ ಎಂಬುದಕ್ಕೆ ಆಧಾರವಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಝೂಪ್‌ಲ್ಯಾಂಕ್ಟನ್‌’ಗಳು ಸಮುದ್ರದಲ್ಲಿರುವ ಸೂಕ್ಷ್ಮ ಜೀವಿಗಳು. ಅವುಗಳುಮೀನುಗಾರರುವಾಣಿಜ್ಯ ಉದ್ದೇಶಕ್ಕೆ ಹಿಡಿಯುವ ತಾರ್ಲೆ, ಬಾಂಗ್ಡೆ ಮುಂತಾದ ಮೀನುಗಳ ಪ್ರಧಾನ ಆಹಾರವಾಗಿದೆ. ಕಾರ್ಗಿಲ್ ಮೀನು ಕೂಡ ಈ ಸಣ್ಣ ಜೀವಿಗಳನ್ನು ತಿನ್ನುತ್ತದೆ. ನಾವು ಅಧ್ಯಯನಕ್ಕೆಂದು ಪರಿಶೀಲಿಸಿದ 100ಕ್ಕೂ ಹೆಚ್ಚು ಮೀನುಗಳ ಹೊಟ್ಟೆಯಲ್ಲೂ‘ಝೂಪ್‌ಲ್ಯಾಂಕ್ಟನ್‌’ಗಳ ಕುರುಹೇ ಕಂಡುಬಂದಿದೆ. ಇದರಿಂದ ಕಾರ್ಗಿಲ್ ಮೀನುಗಳು ಕಪ್ಪೆ ಬೊಂಡಾಸ್‌ನಂತಹ ಮೀನುಗಳನ್ನು ಬೇಟೆಯಾಡಿಲ್ಲ ಎಂದು ಸ್ಪಷ್ಟವಾಗುತ್ತದೆ’ ಎಂದು ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಾರ್ಗಿಲ್ ಮೀನುಗಳುಕಪ್ಪೆ ಬೊಂಡಾಸ್ ಮೀನುಗಳನ್ನುಬೇಟೆಯಾಡಿ ತಿನ್ನುತ್ತವೆ. ಈ ಸಲ ಭಾರಿ ಸಂಖ್ಯೆಯಲ್ಲಿ ಕಾರ್ಗಿಲ್ ಮೀನುಗಳು ಕಾಣಿಸಿಕೊಂಡ ಕಾರಣ ಮತ್ಸ್ಯಕ್ಷಾಮಉಂಟಾಗಿದೆ ಎಂದು ಕರಾವಳಿಯಲ್ಲಿ ಚರ್ಚೆಯಾಗುತ್ತಿತ್ತು. ಆದರೆ, ಮೀನಿನ ಕೊರತೆಗೆ ಬೇರೆಯೇ ಕಾರಣಗಳಿರಬಹುದು ಎಂದುಅವರುಊಹಿಸಿದ್ದಾರೆ.

‘ನಮ್ಮ ಅಧ್ಯಯನದ ವೇಳೆಕಾರ್ಗಿಲ್ ಮೀನುಗಳ ಹೊಟ್ಟೆಯಲ್ಲಿ ಇತರ ಜಾತಿಯ ಮೀನುಗಳ ಎಲುಬು ಅಥವಾ ಕಿವಿರು ಪತ್ತೆಯಾಗಿಲ್ಲ. ಒಂದುವೇಳೆ ಅವು ಬೊಂಡಾಸ್‌ನಂತಹ ಮೀನುಗಳನ್ನು ತಿಂದಿದ್ದರೆ ಜೀರ್ಣವಾಗದ ವಸ್ತುಗಳು ಅವುಗಳ ಹೊಟ್ಟೆಯಲ್ಲಿ ಉಳಿದುಕೊಳ್ಳುತ್ತಿತ್ತು. ಅಂತಹ ಯಾವುದೇ ಅಂಶಗಳೂ ಕಾಣಿಸಿಲ್ಲ’ ಎಂದು ಮಾಹಿತಿ ನೀಡಿದರು.

ಸಮುದ್ರದಲ್ಲಿ ತೂಫಾನ್: ‘ಸಮುದ್ರದಲ್ಲಿ ಈಗ ತಳಭಾಗದ ನೀರು ಮೇಲೆ ಬಂದು, ಮೇಲ್ಭಾಗದ ನೀರು ಕೆಳಗೆ (ತೂಫಾನ್ ಅಥವಾ ಅಪ್‌ವೆ‌ಲಿಂಗ್ ಪ್ರೊಸೆಸ್) ಹೋಗುತ್ತಿರಬಹುದು. ಇದರಿಂದ ಮೇಲ್ಭಾಗದಲ್ಲಿರುವ ಪೌಷ್ಟಿಕಾಂಶಗಳು ಕಡಲಿನ ತಳಭಾಗಕ್ಕೆ ಸೇರಿ ಅಲ್ಲಿನ ಆಹಾರ ಸರಪಳಿ ಬಲಗೊಳ್ಳುತ್ತದೆ. ಇದೇ ಕಾರಣದಿಂದ ಕಾರ್ಗಿಲ್ ಮೀನುಗಳು ಆಹಾರ ಹುಡುಕಿ ಬಂದಿರಬಹುದು ಎಂದು ನಮ್ಮ ಊಹೆಯಾಗಿದೆ. ಈ ನಿಟ್ಟಿನಲ್ಲಿ ಉಪಗ್ರಹದಿಂದ ಪಡೆದ ಚಿತ್ರಗಳನ್ನು ಆಧರಿಸಿ ಇನ್ನಷ್ಟು ಅಧ್ಯಯನ ಮಾಡಲಿದ್ದೇವೆ’ ಎಂದರು.

ಕಾರ್ಗಿಲ್’ ಹೆಚ್ಚಲು ಕಾರಣ?: ‘ಸಮುದ್ರ ಮೀನುಗಾರಿಕೆಯಲ್ಲಿ ವಾಣಿಜ್ಯ ದೃಷ್ಟಿಯಿಂದ ಅನುಕೂಲಕರವಾದ ನಿರ್ದಿಷ್ಟ ಪ್ರಭೇದದ ಮೀನುಗಳನ್ನು ಮಾತ್ರ ಬೇಟೆಯಾಡುವುದರಿಂದ ಅವುಗಳ ಸಂತತಿಕ್ಷೀಣಿಸಿದೆ.ಹಲವು ಸಮಯದಿಂದ ಕಾರ್ಗಿಲ್ ಮೀನನ್ನು ದೊಡ್ಡ ಪ್ರಮಾಣದಲ್ಲಿ ಹಿಡಿದಿರಲಿಲ್ಲ. ಇದರಿಂದ ಅವುಗಳ ಸಂಖ್ಯೆ ವೃದ್ಧಿಸಿರಬಹುದು. 2008–09ರಲ್ಲಿ ಮಂಗಳೂರಿನಲ್ಲಿ ಅವು ಬಲೆಗೆ ಬಿದ್ದಾಗ ಪುನಃ ಸಮುದ್ರಕ್ಕೇ ಬಿಡಲಾಗಿತ್ತು ಎಂದೂಉಲ್ಲೇಖವಿದೆ’ ಎಂದು ಅವರು ಮಾಹಿತಿ ನೀಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT