ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಜಿಲ್ಲೆಗೆ ವಿನಾಯ್ತಿ ನೀಡಲು ಸರ್ಕಾರಕ್ಕೆ ಪ್ರಸ್ತಾವ

ಖಾಸಗಿ ಪ್ರೌಢಶಾಲೆಗಳಲ್ಲಿ ಕನಿಷ್ಠ 75 ವಿದ್ಯಾರ್ಥಿಗಳು ಇರಬೇಕೆಂಬ ನಿಯಮ
Last Updated 28 ಜನವರಿ 2020, 12:34 IST
ಅಕ್ಷರ ಗಾತ್ರ

ಕಾರವಾರ:‘ಮಲೆನಾಡು ಜಿಲ್ಲೆಗಳಲ್ಲಿ ಕನಿಷ್ಠ 30 ವಿದ್ಯಾರ್ಥಿಗಳಿದ್ದರೆ ಖಾಸಗಿ ಪ್ರೌಢಶಾಲೆಗಳನ್ನು ನಡೆಸಲು ಅನುಮತಿ ನೀಡಬೇಕು’ ಎಂಬ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಠರಾವು ಸ್ವೀಕರಿಸಲಾಯಿತು.

ಅಧ್ಯಕ್ಷೆ ಜಯಶ್ರೀ ಮೊಗೇರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ವಿಷಯ ಪ್ರಸ್ತಾಪಿಸಿದರು.

‘ಈಗ ಖಾಸಗಿ ಪ್ರೌಢಶಾಲೆಗಳಿಗೆ ಕನಿಷ್ಠ 75ವಿದ್ಯಾರ್ಥಿಗಳು ಇರಬೇಕು ಎಂಬ ನಿಯಮವಿದೆ.ಇದರಿಂದ ಗ್ರಾಮೀಣ ಭಾಗಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ತೊಂದರೆಯಾಗುತ್ತಿದೆ. ಶಿರಸಿ ತಾಲ್ಲೂಕಿನಲ್ಲೇ ನಾಲ್ಕೈದು ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಅವರು ಮೂಲಸೌಕರ್ಯಕ್ಕೆ ಹೂಡಿದ ಹಣವೆಲ್ಲ ವ್ಯರ್ಥವಾಗುತ್ತದೆ. ಆದ್ದರಿಂದ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು. ಇದರಿಂದ ಹಲವು ಶಾಲೆಗಳ ಅಸ್ತಿತ್ವ ಉಳಿಯುತ್ತದೆ’ ಎಂದು ಪ್ರತಿಪಾದಿಸಿದರು.

ಅವರಿಗೆ ಸದಸ್ಯ ಬಸವರಾಜ ದೊಡ್ಮನಿ ದನಿಗೂಡಿಸಿ, ‘ಸರ್ಕಾರಿ ಶಾಲೆಗಳಿಗೆ ಇಲ್ಲದ ಈ ನಿಯಮ ಖಾಸಗಿ ಶಾಲೆಗಳಿಗೆ ಯಾಕೆ’ ಎಂದು ಪ್ರಶ್ನಿಸಿದರು.

ಸದಸ್ಯೆ ಪುಷ್ಪಾ ನಾಯ್ಕ ಮಾತನಾಡಿ, ‘ಹೊನ್ನಾವರ ತಾಲ್ಲೂಕಿನ ಚಿತ್ತಾರ ಸರ್ಕಾರಿ ಪ್ರೌಢಶಾಲೆಯ ಕಟ್ಟಡಕ್ಕೆ ಮೂರು ವರ್ಷಗಳಷ್ಟೇ ಕಳೆದಿವೆ. ಅದರ ಗೋಡೆಗಳು ಈಗಲೇ ಬಿರುಕು ಬಿಟ್ಟಿವೆ. ಕೊಠಡಿಗಳಲ್ಲಿ ನೆಲ ಹಾಳಾಗಿದ್ದು, ಮಕ್ಕಳು ಕೂರಲಾಗುತ್ತಿಲ್ಲ. ಬಾಗಿಲುಗಳು ಹಾಳಾಗಿವೆ. ಒಟ್ಟಿನಲ್ಲಿ ಕಟ್ಟಡದ ಕಾಮಗಾರಿ ಕಳಪೆಯಾಗಿದೆ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಕಟ್ಟಡದ ಗುತ್ತಿಗೆ ಪಡೆದ ಏಜೆನ್ಸಿಯ ಬಗ್ಗೆ ವರದಿ ಕೊಟ್ಟು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

ಇದೇವೇಳೆ ಪುಷ್ಪಾ ನಾಯ್ಕ ಮಾತನಾಡಿ, ‘ದೈಹಿಕ ಶಿಕ್ಷಣ ಶಿಕ್ಷಕರಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಮಾದರಿಯಲ್ಲಿ ಕಾರವಾರ ಜಿಲ್ಲೆಯಲ್ಲಿ ಬಡ್ತಿ ನೀಡುತ್ತಿಲ್ಲ’ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ರೋಶನ್, ಖಾಲಿ ಇರುವ ಹುದ್ದೆಗಳು, ಮಕ್ಕಳ ಸಂಖ್ಯೆ ಹಾಗೂ ಬಡ್ತಿಗೆ ಕಾಯುತ್ತಿರುವ ಶಿಕ್ಷಕರ ಪಟ್ಟಿಯನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಆರೋಗ್ಯ ಇಲಾಖೆಯ ಬಗ್ಗೆ ಚರ್ಚಿಸಿದ ಸದಸ್ಯರು, ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸ್ಟಾಫ್ ನರ್ಸ್‌ಗಳಿಲ್ಲ ಎಂದು ತಿಳಿಸಿದರು. ಈ ಬಗ್ಗೆಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ ಕುಮಾರ್, ‘ಜಿಲ್ಲೆಯಲ್ಲಿ ಒಟ್ಟು 37 ತಜ್ಞ ವೈದ್ಯರ ಹುದ್ದೆಗಳು ಖಾಲಿಯಿವೆ. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ವೈದ್ಯರು ಸಿಗುತ್ತಿಲ್ಲ. ಸರ್ಕಾರದ ಕೆಲವು ನಿಯಮಾವಳಿಗಳಿಂದಲೂ ತೊಡಕಾಗಿದೆ’ ಎಂದರು.

ಸಿದ್ದಾಪುರ ತಾಲ್ಲೂಕಿನ ಬಿಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಹಾಗೂ ಕ್ಯಾದಗಿಯಲ್ಲಿ ವೈದ್ಯರಿಲ್ಲ. ಮಂಗನಕಾಯಿಲೆ ಹೆಚ್ಚಿರುವ ಈ ಪ್ರದೇಶದಲ್ಲಿ ಗಮನ ಹರಿಸಬೇಕು ಎಂದು ಸದಸ್ಯ ನಾಗರಾಜ ನಾಯ್ಕ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ರೋಶನ್, ಅಲ್ಲಿಗೆ ಪರ್ಯಾಯ ವ್ಯವಸ್ಥೆ ಆಗುವ ತನಕ ಸಮೀಪದ ಆರೋಗ್ಯ ಕೇಂದ್ರದಿಂದ ಪ್ರಭಾರ ನೇಮಿಸುವಂತೆ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಕೈಗಾ ವಿಸ್ತರಣೆಗೆ ವಿರೋಧ:ಕೈಗಾ ಅಣುವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆ ಕುರಿತು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು. ಸ್ಥಾವರದ ವಿಸ್ತರಣೆಯಿಂದ ಪರಿಸರಕ್ಕೆ, ಸ್ಥಳೀಯರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಯೋಜನೆಯನ್ನು ಕೈಬಿಡಬೇಕು ಎಂದು ಸರ್ವ ಸದಸ್ಯರೂ ಒತ್ತಾಯಿಸಿ ಠರಾವು ಸ್ವೀಕರಿಸಲಾಯಿತು.

ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂಜಯ ಹಣಬರ, ಜಯಮ್ಮ ಕೃಷ್ಣ ಹಿರಳ್ಳಿ, ರತ್ನಾಕರ ನಾಯ್ಕ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT