ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಆಡಳಿತದಲ್ಲಿ ಪತಿಯ ದರ್ಬಾರು!

ಆಡಳಿತದಲ್ಲಿ ಹಸ್ತಕ್ಷೇಪ: ವಿಳಂಬ ಮಾಡದೇ ಮಾಹಿತಿ ನೀಡುವಂತೆ ಜಿ.ಪಂ. ಸಿಇಒ ಸುತ್ತೋಲೆ
Last Updated 7 ಡಿಸೆಂಬರ್ 2021, 15:15 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದಕ್ಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದು ಪತ್ನಿ. ಆದರೆ, ಅಲ್ಲಿ ದರ್ಬಾರು ನಡೆಸುವುದು ಅವರ ಪತಿ. ಮತ್ತೊಂದು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯೆಯಾಗಿ ಅಮ್ಮ ಆಯ್ಕೆಯಾಗಿದ್ದರೆ, ಅಲ್ಲಿ ಕೆಲಸವಾಗಲು ಮಗನ ಅನುಮತಿಯೇ ಬೇಕು.

ಆಡಳಿತದಲ್ಲಿ ಹಸ್ತಕ್ಷೇಪ ಆಗುತ್ತಿರುವ ಇಂತಹ ಹಲವು ಉದಾಹರಣೆಗಳು ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಂಡುಬರುತ್ತಿವೆ. ಪತ್ನಿ, ಅಮ್ಮ ಕೇವಲ ಹೆಸರಿಗೆ ಮಾತ್ರ ಜನಪ್ರತಿನಿಧಿಯಾಗಿದ್ದರೆ, ಅವರ ಕುಟುಂಬದ ಸದಸ್ಯರದ್ದೇ ಕಾರು
ಬಾರು ಜೋರಾಗಿದೆ. ಯಾವುದೇ ಕೆಲಸ, ಶಿಫಾರಸು ಅಥವಾ ಯಾವುದಾದರೂ ಪತ್ರಕ್ಕೆ ಸಹಿ ಬೇಕೆಂದು ಕರೆ ಮಾಡಿದರೂ ಮಾತನಾಡಿ ವಿಚಾರಿಸುವವರು ಮನೆ ಮಂದಿಯೇ ಎಂಬುದು ಸಾಮಾನ್ಯ ದೂರಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿರುವ ಕಾರಣ ಹಿರಿಯ ಅಧಿಕಾರಿಗಳೂ ಎಚ್ಚೆತ್ತುಕೊಂಡಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ತಿಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಎಲ್ಲ ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮಂಗಳವಾರ ಸುತ್ತೋಲೆ ರವಾನಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ?: ‘ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಸದಸ್ಯರ ಪರವಾಗಿ ಅವರ ಪತಿ ಹಾಗೂ ಕುಟುಂಬಸ್ಥರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಸಾರ್ವಜನಿಕರಿಂದ ತಿಳಿದುಬಂದಿದೆ. ಅಲ್ಲದೇ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಅನುಪಸ್ಥಿತಿಯಲ್ಲಿ ಅವರ ಪತಿ ಹಾಗೂ ಅವರ ಕುಟುಂಬದ ಸದಸ್ಯರು, ಜಿಲ್ಲಾ ಪಂಚಾಯಿತಿ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಆಗಲೂ ಅವರೇ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರೆಂದು ತಿಳಿಸಿರುವುದನ್ನು ಸಹ ಗಮನಿಸಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

‘ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಜನಪ್ರತಿನಿಧಿಗಳ ಪರವಾಗಿ ಪತಿಯರಾಗಲೀ ಅಥವಾ ಅವರ ಕುಟುಂಬದ ಸದಸ್ಯರಾಗಲೀ ಕಾರ್ಯ ನಿರ್ವಹಿಸುವಂತಿಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ನಡೆಸುವುದು ಕಾನೂನು ಬಾಹಿರವಾಗಿದೆ’ ಎಂದು ತಿಳಿಸಲಾಗಿದೆ.

‘ಗ್ರಾಮ ಪಂಚಾಯಿತಿಗಳ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸಂಬಂಧಿಕರು ಹಸ್ತಕ್ಷೇಪ ನಡೆಸಿದರೆ ಅವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43 ಎ ಮತ್ತು ಪ್ರಕರಣ 48 (4) ಅಡಿಯಲ್ಲಿ ಅನ್ವಯವಾಗುವ ನಿಯಮಗಳಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ. ‘ಅಂತಹ ಹಸ್ತಕ್ಷೇಪ ಪ್ರಕರಣಗಳು ಕಂಡುಬಂದರೆ ವಿಳಂಬ ಮಾಡದೇ ಸೂಕ್ತ ಶಿಫಾರಸಿನೊಡನೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.

ನಗರಸಭೆಯಲ್ಲೂ ಇದೇ ಸ್ಥಿತಿ!:

ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಮಹಿಳೆಯರು ಆಯ್ಕೆಯಾಗಿರುವ ಬಹುತೇಕ ವಾರ್ಡ್‌ಗಳಲ್ಲಿ ಏನೇ ಕೆಲಸವಾಗಬೇಕಿದ್ದರೂ ಅವರ ಪತಿ ಅಥವಾ ಮಗನನ್ನು ಕೇಳುವಂಥ ಸ್ಥಿತಿಯಿದೆ ಎಂಬ ದೂರುಗಳಿವೆ.

‘ರಸ್ತೆಗೆ ಕಾಂಕ್ರೀಟ್ ಹಾಕಿಸುವುದರಿಂದ ಮೊದಲಾಗಿ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿನ್ಯಾಸದವರೆಗೂ ಗಂಡಂದಿರೇ ನಿರ್ಧಾರ ಮಾಡುತ್ತಾರೆ. ಪತ್ನಿಯ ಹೆಸರಿನಲ್ಲಿ ಗಂಡ ಪರೋಕ್ಷ ಆಡಳಿತ ನಡೆಸುವುದಾದರೆ ಮಹಿಳಾ ಪ್ರಾತಿನಿಧ್ಯ, ಮೀಸಲಾತಿಗೆ ಏನರ್ಥ ಬಂತು? ಆಯ್ಕೆಯಾದ ಮಹಿಳೆಗೆ ಆಡಳಿತದ ಅನುಭವ ಇಲ್ಲದಿದ್ದರೆ ಕೇಳಿ ತಿಳಿದುಕೊಳ್ಳಬೇಕು. ಅದು ಹೊರತಾಗಿ ತನ್ನ ಅಧಿಕಾರವನ್ನೇ ಪರೋಕ್ಷವಾಗಿ ಹಸ್ತಾಂತರಿಸುವುದು ಸರಿಯಲ್ಲ’ ಎನ್ನುತ್ತಾರೆ ಕಾರವಾರದ ರಮೇಶ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT