ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನಕ್ಕೆ ತರದೇ ಕಾಮಗಾರಿ; ಆಕ್ರೋಶ

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಮುಗಿಬಿದ್ದ ಜಿ.ಪಂ. ಸದಸ್ಯರು
Last Updated 18 ಜೂನ್ 2019, 12:11 IST
ಅಕ್ಷರ ಗಾತ್ರ

ಕಾರವಾರ:‘ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳದಿದ್ದರೂ ಬಿಲ್ ಮಾಡಲಾಗುತ್ತಿದೆ. ನಮ್ಮನ್ನು ಕೇಳದೇ ಕೆಲಸ ಕೈಗೊಳ್ಳುತ್ತಾರೆ. ಇದು ಹೀಗೇ ಮುಂದುವರಿದರೆ ಜಿಲ್ಲಾ ಪಂಚಾಯ್ತಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ...’

ಜಿಲ್ಲಾ ಪಂಚಾಯ್ತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರುಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಹೀಗೆ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಸದಸ್ಯರಾದ ರೂಪಾ ಬುರುನಮನೆ, ‘ರಾಷ್ಟ್ರೀಯ ಕುಡಿಯುವ ನೀರು ಯೋಜನೆಯಡಿ ಶಿರಳಗಿಯಲ್ಲಿಕೊರೆದ ಕೊಳವೆಬಾವಿಯಲ್ಲಿ ನೀರು ಸಿಗಲಿಲ್ಲ. ₹ 5 ಲಕ್ಷ ಅನುದಾನವಿದ್ದರೂ ಬೇರೆ ಕಡೆಕಾಮಗಾರಿ ಕೈಗೊಳ್ಳಲಿಲ್ಲ’ ಎಂದು ಆಕ್ಷೇಪಿಸಿದರು.ಸದಸ್ಯೆ ಶ್ರುತಿ ಹೆಗಡೆ ಕೂಡ ಅವರ ಮಾತನ್ನು ಬೆಂಬಲಿಸಿದರು.

ಇದೇವೇಳೆ ಮಾತನಾಡಿದ ಸದಸ್ಯ ಶಿವಾನಂದ ಹೆಗಡೆ, ‘ಕಡತೋಕಾದಲ್ಲಿ ಬಾಂದಾರ ನಿರ್ಮಾಣವಾಗದಿದ್ದರೂ ಬಿಲ್ ಮಾಡಲಾಗಿದೆ. ಹಾಗಿದ್ದರೆ ಹಣ ಎಲ್ಲಿಗೆ ಹೋಗುತ್ತಿದೆ. ಈ ಬಗ್ಗೆ ನಾನು ಆರು ತಿಂಗಳಿನಿಂದ ಕೇಳುತ್ತಿದ್ದರೂ ಉತ್ತರ ಸಿಗುತ್ತಿಲ್ಲ. ಇದರಲ್ಲಿ ಭ್ರಷ್ಟಾಚಾರ ಆಗಿದೆ’ ಎಂದುಆರೋಪಿಸಿದರು.

ಈಬಗ್ಗೆಪ್ರತಿಕ್ರಿಯಿಸಿದ ಇಲಾಖೆಯ ಇಇ ಕಿರಣ್ ಹಾಗೂ ಎಇಇ ಮನೋಹರ.ಟಿ.ಕಳಸ್‘ನಾವು ಇತ್ತೀಚಿಗಷ್ಟೇ ಅಧಿಕಾರಿ ವಹಿಸಿಕೊಂಡಿದ್ದೇವೆ’ ಎಂದರು. ಇದರಿಂದ ಕೆರಳಿದ ಹಲವು ಸದಸ್ಯರುವಾಗ್ದಾಳಿ ನಡೆಸಿದರು. ‘ಅದು ನಮಗೆ ಸಂಬಂಧವಿಲ್ಲ. ಮಾಹಿತಿ ನೀಡಬೇಕು’ ಎಂದುಆಗ್ರಹಿಸಿದರು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರತಿಕ್ರಿಯಿಸಿ, ‘ಜಿಲ್ಲಾ ಪಂಚಾಯ್ತಿ ಸದಸ್ಯರ ಗಮನಕ್ಕೆ ತರದೇಕಾಮಗಾರಿ ಮಾಡಬಾರದು. ಇದು ಕೊನೆಯ ಎಚ್ಚರಿಕೆ’ ಎಂದು ಕಾರ್ಯಪಾಲಕ ಎಂಜಿನಿಯರ್‌ಗಳಿಗೆಎಚ್ಚರಿಕೆ ನೀಡಿದರು.

ಸಭೆಯ ಆರಂಭದಲ್ಲೇ ಮಾತನಾಡಿದ ಸದಸ್ಯ ಆಲ್ಬರ್ಟ್ ಡಿಕೋಸ್ತ, ‘ನರೇಗಾ ಯೋಜನೆಯಲ್ಲಿ ಭಟ್ಕಳಕ್ಕೆ 30:54 ಯೋಜನೆಯಡಿ ₹ 14.5 ಲಕ್ಷ ಪರಿವರ್ತಿತ ನಿಧಿ ಬಂದಿತ್ತು. ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ. ಆದರೆ, ಅನುಪಾಲನಾ ವರದಿಯಲ್ಲಿ ಎಲ್ಲವೂ ಪೂರ್ಣಗೊಂಡಿದ್ದು ಬಿಲ್ ಪಾವತಿಸಲಾಗಿದೆ ಎಂದು ತಿಳಿಸಲಾಗಿದೆ’ ಎಂದು ಆಕ್ಷೇಪಿಸಿದರು. ಸದಸ್ಯೆ ಪುಷ್ಪಾ ನಾಯ್ಕ ಧ್ವನಿಗೂಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ರೋಶನ್, ಎರಡು ದಿನಗಳಲ್ಲಿ ಮಾನವ ದಿನಗಳನ್ನು ಸೃಜಿಸಿ ವರದಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಯಾವ ಮಾನದಂಡ?: ‘ಸರ್ಕಾರದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವಾಗ ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ? ಈಅಧಿಕಾರಿಗಳನ್ನು ಕೇಳಿದರೆ ಮಾಹಿತಿಯಿಲ್ಲ ಎನ್ನುತ್ತಿದ್ದಾರೆ. ಹಳೆಯ ಶಾಲೆಗಳ ಗೋಡೆಗಳ ದುರಸ್ತಿ ವಿಚಾರದಲ್ಲೂ ತೀರಾ ಬೇಜವಾಬ್ದಾರಿ ಮಾಡಲಾಗುತ್ತಿದೆ’ ಎಂದು ಶಿವಾನಂದ ಹೆಗಡೆ ದೂರಿದರು.

ಸದಸ್ಯೆ ಉಷಾ ಹೆಗಡೆ ಮಾತನಾಡಿ, ‘ಶಾಲೆಗಳ ಕಿಟಕಿ ಬಾಗಿಲು ಗೆದ್ದಲು ಹಿಡಿದು ಹಾಳಾಗಿದ್ದರೂ ದುರಸ್ತಿಗೆ ಅನುದಾನ ಕೊಡುತ್ತಿಲ್ಲ. ಕೇವಲ ಚಾವಣಿಗಳ ದುರಸ್ತಿಗೆ ಅವಕಾಶವಿದೆ. ಮಕ್ಕಳಿಗೆ ನೆಲದಲ್ಲಿ ಕುಳಿತು ಊಟ ಮಾಡಲೂ ಆಗುತ್ತಿಲ್ಲ. ಹಾಗಾಗಿ ಪ್ರಕೃತಿ ವಿಕೋಪ ನಿಧಿಯಡಿ ಕಾಮಗಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಆಸ್ಪತ್ರೆಬೇಡಿಕೆಗೆಬೆಂಬಲ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಭಿಯಾನದ ವಿಚಾರವನ್ನು ಸದಸ್ಯ ಪ್ರದೀಪ ನಾಯಕ ಪ್ರಸ್ತಾಪಿಸಿದರು. ಈ ಸಂಬಂಧ ನಿರ್ಣಯತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ಕಡತ ವಿಲೇವಾರಿಗೆ ಸಪ್ತಾಹ:ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಕಡತಗಳ ವಿಲೇವಾರಿಗೆ ಸಪ್ತಾಹ ಆಚರಿಸುವುದಾಗಿ ಜಿ.ಪಂ. ಸಿಇಒ ಮೊಹಮ್ಮದ್ ರೋಶನ್ ತಿಳಿಸಿದರು.

‘ಇದರ ಜೊತೆಗೇ ಜಿಲ್ಲೆಯ ಎಲ್ಲ 11 ತಾಲ್ಲೂಕುಗಳಿಗೆ ಭೇಟಿ ನೀಡಲಾಗುವುದು. ಆದಷ್ಟು ಬೇಗ ಕಡತಗಳ ವಿಲೇವಾರಿ ನಮ್ಮ ಗುರಿಯಾಗಿದೆ’ ಎಂದರು.

ಮೇದಿನಿಗೆ ಭೇಟಿಯ ಭರವಸೆ:ಕುಮಟಾ ತಾಲ್ಲೂಕಿನ ಮೇದಿನಿ ಗ್ರಾಮದಲ್ಲಿ ಮೂಲ ಸೌಕರ್ಯವಿಲ್ಲದೇ ವೈವಾಹಿಕ ಸಂಬಂಧಗಳೂ ಬೆಳೆಯುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯಡಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಬೇಕು ಎಂದು ಸದಸ್ಯ ಗಜಾನನ ಪೈ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ರೋಶನ್,ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಾಕರ ನಾಯ್ಕ, ಸಂಜಯ ಹಣಬರ ಮತ್ತು ಜಯಮ್ಮ ಕೃಷ್ಣ ಹಿರೇಕೈ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT