ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕ್ರಿಯಾ ಯೋಜನೆ ವಿರುದ್ಧ ಅಸಮಾಧಾನ

ಸರಿಪಡಿಸುವಂತೆ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರ ಆಗ್ರಹ
Last Updated 27 ಜುಲೈ 2020, 14:49 IST
ಅಕ್ಷರ ಗಾತ್ರ

ಕಾರವಾರ: ‘ಹೊಸ ಶೌಚಗೃಹ ನಿರ್ಮಾಣಕ್ಕೆ,ಕಸ ವಿಲೇವಾರಿ ಘಟಕ ಸ್ಥಾಪನೆಗೆ 15ನೇ ಹಣಕಾಸು ಯೋಜನೆಯ ಅನುದಾನ ಬಳಕೆಯಲ್ಲಿ ಅವಕಾಶ ನೀಡಿಲ್ಲ. ಈಗ ರೂಪಿಸಲಾಗಿರುವ ಕ್ರಿಯಾಯೋಜನೆಯು ಸಂಪೂರ್ಣ ಅಸಮರ್ಪಕವಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ರೀತಿ ಆಕ್ರೋಶ ವ್ಯಕ್ತಪಡಿಸಿ, ‘ಕ್ರಿಯಾ ಯೋಜನೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನೂ ಮಾಡುತ್ತಿಲ್ಲ. ಜಿಲ್ಲಾ ಪಂಚಾಯ್ತಿ ಸಮಿತಿಗೆ ಬೆಲೆಯೇ ಇಲ್ಲದಂತಾಗಿದೆ. ಇದನ್ನು ಸರಿಪಡಿಸದಿದ್ದರೆ ಸಭಾತ್ಯಾಗ ಮಾಡುತ್ತೇವೆ’ ಎಂದು ಸದಸ್ಯರಾದ ಶಿವಾನಂದ ಹೆಗಡೆ, ಜಿ.ಎನ್.ಹೆಗಡೆ, ಪ್ರದೀಪ ನಾಯಕ, ಆಲ್ಬರ್ಟ್ ಡಿಕೋಸ್ತಾ, ಪುಷ್ಪಾ ನಾಯ್ಕ, ಗಜು ಪೈ ಸೇರಿದಂತೆ ಹಲವು ಸದಸ್ಯರು ಎಚ್ಚರಿಕೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ‘ತ್ಯಾಜ್ಯ ವಿಲೇವಾರಿ ಘಟಕ, ಶೌಚಗೃಹ ನಿರ್ಮಾಣ ಹಾಗೂಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಅವಕಾಶವಿಲ್ಲ. ಅವುಗಳನ್ನು ನಿರ್ಬಂಧ ರಹಿತ ಅನುದಾನದಲ್ಲಿ ನಿರ್ಮಿಸಬಹುದು’ ಎಂದರು.

‘ಜನಸಂಖ್ಯೆಗೆ ಅನುಗುಣವಾಗಿ 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗುತ್ತಿದೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಅನುಮೋದನೆಯಾದ ಕ್ರಿಯಾಯೋಜನೆಗಳನ್ನು ವೆಬ್‍ಸೈಟ್‍ಗೆ ಅಪ್‌ಲೋಡ್ ಮಾಡಲಾಗುತ್ತದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಅದನ್ನು ಅನುಮೋದಿಸುತ್ತದೆ. ಈ ಪ್ರಕಾರ ಉದಾಹರಣೆಗೆ, ಗೋಕರ್ಣಕ್ಕೆ ₹ 1 ಕೋಟಿ ಬಿಡುಗಡೆಯಾಗಿದ್ದರೆ, ಕಡತೋಕಕ್ಕೆ ₹ 28 ಲಕ್ಷ ನಿಗದಿಯಾಗಿದೆ’ ಎಂದು ಸ್ಪಷ್ಟನೆ ನೀಡಿದರು.

‘ಮಾರ್ಗಸೂಚಿ ಬದಲಾವಣೆಯು ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕು. ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ಜತೆ ಚರ್ಚಿಸಲಾಗುವುದು. ಅವಕಾಶವಿದ್ದರೆ ಕೆಲವು ಕ್ರಿಯಾ ಯೋಜನೆಗಳನ್ನು ಜುಲೈ 31ರ ಮೊದಲು ಬದಲಿಸಲಾಗುವುದು’ ಎಂದು ತಿಳಿಸಿದರು.

‘ಕಳಪೆ ಪೀಠೋಪಕರಣ ಬದಲಿಸಿಲ್ಲ’:

ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲೆಗಳಿಗೆ ಕಳಪೆ ಬೆಂಚ್ ಹಾಗೂ ಡೆಸ್ಕ್‌ಗಳನ್ನು ಪೂರೈಕೆ ಮಾಡಲಾಗಿದೆ. ಕಳೆದ ಸಭೆಯಲ್ಲೇ ಚರ್ಚಿಸಿದ್ದರೂ ಬದಲಾವಣೆ ಮಾಡಿಲ್ಲ, ಉಪಕರಣಗಳ ಪೂರೈಕೆ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ ಎಂದು ಸದಸ್ಯೆ ಉಷಾ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

‘ಪೀಠೋಪಕರಣಗಳ ಗುಣಮಟ್ಟದ ಬಗ್ಗೆ ಕ್ರಮ ವಹಿಸಲು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್ ಹೇಳಿದರು.

ಈ ಬಗ್ಗೆ ‍ಪ್ರತಿಕ್ರಿಯಿಸಿದ ಮೊಹಮ್ಮದ್ ರೋಶನ್, ‘ಪೀಠೋಪಕರಣಗಳು ಕಳಪೆಯಾಗಿದ್ದರೆ ಅದನ್ನು ಬದಲಿಸಲು ಉಪ ನಿರ್ದೇಶಕರು 15 ದಿನಗಳಲ್ಲಿ ಕ್ರಮ ವಹಿಸಬೇಕು. ಶಾಲೆಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೈತ್ರಾ ಕೊಠಾರಕರ್, ಉಷಾ ಉದಯ ನಾಯ್ಕ, ಬಸವರಾಜ ದೊಡ್ಮನಿ ಹಾಜರಿದ್ದರು.

ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಭೆಗೆ ಬಂದು ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಶುಭಾಶಯ ಕೋರಿದರು. ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT