ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಜೆ.ಎಂ ವಿರುದ್ಧ ಸದಸ್ಯರ ಆಕ್ಷೇಪ

ನೀರೇ ಇಲ್ಲದ ಪ್ರದೇಶಗಳಿಗೆ ಮೊದಲು ವ್ಯವಸ್ಥೆ ಮಾಡಲು ಹಲವರ ಆಗ್ರಹ
Last Updated 17 ಮಾರ್ಚ್ 2021, 13:20 IST
ಅಕ್ಷರ ಗಾತ್ರ

ಕಾರವಾರ: ‘ಜಲಜೀವನ ಮಿಷನ್ (ಜೆ.ಜೆ.ಎಂ) ಯೋಜನೆಯು ಅವೈಜ್ಞಾನಿಕ. ನೀರೇ ಇಲ್ಲದ ಪ್ರದೇಶಗಳಿಗೆ ಮೊದಲು ಯೋಜನೆ ಜಾರಿ ಮಾಡಿ’ ಎಂದು ಜಿಲ್ಲಾ ಪಂಚಾಯಿತಿಯ ಹಲವು ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯೆ ಸುಮಂಗಲಾ ನಾಯ್ಕ, ‘ನಮ್ಮಲ್ಲಿ ಈಗಾಗಲೇ ಕುಡಿಯುವ ನೀರು ಇದೆ. ಹಾಗಿರುವಾಗ ಮತ್ಯಾಕೆ ಸಾವಿರಾರು ರೂಪಾಯಿ ವ್ಯಯಿಸಬೇಕು ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ’ ಎಂದರು.

ಸದಸ್ಯ ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ‘ನೀರಿನ ಮೂಲವನ್ನು ಪತ್ತೆ ಹಚ್ಚಲು ಯೋಜನೆ ರೂಪಿಸಿ. ನಂತರ ಜೆ.ಜೆ.ಎಂ ಜಾರಿ ಮಾಡಿ. ನೀರಿನ ಮೂಲವೇ ಇಲ್ಲದಲ್ಲಿ ಯೋಜನೆ ಚಾಲ್ತಿಗೆ ಬಂದರೇನು ಉಪಯೋಗ’ ಎಂದು ಪ್ರಶ್ನಿಸಿದರು.

ಸದಸ್ಯೆ ಉಷಾ ಹೆಗಡೆ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಅನುದಾನವಿಲ್ಲ. 15ನೇ ಹಣಕಾಸಿನಲ್ಲಿ ಶೇ 15ರಷ್ಟು ಮೊತ್ತವನ್ನು ಜೆ.ಜೆ.ಎಂಗೆ ಮೀಸಲಿಡಲು ಸೂಚನೆಯಿದೆ. ಇದರಿಂದ ತುರ್ತು ಕಾಮಗಾರಿಗೆ ಅಡಚಣೆಯಾಗುತ್ತಿದೆ’ ಎಂದರು.

ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಮಾತನಾಡಿ, ‘ಈ ಯೋಜನೆಯಡಿ ಗ್ರಾಮಗಳನ್ನು ಆಯ್ಕೆ ಮಾಡುವಾಗ ಯಾರನ್ನೂ ಕೇಳಿಲ್ಲ. ಸಮೀಕ್ಷೆಯಲ್ಲಿ ಮನೆಗಳ ಸಂಖ್ಯೆಯಲ್ಲೂ ವ್ಯತ್ಯಾಸವಾಗಿದೆ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ‘ನೀರು ಲಭ್ಯವಿರುವ ಪ್ರದೇಶಗಳ ಬಗ್ಗೆ ಭೂ ವಿಜ್ಞಾನಿಗಳಿಂದ ಪ್ರಮಾಣ ಪತ್ರ ಪಡೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಯೋಜನೆ ಜಾರಿಯಾಗುತ್ತಿದೆ’ ಎಂದರು.

‘ಮುಂಡಗೋಡದಲ್ಲಿರುವ ಜಿಲ್ಲಾ ಪಂಚಾಯಿತಿಯ ಉಪ ವಿಭಾಗ ಕಚೇರಿಯು ಶೇ 60ರಷ್ಟು ಹಾಳಾಗಿದೆ. ಹಳೆಯ ತಹಶೀಲ್ದಾರ್ ಕಚೇರಿಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಸಿಬ್ಬಂದಿಗೆ ಕೂರಲು ಜಾಗವಿಲ್ಲ. ಹೊಸ ಕಟ್ಟಡದ ವ್ಯವಸ್ಥೆ ಆಗದಿದ್ದರೆ ಅವರನ್ನು ಬಸ್ ನಿಲ್ದಾಣದಲ್ಲೇ ಕೂರಿಸಬೇಕಷ್ಟೇ’ ಎಂದು ಸದಸ್ಯ ಎಲ್.ಟಿ.ಪಾಟೀಲ ಖಾರವಾಗಿ ನುಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಈ ಬಾರಿ ಕೊರೊನಾ ಕಾರಣದಿಂದ ಜಿಲ್ಲಾ ಪಂಚಾಯಿತಿಗೆ ಅನುದಾನ ಕಡಿಮೆಯಾಗಿದೆ. ಏಪ್ರಿಲ್ ನಂತರ ಅನುದಾನ ಲಭಿಸಿದರೆ ಪರಿಶೀಲಿಸಬಹುದು’ ಎಂದರು.

‘ಮಂಜೂರಾಗದ ಹಣ’

‘ಬಸವ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಎರಡು ವರ್ಷದಿಂದ ಹಣ ಮಂಜೂರಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಣ ಬಿಡುಗಡೆಯಾಗಿಲ್ಲ ಎನ್ನುತ್ತಾರೆ. ಹೀಗಾದರೆ ಬಡವರು ಮನೆ ಕಟ್ಟಿಕೊಳ್ಳುವುದು ಹೇಗೆ’ ಎಂದು ಸದಸ್ಯೆ ಪುಷ್ಪಾ ನಾಯ್ಕ ಪ್ರಶ್ನಿಸಿದರು.

‘ಜಿಲ್ಲೆಗೆ ಈ ಯೋಜನೆಯಡಿ ₹ 30 ಕೋಟಿ ಮಂಜೂರಾಗಬೇಕಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಟೋಲ್ ವಸೂಲಿ ರದ್ದು ಮಾಡಿ’

‘ರಾಷ್ಟ್ರೀಯ ಹೆದ್ದಾರಿಯ ಟೋಲ್‌ಬೂತ್‌ಗಳಲ್ಲಿ ಜನಪ್ರತಿನಿಧಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕು. ಕಾಮಗಾರಿ ಅಪೂರ್ಣವಾಗಿದ್ದರೂ ಐ.ಆರ್.ಬಿ.ಯವರು ಲೂಟಿ ಮಾಡುತ್ತಿದ್ದಾರೆ. ರಸ್ತೆ ತೆರಿಗೆ, ಇಂಧನದಲ್ಲಿ ಸೆಸ್ ಎಲ್ಲವನ್ನೂ ಪಾವತಿಸಿದರೂ ಮತ್ತೆ ಇಲ್ಲಿ ಟೋಲ್ ಶುಲ್ಕ ಪಾವತಿಸಬೇಕಾಗಿದೆ’‌ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಟೋಲ್ ವಸೂಲಿ ಖಂಡಿಸಿ ಪ್ರತಿಭಟಿಸಿದರೆ ಪೊಲೀಸರು, ತಹಶೀಲ್ದಾರ್‌ರು, ಉಪ ವಿಭಾಗಾಧಿಕಾರಿ ಬಂದು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ, ಸ್ಥಳೀಯರಿಗೆ ಬೇಕಾದ ಕಾಮಗಾರಿ ಮಾಡಿ ಎಂದರೆ ಯಾರೂ ಬರುವುದಿಲ್ಲ. ಜನರೂ ಒಂದು ಹಂತದವರೆಗೆ ಸಹಿಸಿಕೊಳ್ಳುತ್ತಾರೆ. ನಂತರ ಕ್ರಾಂತಿಯಾಗಿ ಟೋಲ್ ನಾಕಾ ಒಡೆದು ಹಾಕುವಂತಾಗುವುದು ಬೇಡ’ ಎಂದು ಸದಸ್ಯ ಪ್ರದೀಪ ನಾಯಕ ಹೇಳಿದರು.

‘ಟೋಲ್ ಕೇಂದ್ರವನ್ನೇ ರದ್ದು ಮಾಡಬೇಕೆಂದು ನಿರ್ಣಯ ಕೈಗೊಳ್ಳಬೇಕು’ ಎಂದು ರತ್ನಾಕರ ನಾಯ್ಕ ಒತ್ತಾಯಿಸಿದರು.

ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಉಷಾ ಉದಯ ನಾಯ್ಕ ಹಾಗೂ ಚೈತ್ರಾ ಕೊಠಾರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT