ಕಾರವಾರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜಲಮೂಲಗಳ ಗುಣಮಟ್ಟ ಪರಿಶೀಲನೆಯ ವೇಗವನ್ನು ಹೆಚ್ಚಿಸಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ನಾಲ್ಕು ತಿಂಗಳ ಅವಧಿಯಲ್ಲಿ 42 ಜಲಮೂಲಗಳು ಕಲುಷಿತಗೊಂಡಿರುವುದನ್ನು ಪತ್ತೆ ಹಚ್ಚಿದೆ.
ಕಾರವಾರ, ಅಂಕೋಲಾದ ಕೆಲವೆಡೆ ಕ್ಲೋರೈಡ್ ಅಂಶ, ಯಲ್ಲಾಪುರದ ಉಮ್ಮಚಗಿ ಭಾಗದ ಕೆಲವು ಜಲಮೂಲದಲ್ಲಿ ಹಾನಿಕಾರಕ ನೈಟ್ರೇಟ್ ಅಂಶವಿರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾರವಾರ, ಶಿರಸಿ, ಹಳಿಯಾಳ ಮತ್ತು ಹೊನ್ನಾವರದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಯೋಗಾಲಯ ಹೊಂದಿದ್ದು, ಅಲ್ಲಿ ಪ್ರತಿನಿತ್ಯ ವಿವಿಧ ಜಲಮೂಲಗಳಿಂದ ಆಯ್ದು ತರಲಾದ ನೀರಿನ ಮಾದರಿ ಪರೀಕ್ಷಿಸಲಾಗುತ್ತಿದೆ.
ಜಲಮೂಲಗಳು ತೀರ ಕಲುಷಿತವಾಗಿದ್ದರೆ ನೀರು ಬಳಸದಂತೆ ಸೂಚಿಸಲಾಗಿದೆ. ಸಾಮಾನ್ಯ ಹಾನಿಕಾರಕ ಅಂಶಗಳಿದ್ದರೆ ನೀರು ಶುದ್ಧೀಕರಿಸಲು ಸಲಹೆ ನೀಡಲಾಗಿದೆ.ರಾಜೀವ ನಾಯ್ಕ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಇ
‘ಏಪ್ರಿಲ್‍ನಿಂದ ಜುಲೈ ಅಂತ್ಯದವರೆಗೆ ನಾಲ್ಕು ಪ್ರಯೋಗಾಲಯಗಳಿಂದ 4,047 ನೀರಿನ ಮಾದರಿಗಳ ಪರೀಕ್ಷೆಯನ್ನು ನಡೆಸಲಾಗಿದೆ. ಅವುಗಳ ಪೈಕಿ 42 ಮಾದರಿಯಲ್ಲಿ ಕಲುಷಿತ ಅಂಶಗಳಿರುವುದು ದೃಢಪಟ್ಟಿದೆ. ಕಬ್ಬಿಣ, ಕ್ಲೋರೈಡ್, ನೈಟ್ರೇಟ್ ಅಂಶಗಳಿರುವ ಜತೆಗೆ ನೀರು ಗಡಸಾಗಿರುವುದು ಪತ್ತೆಯಾಗಿದೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ ನಾಯ್ಕ.
‘ಅಂಕೋಲಾ ತಾಲ್ಲೂಕಿನ ಅವರ್ಸಾ, ಬೊಬ್ರುವಾಡಾ ಹಾಗೂ ಯಲ್ಲಾಪುರದ ಉಮ್ಮಚಗಿ ಭಾಗದ ಕೆಲವು ಜಲಮೂಲಗಳಲ್ಲಿ ನೈಟ್ರೇಟ್ ಅಂಶವಿರುವುದು ಪತ್ತೆಯಾಗಿದೆ. ಭಟ್ಕಳದ ಕೋಣಾರದಲ್ಲಿ ಕಬ್ಬಿಣದ ಅಂಶ, ಕಾರವಾರದ ಹಣಕೋಣದಲ್ಲಿ ಕ್ಲೋರೈಡ್ ಮತ್ತು ಗಡಸು ಅಂಶ, ಮುಂಡಗೋಡದಲ್ಲಿ ಗಡಸು ಅಂಶವಿರುವುದು ದೃಢಪಟ್ಟಿದೆ. ಕಾರವಾರದ ಕದ್ರಾ ಸೇರಿದಂತೆ ಕೆಲವೆಡೆ ನೀರಿನಲ್ಲಿ ಪಿ.ಎಚ್ (ಹೈಡ್ರೋಜನ್ ಸಾಮರ್ಥ್ಯ) ಮಟ್ಟ ನಿರ್ದಿಷ್ಟ ಅಂಶಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ’ ಎಂದು ವಿವರಿಸಿದರು.
‘ಪ್ರತಿ ಪ್ರಯೋಗಾಲಯಕ್ಕೆ ಮಾಸಿಕ 250 ಜಲಮೂಲಗಳ ಮಾದರಿ ಪರೀಕ್ಷಿಸುವ ಗುರಿ ನೀಡಲಾಗಿದೆ. ವರ್ಷಕ್ಕೆ 12 ಸಾವಿರ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಳೆಗಾಲದಲ್ಲಿ ನೀರಿನ ಶುದ್ಧತೆ ಅರಿಯಲು ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.
ನೈಟ್ರೇಟ್ ಅಂಶ ಅಪಾಯಕಾರಿ!
‘ನೀರಿನಲ್ಲಿ ಗರಿಷ್ಠ 45 ಮಿಲಿ ಗ್ರಾಂ ನೈಟ್ರೇಟ್ ಇದ್ದರೆ ಅದು ಕುಡಿಯಲು ಯೋಗ್ಯ. ಅದಕ್ಕಿಂತ ಹೆಚ್ಚು ಇದ್ದರೆ ಬಳಕೆ ಅಪಾಯಕಾರಿಯಾಗಬಹುದು. ಅಂತಹ ಅಂಶವಿರವ ನೀರು ಕ್ಯಾನ್ಸರ್ ಸೇರಿದಂತೆ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚು. ಕ್ಲೋರೈಡ್ ಅಂಶ ಹೆಚ್ಚಿರುವ ನೀರು ಸೇವನೆಯಿಂದ ಕಿಡ್ನಿ ಸ್ಟೋನ್‍ನಂತಹ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಪಿ.ಎಚ್ ಅಂಶ 8.5 ಕ್ಕಿಂತ ಹೆಚ್ಚಿದ್ದರೆ ಅಂತಹ ನೀರಿನಲ್ಲಿ ಆಮ್ಲೀಯ ಗುಣ ಹೆಚ್ಚಿರುತ್ತದೆ. ಅವುಗಳನ್ನು ಕ್ಲೋರಿನೇಶನ್ ಮೂಲಕ ಸರಿಪಡಿಸಬಹುದು’ ಎಂದು ಪ್ರಯೋಗಾಲಯ ತಜ್ಞರೊಬ್ಬರು ತಿಳಿಸಿದರು.
‘ಜಿಲ್ಲೆಯ ಜಲಮೂಲಗಳಲ್ಲಿ ನೈಟ್ರೇಟ್ ಅಂಶ ಹೆಚ್ಚಿರಲು ರಾಸಾಯನಿಕ ಗೊಬ್ಬರಗಳ ಅಂಶ ಮಣ್ಣಿಗೆ ಸೇರುವುದು ಕಾರಣವಾಗಿರಬಹುದು. ಗಂಭೀರ ಕಾಯಿಲೆ ತರುವ ಅಂಶಗಳು ಜಿಲ್ಲೆಯ ಜಲಮೂಲಗಳಲ್ಲಿ ಅಷ್ಟಾಗಿ ಪತ್ತೆಯಾಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.