ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬಳಕೆಗೆ ಮುನ್ನ ಹೊಳಪು ಕಳೆದುಕೊಂಡ ಆಡಳಿತ ಸೌಧ

₹5 ಕೋಟಿ ವೆಚ್ಚ:ಮೊದಲ ಹಂತದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ ಸೋರಿಕೆ
Last Updated 18 ಜನವರಿ 2023, 16:22 IST
ಅಕ್ಷರ ಗಾತ್ರ

ಕಾರವಾರ: ಸುಮಾರು ₹ 5 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಪಕ್ಕ ನಿರ್ಮಾಣಗೊಂಡಿರುವ ‘ತಾಲ್ಲೂಕು ಆಡಳಿತ ಸೌಧ’ ಬಳಕೆಗೆ ಮುನ್ನ ಹೊಳಪು ಕಳೆದುಕೊಂಡಿದೆ. ಕಟ್ಟಡದಲ್ಲಿ ಮಳೆನೀರು ಸೋರಿಕೆ ಉಂಟಾಗಿರುವ ಪರಿಣಾಮ ಬಳಿದ ಬಣ್ಣಗಳು ಮಾಸಿದೆ.

ಕಟ್ಟಡದ ನಿರ್ಮಾಣ ಕೆಲಸ 2017ರಲ್ಲಿ ಆರಂಭಗೊಂಡಿತ್ತು. ಕಂದಾಯ ಇಲಾಖೆಯ ಅನುದಾನದಲ್ಲಿ ಕರ್ನಾಟಕ ಗೃಹ ಮಂಡಳಿ ಕಟ್ಟಡ ನಿರ್ಮಿಸುವ ಜವಾಬ್ದಾರಿ ಹೊತ್ತುಕೊಂಡಿತ್ತು. ಕೆಲ ತಿಂಗಳ ಹಿಂದೆಯೇ ಮೊದಲ ಹಂತದ ಕೆಲಸ ಪೂರ್ಣಗೊಂಡಿದೆ. ಆದರೆ ಕಟ್ಟಡ ಬಳಕೆ ಮಾಡದೆ ಬಿಡಲಾಗಿತ್ತು.

ಕೆಲ ತಿಂಗಳ ಹಿಂದಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಸರ್ಕಾರಿ ಕಚೇರಿಯನ್ನು ಇದೇ ಕಟ್ಟಡದಲ್ಲಿ ಆರಂಭಿಸಿದ್ದಾರೆ. ಸದ್ಯ ಸಚಿವರ ಕಚೇರಿ ಹೊರತಾಗಿ ಕಟ್ಟಡ ಆಡಳಿತ ಸೌಧದ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಸಚಿವರು ಭೇಟಿ ನೀಡಿದ ವೇಳೆ ಹೊರತುಪಡಿಸಿದರೆ ಉಳಿದ ಸಮಯಗಳಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಕಚೇರಿಗೆ ತೆರಳುತ್ತಿದ್ದಾರೆ.

‘ಸರ್ಕಾರ ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ವೆಚ್ಚ ಮಾಡಿ ನಿರ್ಮಿಸುವ ಕಟ್ಟಡ ಸರಿಯಾಗಿ ಬಳಕೆ ಮಾಡಲಾಗುತ್ತಿಲ್ಲ. ಕಟ್ಟಡಕ್ಕೆ ಬಳಿದ ಬಣ್ಣ ಈಗಲೆ ಮಾಸಿದೆ. ಮಳೆನೀರು ಸೋರಿಕೆಯಾಗಿ ಕಟ್ಟಡ ಉದ್ಘಾಟನೆಗೊಳ್ಳುವ ಮುನ್ನವೆ ಅಂದ ಕಳೆದುಕೊಂಡಿದೆ. ಕಟ್ಟಡದೊಳಗೆ ಬೆಳೆದ ಗಿಡಗಂಟಿಗಳು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಸಾರುತ್ತಿವೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಾಜೇಶ ನಾಯ್ಕ.

‘ಆಡಳಿತ ಸೌಧಕ್ಕೆ ಈ ಮೊದಲು ₹ 5 ಕೋಟಿ ಬಿಡುಗಡೆಯಾಗಿತ್ತು. ಈಚೆಗೆ ಸರ್ಕಾರ ಹೆಚ್ಚುವರಿಯಾಗಿ ₹ 5 ಕೋಟಿ ಹಣ ನೀಡಿದೆ. ಮೊದಲ ಮಹಡಿಯನ್ನು ವಿಸ್ತರಿಸುವ ಕೆಲಸ ಇನ್ನಷ್ಟೆ ಆಗಬೇಕಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಡಳಿತ ಸೌಧದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ತಹಶೀಲ್ದಾರ್ ಕಚೇರಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಹೆಚ್ಚಿನ ಜಾಗದ ಅಗತ್ಯವಿರುವ ಕಾರಣ ಎರಡನೇ ಹಂತದ ಕೆಲಸ ಮುಗಿದ ನಂತರವೇ ಕಂದಾಯ ಇಲಾಖೆ ಕಟ್ಟಡವನ್ನು ಹಸ್ತಾಂತರಿಸಿಕೊಳ್ಳಲಿದೆ’ ಎಂದು ವಿವರಿಸಿದರು.

ಪಿಡಬ್ಲ್ಯೂಡಿಗೆ ಜವಾಬ್ದಾರಿ:

ತಾಲ್ಲೂಕು ಆಡಳಿತ ಸೌಧ ನಿರ್ಮಾಣದ ಮೊದಲ ಹಂತದ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಿಕೊಡಲಾಗಿತ್ತು. ಹೆಚ್ಚುವರಿ ಅನುದಾನ ಬಿಡುಗಡೆಯಾದ ಬಳಿಕ ಎರಡನೇ ಹಂತದ ಕೆಲಸದ ಜವಾಬ್ದಾರಿಯನ್ನು ಪಿಡಬ್ಲ್ಯೂಡಿಗೆ ವಹಿಸಿಕೊಡಲಾಗಿದೆ.

‘ಮೊದಲ ಹಂತದ ಕಾಮಗಾರಿ ಸರಿಯಾಗಿ ನಡೆಯದ ಬಗ್ಗೆ ವ್ಯಾಪಕ ದೂರುಗಳಿದ್ದವು. ಈ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆಡಳಿತ ಸೌಧಕ್ಕೆ ಸರಿಹೊಂದುವ ರೀತಿಯಲ್ಲಿಯೂ ಕೆಲಸ ನಡೆದಿರಲಿಲ್ಲ’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

-----------------------

ಆಡಳಿತಸೌಧ ನಿರ್ಮಾಣಕ್ಕೆ ಹೆಚ್ಚುವರಿ ₹5 ಕೋಟಿ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಶೀಘ್ರ ಕೆಲಸ ಆರಂಭಿಸಲಾಗುವುದು.

ರಾಮಚಂದ್ರ ಗಾಂವಕರ್

ಪಿಡಬ್ಲ್ಯೂಡಿ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT