ಕಾರವಾರ: ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆ ಗ್ರಾಮದಲ್ಲಿ ಮತ್ತೆ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಜನರನ್ನು ಆತಂಕಕ್ಕೀಡುಮಾಡಿದೆ. 2021ರ ಜುಲೈ 21 ರಂದು ಇಲ್ಲಿ ಭಾರಿ ಮಳೆಗೆ ಗುಡ್ಡಕುಸಿದು ಗ್ರಾಮದ ಹಲವು ಮನೆ, ತೋಟ, ಗದ್ದೆಗಳು ಕೊಚ್ಚಿಕೊಂಡು ಹೋಗಿದ್ದವು.
ಕಾಳಿ ಕಣಿವೆ ಪ್ರದೇಶವಾಗಿರುವ ಕಳಚೆ ಗ್ರಾಮದಲ್ಲಿ 175 ಕುಟುಂಬಗಳು ವಾಸವಿವೆ. ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ಭೂಕುಸಿತದಿಂದ ಗ್ರಾಮಸ್ಥರು ನೂರಾರು ಎಕರೆ ಕೃಷಿ ಭೂಮಿ ಕಳೆದುಕೊಂಡಿದ್ದರು. ಆಗಿನ ನೆನಪು ಮಾಸುವ ಮುನ್ನವೇ ಮತ್ತೆ ಅಲ್ಲಿ ಭೂಕುಸಿತವಾಗುತ್ತಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.
‘ಹಿಂದೆ ಕುಸಿತ ಸಂಭವಿಸಿದ್ದ ಪ್ರದೇಶದಲ್ಲೇ ಮತ್ತೆ ಸುಮಾರು 1 ಎಕರೆಯಷ್ಟು ಭೂಮಿ ಕುಸಿತಕಂಡಿದೆ. ಇದರಿಂದ ಜನಾರ್ಧನ ಹೆಬ್ಬಾರ ಅವರಿಗೆ ಸೇರಿದ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಮಾಣಿಗದ್ದೆ ಕುಂಬ್ರಿಯಲ್ಲಿ ಕಮಲಾಕರ ಭಾಗ್ವತ ಎಂಬುವವರ ಮನೆ, ಕಳಚೆ ಕಣಿವೆಯ ಉದಯ ಐತಾಳ ಅವರ ಮನೆಯ ಬಳಿ ಕುಸಿತ ಉಂಟಾಗಿದೆ’ ಎಂದು ಸ್ಥಳೀಯರಾದ ಪ್ರಸನ್ನ ಕಳಚೆ ತಿಳಿಸಿದರು.
‘ನಾಲ್ಕು ವರ್ಷಗಳ ಹಿಂದೆ ಭೀಕರ ಮಳೆಗೆ ಸಂಭವಿಸಿದ ಕುಸಿತ ಊರನ್ನೇ ಇಬ್ಭಾಗವಾಗಿಸಿದೆ. ಈ ಬಾರಿಯ ಮಳೆಗಾಲದಲ್ಲಿ ಮತ್ತೆ ಅಂಥದ್ದೇ ಸ್ಥಿತಿ ಮರುಕಳಿಸುತ್ತಿದ್ದು, ಕೆಲವು ದಿನಗಳಿಂದ ಗ್ರಾಮದ ವಿವಿಧೆಡೆ ಭೂಮಿ ಕುಸಿತವಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಜಾನನ ಭಟ್ಟ ಆತಂಕ ವ್ಯಕ್ತಪಡಿಸಿದರು.
ಸ್ಥಳಾಂತರಕ್ಕೆ ನೋಟಿಸ್:
‘ಭೂಕುಸಿತ ಉಂಟಾಗುವ ಅಪಾಯದ ಹಿನ್ನೆಲೆಯಲ್ಲಿ ಇಲ್ಲಿನ 16 ಮನೆಗಳಿಗೆ ಕೆಲ ದಿನಗಳ ಹಿಂದೆಯೆ ಸ್ಥಳಾಂತರಕ್ಕೆ ನೋಟಿಸ್ ನೀಡಲಾಗಿತ್ತು. ಕಾಳಜಿ ಕೇಂದ್ರಕ್ಕೆ ಸ್ಥಳಾಂತರಕ್ಕೆ ಸೂಚಿಸಿದ್ದರೂ ಜನರು ಒಪ್ಪಿಲ್ಲ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
‘ಕಳಚೆ ಗ್ರಾಮದಲ್ಲಿ ಈ ಹಿಂದೆ ಸಂಭವಿಸಿದ ಕುಸಿತದಿಂದ ಮನೆ, ತೋಟ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಮನೆ ಕಟ್ಟಿಕೊಳ್ಳಲು ಪರ್ಯಾಯ ಭೂಮಿ, ಕೃಷಿ ಜಮೀನಿಗೆ ಸೂಕ್ತ ಪರಿಹಾರ ನೀಡಿದರೆ ಮಾತ್ರ ಸ್ಥಳಾಂತರಗೊಳ್ಳುವುದಾಗಿ ಈಗಾಗಲೆ 125ಕ್ಕೆ ಹೆಚ್ಚು ಕುಟುಂಬಗಳು ಅಫಿಡವಿಟ್ ಸಲ್ಲಿಸಿವೆ. ಪರಿಹಾರ ಸಿಗದೆ ಸ್ಥಳಾಂತರ ಸಾಧ್ಯವಾಗದು’ ಎಂದು ಗ್ರಾಮದ ಪ್ರಮುಖ ಆರ್.ಪಿ.ಹೆಗಡೆ ಪ್ರತಿಕ್ರಿಯಿಸಿದರು.
‘ಕಾಳಿ ಕಣಿವೆಯ ಮಧ್ಯಭಾಗದಲ್ಲಿರುವ ಕಳಚೆಯಲ್ಲಿ ಪುನಃ ಭೂಕುಸಿತ ಸಂಭವಿಸಬಹುದು. ಇಲ್ಲಿ ಸೌಕರ್ಯಗಳ ಅಭಿವೃದ್ಧಿಗೆ ಅವಕಾಶ ಇಲ್ಲ. ಇದೇ ಕಣಿವೆಯ ತುದಿಯಲ್ಲಿರುವ ಕೊಡಸಳ್ಳಿ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಗ್ರಾಮದ ಸ್ಥಳಾಂತರ ಸೂಕ್ತ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ವರದಿ ಸಲ್ಲಿಸಿದ್ದರು’ ಎಂದೂ ಹೇಳಿದರು.
ಕಳಚೆಯಲ್ಲಿ ಪುನಃ ಭೂಕುಸಿತ ಉಂಟಾಗಿರುವುದರ ಬಗ್ಗೆ ತಾಲ್ಲೂಕು ಆಡಳಿತದಿಂದ ವರದಿ ಪಡೆದು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು.ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ ಉತ್ತರಕನ್ನಡ
ಕಾಳಿ ಕಣಿವೆ ಪ್ರದೇಶದಲ್ಲಿ 50 ರಿಂದ 60 ಅಡಿಗೆ ಶಿಲೆ ಪದರ ಇದ್ದು ಹೆಚ್ಚು ನೀರು ಇಂಗಲು ಅವಕಾಶ ಆಗುತ್ತಿಲ್ಲ. ಮಳೆ ವಿಪರೀತವಾದಾಗೆಲ್ಲ ಮಣ್ಣು ಕುಸಿವ ಅಪಾಯ ಇದ್ದೇ ಇದೆ. ಇದೇ ಕಾರಣಕ್ಕೆ ಕಳಚೆಯಲ್ಲಿ ಭೂಕುಸಿತದ ಅಪಾಯ ಇದೆ.ಕೇಶವ ಕೊರ್ಸೆ ಪರಿಸರ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.