ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಗಣಪತಿ ಸಿದ್ದಿ ಯಶೋಗಾಥೆ, ‘ಸಂತೃಪ್ತಿ’ ತಂದ ಸಮಗ್ರ ಕೃಷಿ

Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ‘ಪಾಠಿಯನ್ನೂ ಖರೀದಿಸಲಾಗದಷ್ಟು ಬಡತನವಿದ್ದ ಕಾರಣ 6ನೇ ತರಗತಿಗೆ ಶಾಲೆ ಬಿಟ್ಟಿದ್ದೆ. ಕೂಲಿ ಮಾಡಿ ಬದುಕುತ್ತಿದ್ದ ನನಗೆ ಸ್ವಾವಲಂಬಿಯಾಗಲು ಕೃಷಿ ಆಧಾರ ಎಂಬುದು ಅರಿವಿಗೆ ಬಂದ ಬಳಿಕ ಏಕಾಂಗಿಯಾಗಿ ಒಂದೂವರೆ ಎಕರೆ ಅಡಿಕೆ ತೋಟ ನಿರ್ಮಿಸಿದೆ. ಬರಿಗೈ ಕುಟುಂಬಕ್ಕೆ ಕೃಷಿ ಸಂತೃಪ್ತಿ ಕೊಟ್ಟಿದೆ’.

ಹೀಗೆ ಮಾತಿಗೆ ಇಳಿದವರು ತಾಲ್ಲೂಕಿನ ಮತ್ತಿಘಟ್ಟಾ ಕೆಳಗಿನಕೇರಿಯ ಗಣಪತಿ ವೆಂಕಟ ಸಿದ್ದಿ. 38 ವರ್ಷದ ಈ ಕೃಷಿಕರ ಮನೆಯ ತೋಟ ಸಮಗ್ರ ಕೃಷಿಗೆ ಮೀಸಲಾಗಿದೆ. ಎರಡು ದಶಕಗಳ ಹಿಂದೆ ಕಲ್ಲುಹಾಸುಗಳಿಂದ ಕೂಡಿದ್ದ ಜಾಗವನ್ನು ಹಸಿರಿನಿಂದ ನಳನಳಿಸುವಂತೆ ಮಾಡಿರುವುದು ಇವರ ಸಾಧನೆ.

ಹೊತ್ತಿನ ಊಟಕ್ಕೆ ಕೂಲಿ ನಂಬಿದ್ದ ಗಣಪತಿ, ತಪಸ್ಸಿನಂತೆ ಕೃಷಿಯಲ್ಲಿ ತೊಡಗಿದ ಕಾರಣ ಇಂದು ವರ್ಷಕ್ಕೆ 18 ಕ್ವಿಂಟಲ್‍ನಷ್ಟು ಅಡಿಕೆ ಬೆಳೆ ಪಡೆಯುತ್ತಿದ್ದಾರೆ. ಕಾಳುಮೆಣಸು, 40ಕ್ಕೂ ಹೆಚ್ಚು ಬಗೆಯ ಮಾವಿನ ಬೆಳೆ, ಚಿಕ್ಕು, ಬಾಳೆ, ಕಿತ್ತಲೆ, ಹೀಗೆ ಹಲವು ಬಗೆಯ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ.

‘ಕಷ್ಟದ ಕಾರಣಕ್ಕೆ ಶಾಲೆ ಬಿಟ್ಟ ಬಳಿಕ ದನ ಕಾಯುವ ಕೆಲಸ ಮಾಡುತ್ತಿದ್ದೆ. ಹೊಟ್ಟೆ ಪಾಡಿಗೆ ಕೃಷಿ ಕೂಲಿ ಮಾಡಬೇಕಾಗಿಯೂ ಬಂತು. ಚಿಕ್ಕ ವಯಸ್ಸಿನಲ್ಲೇ ತೋಟದ ಕೆಲಸಕ್ಕೆ ಹೋಗುತ್ತಿದ್ದೆ. ತಂದೆಯ ಜತೆ ಸೇರಿ ಗದ್ದೆ ಗೇಣಿ ಪಡೆದು ಭತ್ತ ಬೆಳೆದಿದ್ದೆವು. ಇದು ಕೃಷಿಯ ಕಡೆಗೆ ಆಸಕ್ತಿ ಮೂಡಿಸಿತು’ ಎಂದು ಕೃಷಿಯೆಡೆಗೆ ಸೆಳೆತ ಉಂಟಾದ ಬಗೆ ವಿವರಿಸುತ್ತಾರೆ ಗಣಪತಿ ಸಿದ್ದಿ.

‘ಭೂ ಮಾಲೀಕರಿಂದ ಕೃಷಿ ಬಗ್ಗೆ ಮಾಹಿತಿ ಪಡೆಯಲಾರಂಭಿಸಿದೆ. ಕೆಲಸಕ್ಕೆ ಹೋದ ಮನೆಗಳಿಂದ ಅಡಿಕೆ ಸಸಿಗಳನ್ನು ಪಡೆದು ತರುತ್ತಿದ್ದೆ. ಬೇರೆ ಊರುಗಳಿಗೆ ತೆರಳಿದಾಗಲೂ ಅಲ್ಲಿಂದ ಸಸಿಗಳನ್ನು ಖರೀದಿಸಿ ತರುತ್ತಿದ್ದೆ. ಇವುಗಳನ್ನು ನೆಟ್ಟು ಬೆಳೆಸಲಾರಂಭಿಸಿದೆ. ಹೀಗೆ ಮಾಡುತ್ತಲೆ ಅಡಿಕೆ ತೋಟ ರೂಪಿಸಿದೆ’ ಎಂದರು.

‘ಅಡಿಕೆ ಜತೆಗೆ ಉಪ ಉತ್ಪನ್ನ ಕೊಡುವ ಕಾಳುಮೆಣಸು, ಹಣ್ಣಿನ ಗಿಡಗಳನ್ನು ಬೆಳೆಸಿದ್ದೇನೆ. ಕೊನೆಕೊಯ್ಲು, ಮದ್ದು ಸಿಂಪಡಣೆಗೆ ಕಾರ್ಮಿಕರನ್ನು ಅವಲಂಭಿಸದೆ ನಾನೇ ಅವೆಲ್ಲ ಕೆಲಸ ಮಾಡುತ್ತೇನೆ. ತೊಟದ ಕೆಲಸಕ್ಕೆ ಪತ್ನಿ ಹೇಮಾ ಕೂಡ ಸಹಾಯ ಮಾಡುತ್ತಾರೆ. ಕಳೆದ ವರ್ಷ ಜೇನು ಪೆಟ್ಟಿಗೆಯನ್ನೂ ಖರೀದಿಸಿದ್ದು ಜೇನು ಕೃಷಿ ಆರಂಭಿಸಿದ್ದೇನೆ’ ಎಂದು ತಿಳಿಸಿದರು.

ಮನೆ ಸುತ್ತ ಉದ್ಯಾನ:‘ಒಂದು ಕಾಲದಲ್ಲಿ ಹೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಸಮಗ್ರ ಕೃಷಿಯಿಂದಲೇ ನಮ್ಮ ಬದುಕು ಹಸನಾಗಿದೆ. ಹೀಗಾಗಿ ಆದಾಯ ಕೊಡುವ ಬೆಳೆಗಷ್ಟೆ ಪ್ರಾಧಾನ್ಯತೆ ನೀಡದೆ ಮನೆ ಸುತ್ತ ಹಸಿರು ಕಂಗೊಳಿಸಲಿ ಎಂಬ ಕಾರಣಕ್ಕೆ ಉದ್ಯಾನ ರೂಪಿಸಿದ್ದೇನೆ’ ಎಂದು ಗಣಪತಿ ಸಿದ್ದಿ ಹೂವಿನ ಗಿಡಗಳ ರಾಶಿಯತ್ತ ಕೈತೋರಿದರು.

ಅವರ ಮನೆಯ ಸುತ್ತ 20ಕ್ಕೂ ಹೆಚ್ಚು ಬಗೆಯ ದಾಸವಾಳ, ಇನ್ನಿತರ ಹೂವಿನ ಗಿಡಗಳು ಬೆಳೆದಿದ್ದವು. ಅವುಗಳಲ್ಲಿ ಬಣ್ಣ ಬಣ್ಣದ ಹೂವುಗಳು ಕಂಗೊಳಿಸುತ್ತಿದ್ದವು.

*
ಪರಿಣಿತರು ಅಥವಾ ಅನುಭವಿ ಕೃಷಿಕರಿಂದ ಮಾಹಿತಿ ಪಡೆಯುತ್ತೇನೆ. ನನ್ನಿಂದ ಸಾಧ್ಯವಾಗುವುದಾದರೆ ಮಾತ್ರ ಹೊಸ ಬೆಳೆ ಬೆಳೆಯಲು ಆರಂಭಿಸುತ್ತೇನೆ.
-ಗಣಪತಿ ಸಿದ್ದಿ,ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT