ಕಾರವಾರ: ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆ ಮೀಸಲಾತಿ ನಿಗದಿಯಾಗಿರುವ ಬೆನ್ನಲ್ಲೆ ಗದ್ದುಗೆ ಏರಲು ಪೈಪೋಟಿ ಹೆಚ್ಚಿದೆ.
ನಗರಸಭೆ ಆಡಳಿತ ಮಂಡಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಹೊಂದಿದ್ದರೂ ಪ್ರಸಕ್ತ ಅವಧಿಯ ಮೊದಲಾರ್ಧದಲ್ಲಿ ಬಿಜೆಪಿ ಅಧಿಕಾರ ನಡೆಸಿತ್ತು. ಎರಡೂ ಪಕ್ಷಗಳು ತಲಾ 11 ಸದಸ್ಯರನ್ನು ಹೊಂದಿದ್ದರೆ, ಜೆಡಿಎಸ್ 4 ಮತ್ತು 5 ಮಂದಿ ಪಕ್ಷೇತರರು ಇದ್ದಾರೆ. ಜೆಡಿಎಸ್ ಬೆಂಬಲ ಪಡೆಯುವ ಜತೆಗೆ ನಾಲ್ವರು ಪಕ್ಷೇತರರ ಬೆಂಬಲ ಪಡೆದಿದ್ದ ಬಿಜೆಪಿಯು 2020ರ ನವೆಂಬರ್ ನಿಂದ 2023ರ ಏಪ್ರಿಲ್‍ವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯನ್ನು ಪಡೆದಿತ್ತು.
ಎರಡನೇ ಅವಧಿಗೆ ಈಚೆಗಷ್ಟೆ ಮೀಸಲಾತಿ ಪ್ರಕಟಗೊಂಡಿದ್ದು, ಮುಂದಿನ 14 ತಿಂಗಳ ಅವಧಿಗೆ ಹೊಸಬರ ಆಯ್ಕೆಗೆ ಕಣ ಸಜ್ಜುಗೊಳ್ಳುತ್ತಿದೆ. 2020ರ ವೇಳೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಜತೆಗೆ ಸ್ಥಳೀಯವಾಗಿ ಬಿಜೆಪಿಯ ರೂಪಾಲಿ ನಾಯ್ಕ ಶಾಸಕರಾಗಿದ್ದರಿಂದ ಅಧಿಕಾರದ ಗದ್ದುಗೆ ಏರಲು ಸುಲಭವಾಗಿತ್ತು. ಆದರೆ, ಈಗ ಕಾಂಗ್ರೆಸ್ ಅಧಿಕಾರಕ್ಕೇರಿದ್ದು, ಕಾಂಗ್ರೆಸ್ಸಿನ ಸತೀಶ ಸೈಲ್ ಸ್ಥಳೀಯ ಶಾಸಕರಾಗಿದ್ದಾರೆ.
‘11 ಸದಸ್ಯ ಬಲದ ಕಾಂಗ್ರೆಸ್ ಅಧಿಕಾರ ಪಡೆಯಲು ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಪಕ್ಷದ ಚಿಹ್ನೆಯಡಿ ಆಯ್ಕೆಯಾದ ಇಬ್ಬರು ಸದಸ್ಯರು ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದರು. 9 ಮಂದಿ ಮಾತ್ರ ಪಕ್ಷದಲ್ಲಿ ಸಕ್ರೀಯರಾಗಿದ್ದಾರೆ. ಅಧಿಕಾರ ಹಿಡಿಯುವ ಬಗ್ಗೆ ಶಾಸಕರೊಂದಿಗೆ ಇನ್ನೂ ಚರ್ಚೆ ನಡೆದಿಲ್ಲ. ಹುದ್ದೆ ಪಡೆಯಲು ಆಸಕ್ತಿ ವಹಿಸಿದವರು ಕಡಿಮೆ’ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ನಡೆದಿದೆ. ನಗರಸಭೆಗೂ ಇದು ಅನ್ವಯಿಸಬಹುದು. ಬಿಜೆಪಿಯೊಂದಿಗೆ ಕೆಲವು ಪಕ್ಷೇತರ ಸದಸ್ಯರು ಗುರುತಿಸಿಕೊಂಡಿದ್ದು ಜೆಡಿಎಸ್ ಕೂಡ ಬೆಂಬಲಿಸುವ ವಿಶ್ವಾಸವಿದೆ. ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿರುವ ಕಾರಣಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅಧ್ಯಕ್ಷ, ಉಪಾಧ್ಯಕ್ಷ ಯಾರಾಗಬಹುದು ಎಂಬುದನ್ನು ವರಿಷ್ಠರು ನಿರ್ಣಯಿಸಲಿದ್ದಾರೆ’ ಎಂದು ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಹೇಳಿದರು.
ನಗರಸಭೆಯಲ್ಲಿ ಪಕ್ಷ ಅಧಿಕಾರಕ್ಕೆ ಏರಲು ಸದಸ್ಯರೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.ರೂಪಾಲಿ ನಾಯ್ಕ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ
ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಣಯಿಸಿಲ್ಲ. ಎರಡು ದಿನದ ಬಳಿಕ ಸೂಕ್ತ ನಿರ್ಣಯ ಕೈಗೊಳ್ಳುವೆ.- ಆನಂದ್ ಅಸ್ನೋಟಿಕರ್, ಜೆಡಿಎಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.