ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಭದ್ರತೆ, ಸುರಕ್ಷತೆಗೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

Last Updated 1 ಡಿಸೆಂಬರ್ 2022, 16:21 IST
ಅಕ್ಷರ ಗಾತ್ರ

ಕಾರವಾರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಪಾವತಿಸುವುದು, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಸುರಕ್ಷತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ, ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು. ಮಾಲಾದೇವಿ ಮೈದಾನದಿಂದ ಮೆರವಣಿಗೆ ಆರಂಭಿಸಿ, ಕಾರ್ಮಿಕ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಎದುರು ಸೇರಿ ಘೋಷಣೆ ಕೂಗಿದರು.

ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ತನಕ ಸಮಯ ನಿಗದಿ ಮಾಡಬೇಕು. ಈ ಸಮಯದಲ್ಲಿ ಸಾರ್ವಜನಿಕರು ಅಂಗನವಾಡಿಗೆ ಭೇಟಿ ನೀಡಲು ಅವಕಾಶ ನೀಡಬಾರದು. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಅಲ್ಲೇ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸಬೇಕು. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸದಂತೆ ತಡೆಯಬೇಕು ಎಂದು ಆಗ್ರಹಿಸಿದರು.

48 ವರ್ಷಗಳಿಂದ ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರನ್ನು ಕೇವಲ ಗೌರವಧನ ನೀಡಿ ದುಡಿಸಿಕೊಳ್ಳುತ್ತಿದೆ. ಆದರೆ, ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ. ಮಕ್ಕಳಿಗೆ ಕೊಡಬೇಕಾದ ಮೊಟ್ಟೆಯ ಹಣ, ಅಂಗನವಾಡಿ ಕೇಂದ್ರದ ಕಟ್ಟಡ ಬಾಡಿಗೆ ಕೊಡುತ್ತಿಲ್ಲ. ಆದರೆ, ಕೆಲಸ ಮಾತ್ರ ಮಾಡಬೇಕು ಎಂಬ ಧೋರಣೆ ಅವಾಸ್ತವಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲ ಒತ್ತಡಗಳ ನಡುವೆ ಸಣ್ಣಪುಟ್ಟ ತಪ್ಪುಗಳಾದರೂ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯುವಂಥ ಕ್ರಮಗಳು ಹೆಚ್ಚುತ್ತಿವೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.

‘ಹೊಸ ಶಿಕ್ಷಣ ನೀತಿಯ ಅಪಾಯ’ಗಳನ್ನು ತಡೆಗಟ್ಟಬೇಕು. ಅದರ ಶಿಫಾರಸಿನಲ್ಲಿರುವ ಮೂರರಿಂದ ಎಂಟು ವರ್ಷದ ವರ್ಗೀಕರಣವನ್ನು ಕೈಬಿಡಬೇಕು. ಮೂರರಿಂದ ಆರು ವರ್ಷದ ಮಕ್ಕಳು ಅಂಗನವಾಡಿ ಕೇಂದ್ರದಲ್ಲೇ ಇರಬೇಕು ಎಂದು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು. ಈ ರೀತಿ ಒಟ್ಟು 24 ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಯಮುನಾ ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ಜಯಶ್ರೀ ಹೀರೇಕರ್, ಸಂಘಟನಾ ಕಾರ್ಯದರ್ಶಿಗಳಾದ ವಿದ್ಯಾ ವೈದ್ಯ, ಗೀತಾ ನಾಯ್ಕ, ಖಜಾಂಚಿ ಲಲಿತಾ ಹೆಗಡೆ ಸೇರಿದಂತೆ ವಿವಿಧ ಮುಖಂಡರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT