ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಅಭಿವೃದ್ಧಿಯ ನಿರೀಕ್ಷೆಯಲ್ಲಿ ಬಸವಣ್ಣ ಹೊಂಡ

Published 4 ಜೂನ್ 2023, 3:21 IST
Last Updated 4 ಜೂನ್ 2023, 3:21 IST
ಅಕ್ಷರ ಗಾತ್ರ

ಶಾಂತೇಶ ಬೆನಕನಕೊಪ್ಪ

ಮುಂಡಗೋಡ: ಇಲ್ಲಿನ ಬಸವಣ್ಣ ದೇವಸ್ಥಾನದ ಹೊಂಡವು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಮಳೆಯ ನೀರು ಹಾಗೂ ಕೊಳವೆ ಬಾವಿಯ ನೀರಿನಿಂದ ಮಾತ್ರ ತುಂಬುವಂತ ವ್ಯವಸ್ಥೆ ಹೊಂದಿರುವ ಬಸವಣ್ಣ ಹೊಂಡದ ಅಭಿವೃದ್ಧಿಗೆ ಜನರು ಬಲವಾಗಿ ಆಗ್ರಹಿಸುತ್ತಿದ್ದಾರೆ.

ಊರ ಮಧ್ಯದ ಹೊಂಡವು ತ್ಯಾಜ್ಯ ವಸ್ತುಗಳನ್ನು ಎಸೆಯುವ ಕೆರೆ ಎಂದು ಜನರು ತಿಳಿದುಕೊಂಡಂತಿದೆ. ಧಾರ್ಮಿಕ ಚಿತ್ರಗಳು, ಪೂಜಾ ಸಾಮಗ್ರಿಗಳು ಹೊಂಡದ ದಡ ಭಾಗ ಸಹಿತ ನೀರಿನಲ್ಲಿ ತೇಲುತ್ತಿರುತ್ತವೆ. ದಡದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ತ್ಯಾಜ್ಯಗಳಿಂದ ತುಂಬಿರುವ ನೀರು ತಳಭಾಗ ಕಂಡಿದ್ದರೂ, ಹೂಳೆತ್ತಬೇಕೆಂಬ ಆಸೆ ಕೈಗೂಡುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.

‘ಪಟ್ಟಣದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಹಾಗೂ ಮನೆ ಮನೆಯ ಗಣಪತಿ ಮೂರ್ತಿಗಳನ್ನು ಇದೇ ಹೊಂಡದಲ್ಲಿ ವಿಸರ್ಜಿಸುತ್ತಾರೆ. ಆ ಸಮಯದಲ್ಲಿ ಮಾತ್ರ ಹೊಂಡಕ್ಕೆ ಕೊಳವೆ ಬಾವಿಯಿಂದ ನೀರನ್ನು ತುಂಬಿಸುತ್ತಾರೆ. ಆದರೆ, ಮಲೀನವಾದ ನೀರನ್ನು ಹೊರಕ್ಕೆ ಹಾಕಿ, ಮತ್ತೆ ತಿಳಿ ನೀರನ್ನು ತುಂಬಿಸುವ ಯೋಚನೆ ಯಾರಿಗೂ ಇಲ್ಲ. ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನೀರಿನಲ್ಲಿ ಕರಗದ ವಸ್ತುಗಳನ್ನು ಒಂದೆಡೆ ಇಡಲು ಇಲ್ಲಿ ವ್ಯವಸ್ಥೆ ಮಾಡುವುದಿಲ್ಲ. ಕಾಲಕಾಲಕ್ಕೆ ದಡಭಾಗದಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ವಿರೂಪಗೊಂಡಿರುವ ದೇವರ ಫೋಟೊ, ಬಳಸಿದ ಧಾರ್ಮಿಕ ಸಾಮಗ್ರಿಗಳನ್ನು ನೀರಿಗೆ ಎಸೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರಿಂದ ಕೆರೆಯ ಅಂದವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀಧರ ಉಪ್ಪಾರ.

ಬಸವಣ್ಣ ಹೊಂಡದ ಅಭಿವೃದ್ಧಿಗೆ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ. ವಾಕಿಂಗ್‌ ಪಾತ್‌ ಮಾಡಲೂ ಯೋಜನೆ ರೂಪಿಸಲಾಗಿದೆ. ಜನರು ಹೊಂಡದಲ್ಲಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬೇಕು.
ಮಂಜುನಾಥ ಹರಮಲಕರ್‌, ಪಟ್ಟಣ ಪಂಚಾಯಿತಿ ಸದಸ್ಯ

‘ಹಲವು ವರ್ಷಗಳ ಹಿಂದೆ ಬಸವಣ್ಣ ಹೊಂಡದ ನೀರನ್ನೇ ದೇವರ ಪೂಜೆಗೆ ಬಳಸುತ್ತಿದ್ದರಂತೆ. ಹೊಂಡವು ತ್ಯಾಜ್ಯ ವಸ್ತುಗಳ ಸ್ಥಳವಾದಂತೆ ಕಾಣುತ್ತಿದೆ. ಹೊಂಡದ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಕೆಲಸ ಮಾಡಿಸಬಹುದಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ’ ಎಂದು ಸ್ಥಳೀಯ ನಿವಾಸಿ ಆದರ್ಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT