ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್ ನಡುವೆ ಕದನ

ಶಿರಸಿ ಕ್ಷೇತ್ರ: ರಾಷ್ಟ್ರೀಯ ಪಕ್ಷಗಳಲ್ಲಿ ಭಿನ್ನಮತದ್ದೇ ಕಾಟ
Last Updated 29 ಮಾರ್ಚ್ 2023, 16:13 IST
ಅಕ್ಷರ ಗಾತ್ರ

ಶಿರಸಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಮುಖವಾಗಿ ಗಮನಸೆಳೆಯುವ ಶಿರಸಿ–ಸಿದ್ದಾಪುರ ಪ್ರಜ್ಷಾವಂತ ಮತದಾರರ ಕ್ಷೇತ್ರ ಎಂಬ ಹಣೆಪಟ್ಟಿಯನ್ನೂ ಹೊತ್ತಿದೆ. ಈಚಿನ ವರ್ಷಗಳಲ್ಲಿ ಇಲ್ಲಿ ಬಿಜೆಪಿ ಸೋಲು ಕಂಡಿಲ್ಲ. ಈ ಬಾರಿ ಪ್ರಬಲ ಸ್ಪರ್ಧೆ ಏರ್ಪಟ್ಟರೆ ಅಚ್ಚರಿ ಇಲ್ಲ.

ಸತತ ಆರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ, ಸದ್ಯ ವಿಧಾನಸಭೆ ಅಧ್ಯಕ್ಷರೂ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಏಳನೆ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಅವರಿಗೆ ಕಾಂಗ್ರೆಸ್ ಪ್ರಬಲ ಎದುರಾಳಿಯಾಗಿದ್ದರೂ ಅಲ್ಲಿ ಯಾರು ಅಭ್ಯರ್ಥಿಯಾಗಬಹುದು ಎಂಬ ಕುತೂಹಲ ಕ್ಷೇತ್ರದ ಜನರಲ್ಲಿದೆ.

ಈ ಹಿಂದಿನ ಅವಧಿಯಲ್ಲಿ ಭೀಮಣ್ಣ ನಾಯ್ಕ ಎದುರಾಳಿಯಾಗಿ ಪೈಪೋಟಿ ನೀಡಿದ್ದರು. ಈ ಬಾರಿಯೂ ಅವರು ಕಾಂಗ್ರೆಸ್ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಈ ಹಿಂದೆ ಹಲವು ಚುನಾವಣೆಗಳಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿತ್ತಾದರೂ ಕಳೆದ ಚುನಾವಣೆಯಲ್ಲಿ ಅಷ್ಟೇನೂ ಪೈಪೋಟಿ ನೀಡಿರಲಿಲ್ಲ.

‘ಕಾಗೇರಿ ಹಿಂದುಳಿದ ವರ್ಗದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಶೇ.60ರಷ್ಟಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮುಖಂಡರಿಗೆ ಈ ಬಾರಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಿ’ ಎಂಬ ಆಗ್ರಹ ಬಿಜೆಪಿ ವಲಯಲ್ಲದಲ್ಲಿಯೇ ಇದೆ.

ಇಂತಹ ಆಗ್ರಹ ಮುನ್ನೆಲೆಗೆ ತರುವಲ್ಲಿ ಸಿದ್ದಾಪುರ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಜಿ.ನಾಯ್ಕ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದು ಬಿಜೆಪಿ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿ.

ಈಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಬಿ.ಎಲ್.ಸಂತೋಷ ಅವರನ್ನು ಕ್ಷೇತ್ರದ ಕೆಲ ಬಿಜೆಪಿ ಮುಖಂಡರು ಭೇಟಿಯಾಗಿ ‘ಯಾವುದೇ ಕಾರಣಕ್ಕೂ ಕಾಗೇರಿಗೆ ಟಿಕೆಟ್ ನೀಡಬಾರದು. ಹೊಸಬರಿಗೆ ಅವಕಾಶ ಕೊಡಿ’ ಎಂದು ಮನವಿ ಸಲ್ಲಿಸಿರುವುದು ಗುಟ್ಟಾಗಿ ಉಳಿದಿಲ್ಲ. ಇಷ್ಟರ ನಡುವೆಯೂ ಕಾಗೇರಿ ‘ಮುಂದಿನ ಅವಧಿಗೂ ನಾನೇ ಶಾಸಕ‘ ಎನ್ನುವ ವಿಶ್ವಾಸದ ಮಾತುಗಳನ್ನು ಸಾರ್ವಜನಿಕ ಸಭೆಗಳಲ್ಲಿ ಆಡುತ್ತಿದ್ದಾರೆ.

ಸಾಮಾಜಿಕ ಚಟುವಟಿಕೆ ಮೂಲಕ ಗುರುತಿಸಿಕೊಂಡ ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಪಕ್ಷೇತರವಾಗಿ ಸ್ಪರ್ಧಿಸುವ ಉತ್ಸಾಹ ತೋರಿದ್ದಾರೆ. ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟದ ನೇತೃತ್ವ ವಹಿಸಿದ್ದ ಉಪೇಂದ್ರ ಪೈ ಜೆಡಿಎಸ್ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ. ಆಮ್ ಆದ್ಮಿ ಪಕ್ಷದಿಂದ ಹಿತೇಂದ್ರ ನಾಯ್ಕ ಹೆಸರು ಈಗಾಗಲೇ ಘೋಷಣೆಯಾಗಿದೆ.

ರಾಷ್ಟ್ರೀಯ ಪಕ್ಷದ ಟಿಕೆಟ್‌ ಗಿಟ್ಟಿಸಲು ಆಕ್ಷಾಂಕಿಗಳು ನಾಯಕರ ಮನೆ ಬಾಗಿಲು ತಟ್ಟುತ್ತಿದ್ದರೆ, ಇತ್ತ ಅವರ ಬೆಂಬಲಿಗರು ಆಂತರಿಕವಾಗಿ ಬಣ ಬಲಾಢ್ಯಗೊಳಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಮೇಲ್ನೋಟದ ರಾಜಕೀಯ ಚಟುವಟಿಕೆಗಳು, ಮತದಾರರನ್ನು ಸೆಳೆಯುವ ಕಾರ್ಯಕ್ರಮಗಳು ಮಂದಗತಿಯಲ್ಲಿ ಸಾಗುತ್ತಿವೆ.

---------------

ಇಂದು...

ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯ ಜತೆಗೆ ಸ್ವಪಕ್ಷೀಯರ ವಿರೋಧ ಎದುರಾಗುತ್ತಿರುವುದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸವಲಾಗಿದೆ. ಗುಜರಾತ್ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆ ನಡೆದರೆ ಸತತ ಆರು ಬಾರಿ ಶಾಸಕರಾದ ಕಾಗೇರಿಗೆ ಟಿಕೆಟ್ ಕೈತಪ್ಪಬಹುದು ಎಂಬ ಲೆಕ್ಕಾಚಾರದಲ್ಲಿಯೇ ಪಕ್ಷದಲ್ಲಿ ಕೆ.ಜಿ.ನಾಯ್ಕ ಸಹಿತ ಕೆಲವರು ಆಕಾಂಕ್ಷಿತರಾಗಿದ್ದಾರೆ. ಚುನಾವಣಾ ವರ್ಷದಲ್ಲಿ ಅನುದಾನ ಹೆಚ್ಚು ತಂದಿರುವುದು ಬಿಜೆಪಿ ವರವಾಗುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಶಿಭೂಷಣ ಹೆಗಡೆ ಈ ಬಾರಿ ಬಿಜೆಪಿ ಸೇರುತ್ತಾರೆ ಎಂವ ವದಂತಿ ದಟ್ಟವಾಗುತ್ತಿದೆ.

ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಜನಪರ ಹೋರಾಟದ ಮೂಲಕ ಕಾಂಗ್ರೆಸ್ ತನ್ನ ಶಕ್ತಿ ವೃದ್ಧಿಸಿಕೊಂಡಿದ್ದು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಆದರೆ ಪಕ್ಷದಲ್ಲಿ ಅಭ್ಯರ್ಥಿಯಾಗಲು ಹಲವರು ಆಕಾಂಕ್ಷಿಗಳಾಗಿದ್ದಾರೆ. ಅವಕಾಶ ಸಿಗದವರು ಬಂಡಾಯ ಏಳಬಹುದು ಎಂಬ ಆತಂಕವೂ ಇದೆ. ಜೆಡಿಎಸ್ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.

---------------------

2018ರ ಚುನಾವಣೆ ಫಲಿತಾಂಶ

ಅಭ್ಯರ್ಥಿ;ಪಕ್ಷ;ಪಡೆದ ಮತ

ವಿಶ್ವೇಶ್ವರ ಹೆಗಡೆ ಕಾಗೇರಿ;ಬಿಜೆಪಿ;70,595

ಭೀಮಣ್ಣ ನಾಯ್ಕ;ಕಾಂಗ್ರೆಸ್;53,134

ಶಶಿಭೂಷಣ ಹೆಗಡೆ;ಜೆಡಿಎಸ್;26,625

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT