ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ‘ಹುತಾತ್ಮ’ನ ನೆನಪು: ಸ್ವಂತ ವೆಚ್ಚದಲ್ಲಿ ಬಸ್ ತಂಗುದಾಣ

ಕಡವಾಡ ಗ್ರಾಮದ ವಿನೋದ್ ನಾಯ್ಕ ಸ್ಮರಣಾರ್ಥ ತಂದೆಯಿಂದ ಕೊಡುಗೆ
Published 19 ಆಗಸ್ಟ್ 2023, 6:17 IST
Last Updated 19 ಆಗಸ್ಟ್ 2023, 6:17 IST
ಅಕ್ಷರ ಗಾತ್ರ

ಕಾರವಾರ: ಹದಿನೆಂಟು ವರ್ಷಗಳ ಹಿಂದೆ (2005) ಜಮ್ಮು ಮತ್ತು ಕಾಶ್ಮೀರದ ಪೂಂಚ್‍ ಸೆಕ್ಟರ್‌ನಲ್ಲಿ ಉಗ್ರಗಾಮಿಗಳ ಗುಂಡೇಟಿಗೆ ಬಲಿಯಾದ ತಾಲ್ಲೂಕಿನ ಕಡವಾಡ ಗ್ರಾಮದ ವಿನೋದ್ ನಾಯ್ಕ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ಅವರ ತಂದೆ ಇನ್ನೂ ತುಡಿಯುತ್ತಿದ್ದಾರೆ. ಇದಕ್ಕಾಗಿ ಮಗನಿಗೆ ಬಂದ ಪರಿಹಾರ ಮೊತ್ತದಲ್ಲಿ ಅವರು ಗ್ರಾಮಸ್ಥರಿಗೆ ಅಗತ್ಯವಿದ್ದ ಬಸ್ ತಂಗುದಾಣವನ್ನು ಸ್ವಂತ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದಾರೆ.

ಸುಮಾರು ₹ 1 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ತಂಗುದಾಣ ಸ್ವಾತಂತ್ರ್ಯೋತ್ಸವದ ದಿನವೇ ಉದ್ಘಾಟನೆಗೊಂಡಿದೆ. ವಿನೋದ್ ನಾಯ್ಕ ನೆನಪಿನಲ್ಲಿ ಅವರ ತಂದೆ ಮಹಾದೇವ ನಾಯ್ಕ ಅವರು ತಂಗುದಾಣ ನಿರ್ಮಿಸಿಕೊಟ್ಟಿದ್ದಾರೆ.

‘ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಮಗ 22ರ ಎಳೆ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ. ಅವನು ಹುತಾತ್ಮನಾಗಿ (ಆ. 18ಕ್ಕೆ) ಹದಿನೆಂಟು ವರ್ಷ ಕಳೆಯಿತು. ಆದರೆ ಅವನನ್ನು ಮರೆಯಲು ಸಾಧ್ಯವಿಲ್ಲ. ಅವನ ನೆನಪು ಗ್ರಾಮಸ್ಥರಲ್ಲಿ ಅಚ್ಚಳಿಯದೆ ಉಳಿಯಲಿ ಎಂಬ ಕಾರಣಕ್ಕೆ ಬಸ್ ತಂಗುದಾಣ ಸ್ಥಾಪಿಸಿದೆ’ ಎಂದು ಮಹಾದೇವ ನಾಯ್ಕ ಹೇಳಿದರು.

‘ಮಗ ಹುತಾತ್ಮನಾದ ಕಾರಣಕ್ಕೆ ₹ 15 ಲಕ್ಷದಷ್ಟು ಪರಿಹಾರ ಹಣ ಬಂದಿತ್ತು. ಅದನ್ನು ಸ್ವಂತ ಬಳಕೆಗೆ ವ್ಯಯಿಸಿಲ್ಲ. ಅವನದೇ ನೆನಪಿಗೆ ಮನೆಯ ಅಂಗಳದಲ್ಲೇ ಸ್ಮಾರಕ ನಿರ್ಮಿಸಿದ್ದೇವೆ. ಉಳಿದ ಮೊತ್ತವನ್ನು ಸಮಾಜಕ್ಕೆ ನೆರವಾಗುವ ಕೆಲಸ ಮಾಡಲು ಬಳಕೆ ಮಾಡುತ್ತಿದ್ದು ಅದರ ಭಾಗದಲ್ಲಿಯೇ ತಂಗುದಾಣವೂ ನಿರ್ಮಾಣಗೊಂಡಿದೆ’ ಎಂದರು. 

‘ಗ್ರಾಮದ ಮಹಾದೇವ ದೇವಸ್ಥಾನದ ಬಳಿ ಈ ಮೊದಲು ಬಸ್ ತಂಗುದಾಣವಿತ್ತು. ಕೆಲವು ವರ್ಷಗಳ ಹಿಂದೆ ಅದನ್ನು ಕೆಡವಲಾಗಿತ್ತು. ತಂಗುದಾಣವಿಲ್ಲದೆ ಜನರು ಬಿಸಿಲು, ಮಳೆಯಲ್ಲಿ ನಿಲ್ಲುತ್ತಿದ್ದುದನ್ನು ಕಂಡು ಬೇಸರವಾಗಿತ್ತು. ತಂಗುದಾಣ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಹಲವು ವರ್ಷ ಮೊದಲೇ ಪತ್ರ ಬರೆದಿದ್ದೆ. ಅವರು ನಿರ್ಮಿಸಲು ಮುಂದಾಗದಿದ್ದಾಗ ತಂಗುದಾಣ ನಿರ್ಮಿಸಲು ಮುಂದಾದೆ’ ಎಂದರು.

ನಾವೇನು ಆರ್ಥಿಕ ಸ್ಥಿತಿವಂತರಲ್ಲ. ಆದರೆ ಮಗನಿಗೆ ಬಂದ ಪರಿಹಾರದ ಮೊತ್ತವನ್ನು ಸ್ವಂತಕ್ಕೆ ಬಳಕೆ ಮಾಡದೇ ಅವನ ನೆನಪಿಗೆ ಸಮಾಜಕ್ಕೆ ಬೇಕಾದ ಕೆಲಸ ಮಾಡುತ್ತಿದ್ದೇವೆ
–ಮಹಾದೇವ ನಾಯ್ಕ ಹುತಾತ್ಮ ಯೋಧನ ತಂದೆ
ಬಸ್ ತಂಗುದಾಣ ನಿರ್ಮಿಸಲು ಮಹಾದೇವ ಅವರು ₹ 1 ಲಕ್ಷವನ್ನು ಗ್ರಾಮ ಪಂಚಾಯಿತಿಗೆ ನೀಡಿದ್ದರು. ಈ ಮೊತ್ತ ಬಳಸಿ ಅವರದ್ದೇ ಆಸೆಯಂತೆ ತಂಗುದಾಣ ನಿರ್ಮಿಸಲಾಗಿದೆ
–ಪ್ರಿಯಾ ಗೌಡ ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT