ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಆರ್. ಝಡ್ ನಿಯಮ ಸಡಲಿಕೆಗೆ ಚರ್ಚೆ

ಸಾಗರ ಪರಾಕ್ರಮ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪರಶೋತ್ತಮ ರೂಪಾಲಾ ಭರವಸೆ
Last Updated 18 ಮಾರ್ಚ್ 2023, 16:14 IST
ಅಕ್ಷರ ಗಾತ್ರ

ಕಾರವಾರ: ‘ಮೀನುಗಾರರ ಅನುಕೂಲಕ್ಕೆ ಸಿ.ಆರ್.ಝಡ್ ನಿಯಮಾವಳಿ ಸಡಿಲಿಕೆ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು’ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ ರೂಪಾಲಾ ಹೇಳಿದರು.

ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಾಗರ ಪರಿಕ್ರಮ ನಾಲ್ಕನೇ ಹಂತದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೀನುಗಾರರಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಲು ಮತ್ತು ಸರ್ಕಾರ ನೀಡಿದ ಸೌಲಭ್ಯ ತಲುಪಿದೆಯೆ ಎಂದು ಪರಿಶೀಲನೆಗೆ ಖುದ್ದು ಬಂದಿದ್ದೇನೆ. ಇಲ್ಲಿನ ಸ್ಥಿತಿಗತಿ ಮಾಹಿತಿಗಳನ್ನು ಪ್ರಧಾನಿ ಮೋದಿಗೆ ತಿಳಿಸುತ್ತೇನೆ’ ಎಂದರು.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಖಾತೆ ಸಚಿವ ಎಲ್. ಮುರುಗನ್, ‘ಮೀನುಗಾರಿಕೆ ಚಟುವಟಿಕೆಗೆ ವಾರ್ಷಿಕ ₹3 ಸಾವಿರ ಕೋಟಿ ಮಾತ್ರ ಅನುದಾನ ನೀಡಲಾಗುತ್ತಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗ ವಾರ್ಷಿಕ ಸರಾಸರಿ ₹20 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ’ ಎಂದರು.

ರಾಜ್ಯ ಮೀನುಗಾರಿಕಾ ಇಲಾಖೆ ಸಚಿವ ಎಸ್.ಅಂಗಾರ, ‘ತಂತ್ರಜ್ಞಾನ ಬಳಕೆಯಿಂದ ಮೀನುಗಾರಿಕೆ ಚಟವಟಿಕೆ ಗುಣಮಟ್ಟ ಸುಧಾರಿಸಬೇಕು. ಮೀನುಗಾರರೆ ಮೀನು ಮಾರಾಟದ ಕಾರ್ಯ ನಡೆಸಿದರೆ ಆರ್ಥಿಕ ಸುಧಾರಣೆಗೆ ಅನುಕೂಲ ಆಗಲಿದೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ, ‘ಮೀನುಗಾರರಿಗೆ ಮನೆ ಕಟ್ಟಲು ಸಿ.ಆರ್.ಝಡ್ ನಿಯಮಾವಳಿ ಸಡಿಲೀಕರಣಗೊಳಿಸಲು ಕ್ರಮವಾಗಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಕೇಂದ್ರ ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ಜತಿಂದ್ರನಾಥ ಸ್ವೈನ್, ತಟರಕ್ಷಕ ದಳದ ಪಶ್ಚಿಮ ವಲಯದ ಮುಖ್ಯಸ್ಥ ಮನೋಜ್ ಬಾಡಕರ್, ಸವಿತಾ ಬೆನ್ ರೂಪಾಲಾ, ಮೀನುಗಾರಿಕೆ ಇಲಾಖೆ ಅಧಿಕಾರಿಗಳಾದ ಜೆ.ಬಾಲಾಜಿ, ಸಲ್ಮಾ ಫಾಹಿಮ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಮೀನುಗಾರ ಮುಖಂಡರಾದ ಯಶಪಾಲ್ ಸುವರ್ಣ, ರಾಜು ತಾಂಡೇಲ್ ಇದ್ದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಸೇರಿದಂತೆ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಇದಕ್ಕೂ ಮುನ್ನ ಸಚಿವ ರೂಪಾಲಾ ಮಾಜಾಳಿ ಕಡಲತೀರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಮೀನುಗಾರರ ಸಮಸ್ಯೆ ಆಲಿಸುವ ಜತೆಗೆ ಮೀನುಗಾರರ ಮನೆಗೆ ಭೇಟಿ ನೀಡಿದರು.

ಮತ್ಸ್ಯ ಸಂಪದದಿಂದ ಉನ್ನತಿ:

‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದರ ಮೂಲಕ ₹20 ಸಾವಿರ ಕೋಟಿ ಮೊತ್ತವನ್ನು ಮೀನುಗಾರಿಕೆ ಅಭಿವೃದ್ಧಿಗೆ ನೀಡಲಾಗಿದೆ. ಇದು ಮೀನುಗಾರರ ಮೇಲೆ ಮೋದಿ ಸರ್ಕಾರ ಹೊಂದಿರುವ ಕಾಳಜಿ ತೋರಿಸುತ್ತದೆ’ ಎಂದು ಕೇಂದ್ರ ಮಿನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವ ಪರಶೋತ್ತಮ ರೂಪಾಲಾ ಹೇಳಿದರು.

ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಎಂಟು ಲಕ್ಷ ಕುಟುಂಬಗಳು ಮೀನುಗಾರಿಕೆ ಅವಲಂಬಿಸಿ ಜೀವನ ನಡೆಸುತ್ತಿವೆ. ಮೀನುಗಾರರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಒದಗಿಸಲು ಸಾಗರ ಪರಿಕ್ರಮ ಕಾರ್ಯಕ್ರಮ ರೂಪಿಸಲಾಗಿದೆ. ಮೀನುಗಾರಿಕಾ ಬಂದರುಗಳ ಸ್ಥಿತಿಗತಿ ಪರಿಶೀಲಿಸಿ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಬೆಳಕು ಮೀನುಗಾರಿಕೆಗೆ ಕಡಿವಾಣ ಹಾಕಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT