ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆ: ಕೇಂದ್ರ ತಂಡದಿಂದ ಸ್ಥಳ ಪರಿಶೀಲನೆ

ವಿವಿಧ ಅಧಿಕಾರಿಗಳೊಂದಿಗೆ ಸಾಧಕ ಬಾಧಕ ಚರ್ಚೆ
Last Updated 27 ಸೆಪ್ಟೆಂಬರ್ 2022, 14:54 IST
ಅಕ್ಷರ ಗಾತ್ರ

ಕಾರವಾರ: ಬಹು ಚರ್ಚಿತ ಹುಬ್ಬಳ್ಳಿ – ಅಂಕೋಲಾ ರೈಲ್ವೆ ಯೋಜನೆಯ ಸಾಧಕ–ಬಾಧಕಗಳ ಪರಿಶೀಲನೆಗೆ, ಕೇಂದ್ರ ತಂಡವು ಜಿಲ್ಲೆಗೆ ಮಂಗಳವಾರ ಭೇಟಿ ನೀಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ನೈರುತ್ಯ ರೈಲ್ವೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು. ಬಳಿಕ ಅಂಕೋಲಾ ಮತ್ತು ಯಲ್ಲಾಪುರ ತಾಲ್ಲೂಕುಗಳಲ್ಲಿ ರೈಲು ಮಾರ್ಗ ಸಾಗುವ ಮಾರ್ಗವನ್ನು ಪರಿಶೀಲಿಸಿದರು.

ಹೈಕೋರ್ಟ್ ಸೂಚನೆಯ ಮೇರೆಗೆ ತಂಡವನ್ನು ರಚಿಸಲಾಗಿದೆ. ದೇಶದ ವಿವಿಧ ಉನ್ನತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಜ್ಞರು, ಅಧಿಕಾರಿಗಳು ತಂಡದಲ್ಲಿದ್ದಾರೆ. ಮಂಗಳವಾರ ಅಂಕೋಲಾದ ನವಗದ್ದೆ, ಕಂಚಿನಬಾಗಿಲು, ಸುಂಕಸಾಳ ಕೋಟೆಪಾಲ, ರಾಮನಗುಳಿ ಭಾಗಕ್ಕೆ ಭೇಟಿ ನೀಡಿದರು.

ಉದ್ದೇಶಿತ ರೈಲು ಮಾರ್ಗವು ಸಾಗುವ ದಟ್ಟಾರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಭೌಗೋಳಿಕ ಪರಿಸ್ಥಿತಿ ಬಗ್ಗೆಯೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಳಿ ಅಳವಡಿಸಲು ಗುರುತಿಸಲಾಗಿರುವ ಮಾರ್ಗವನ್ನು ಜಿ.ಪಿ.ಎಸ್ ಮೂಲಕ ಪರಿಶೀಲಿಸಿದರು. ರೈಲು ಮಾರ್ಗ ಸಾಗುವ ದಾರಿಯಲ್ಲಿ ವಿವಿಧೆಡೆ 28 ಕಿ.ಮೀ ನಿರ್ಮಿಸಲು ಯೋಜಿಸಲಾಗಿರುವ ಸುರಂಗಗಳ ಕುರಿತು ತಾಂತ್ರಿಕ ವಿಚಾರಗಳನ್ನು ಚರ್ಚಿಸಿದರು.

ಆನೆ ಕಾರಿಡಾರ್ ಪರಿಶೀಲನೆ: ಈ ಯೋಜನೆ ಜಾರಿಯಾದರೆ ವನ್ಯಜೀವಿಗಳು, ಪರಿಸರದ ಮೇಲಾಗುವ ಪರಿಣಾಮಗಳು, ರೈಲು ಹಳಿಗಳ ಅಳವಡಿಕೆಯಿಂದ ಹುಲಿಗಳ ಸಂಚಾರಕ್ಕೆ, ಆನೆ ಕಾರಿಡಾರ್‌ಗೆ ತೊಂದರೆಯಾಗಲಿದೆಯೇ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸ್ಪಷ್ಟನೆ ಪಡೆದುಕೊಂಡರು. ಅಲ್ಲದೇ, ಮುಂದಿನ 50 ವರ್ಷಗಳಲ್ಲಿ ಈ ಭಾಗದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಆಗಬಹುದಾದ ಏರಿಕೆಯ ಕುರಿತೂ ಮಾಹಿತಿ ಪಡೆದರು ಎಂದು ತಂಡದೊಂದಿಗೆ ಇದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಂಡದಲ್ಲಿರುವ ಪ್ರಮುಖರು: ಕೇಂದ್ರ ಪರಿಸರ, ಅರಣ್ಯ ಮತ್ತು ಪರಿಸರ ಬದಲಾವಣೆ ಖಾತೆಯ ಡಿ.ಐ.ಜಿ ರಾಕೇಶ ಜಿಗಾನಿಯಾ, ಉಪ ನಿರ್ದೇಶಕ ಡಾ.ರಾಜೇಂದ್ರ ಕುಮಾರ್, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಡಾ.ಟಿ.ಎನ್.ಮನೋಹರ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರಾದ ಪ್ರೊಫೆಸರ್ ಸುಕುಮಾರ್, ಡಾ.ಎಚ್.ಎಸ್.ಸಿಂಗ್, ಭಾರತೀಯ ವನ್ಯಜೀವಿ ಸಂಸ್ಥೆಯ ಉಪ ನಿರ್ದೇಶಕ ಡಾ.ಜಿ.ವಿ.ಗೋಪಿ ಹಾಗೂ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊಫೆಸರ್ ನಾಗೇಶ ಆರ್.ಅಯ್ಯರ್ ಇದ್ದಾರೆ.

ಉದ್ದೇಶಿತ ಯೋಜನಾ ಪ್ರದೇಶದ ಪರಿಶೀಲನಾ ತಂಡದೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಕೆನರಾ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಕೆ.ಟಿ.ಆರ್ ನಿರ್ದೇಶಕ ಮರಿಯಾ ಕ್ರಿಸ್ತರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ, ಕುಮಟಾ ಉಪ ವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ, ಕಾರವಾರ ಮತ್ತು ಅಂಕೋಲಾದ ತಹಶೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳೂ ಸ್ಥಳ ಪರಿಶೀಲನೆಗೆ ತೆರಳಿದ್ದರು.

ಕಾರವಾರದಲ್ಲಿ ಸಂವಾದ:

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ನೈರುತ್ಯ ರೈಲ್ವೆಯ ಅಧಿಕಾರಿಗಳು ಕೇಂದ್ರ ತಂಡದ ಸದಸ್ಯರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಯೋಜನೆ ಜಾರಿ ಮಾಡಬೇಕಾದ ಅಗತ್ಯತೆ, ಖರ್ಚು ವೆಚ್ಚಗಳು, ಉದ್ದೇಶಿತ ರೈಲು ಮಾರ್ಗವು ಸಾಗುವ ಪ್ರದೇಶ ಸೇರಿದಂತೆ ಯೋಜನೆಯ ಸಂಪೂರ್ಣ ಮಾಹಿತಿಗಳನ್ನು ಪ್ರಾಜೆಕ್ಟರ್ ಮೂಲಕ ಪ್ರಸ್ತುತ ಪಡಿಸಿದರು.

ಕೇಂದ್ರ ತಂಡದ ಸದಸ್ಯರು ಸೆ.28ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ, ರೈಲು ಬಳಕೆದಾರರು ಮತ್ತು ಜನಪ್ರತಿನಿಧಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 2.30ರಿಂದ ಸಂಜೆ 5ರ ನಂತರವೂ ಸಭೆ ನಿಗದಿಯಾಗಿದೆ. ನಂತರ ಅವರು ಧಾರವಾಡಕ್ಕೆ ಪ್ರಯಾಣಿಸಲಿದ್ದಾರೆ.

ಸೆ.29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ತನಕ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಸ್ಥಳ ಪರಿಶೀಲನೆ ನಡೆಸುವರು. ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ, ರೈಲು ಬಳಕೆದಾರರು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT