ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಗೋದಾಮುಗಳಾದ ಸಮಾಜ ಕಲ್ಯಾಣ ಇಲಾಖೆಯ ಪದವಿ ಕಾಲೇಜು ಹಾಸ್ಟೆಲ್‌ಗಳು

ನಿರ್ಮಾಣಗೊಂಡು ಹಲವು ವರ್ಷ ಕಳೆದರೂ ಬಳಕೆಗೆ ಮೀನಮೇಷ
Last Updated 3 ಡಿಸೆಂಬರ್ 2022, 5:27 IST
ಅಕ್ಷರ ಗಾತ್ರ

ಶಿರಸಿ: ಕಾಲೇಜು ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಕೆಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಿಸಿದ ವಿದ್ಯಾರ್ಥಿ ವಸತಿ ನಿಲಯಗಳು ವಸತಿಗೆ ಬಳಕೆಯಾಗದೆ ಗೋದಾಮುಗಳಾಗಿ ಪರಿವರ್ತನೆಗೊಂಡಿವೆ.

2013-14ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಎಸ್.ಸಿ.ಪಿ‌ ಹಾಗೂ ಟಿ.ಎಸ್.ಪಿ. ಅನುದಾನ ಬಳಸಿ ಹಲವು ಸರ್ಕಾರಿ ಪದವಿ ಕಾಲೇಜುಗಳ ಆವರಣದಲ್ಲಿ ವಸತಿ ನಿಲಯ ನಿರ್ಮಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಇಲ್ಲಿ ವಸತಿ ಕಲ್ಪಿಸಲು ಕಟ್ಟಡಗಳು ನಿರ್ಮಾಣಗೊಂಡಿದ್ದವು.

2017ರ ವೇಳೆಗೆ ಶಿರಸಿ, ಕಾರವಾರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾದಲ್ಲಿ ಕಟ್ಟಡಗಳು ಪೂರ್ಣಗೊಂಡು ಉದ್ಘಾಟನೆಗೊಂಡಿದ್ದವು. ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಅವಕಾಶವನ್ನು ಮಾತ್ರ ಕೆಲವು ಹಾಸ್ಟೆಲ್‌ಗಳು ನೀಡಿವೆ. ಶಿರಸಿ, ಕಾರವಾರ, ಅಂಕೋಲಾ ಮತ್ತು ಮುಂಡಗೋಡದಲ್ಲಿ ಹಾಸ್ಟೆಲ್‌ನಲ್ಲಿ ಈ ಅವಕಾಶ ಸಿಕ್ಕಿಲ್ಲ.

ಶಿರಸಿ, ಕಾರವಾರ, ಅಂಕೋಲಾದಲ್ಲಿ ಕಾಲೇಜಿನ ಎನ್.ಎಸ್‌.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗೆ ಆಗಾಗ ಕಟ್ಟಡ ಬಳಸಿಕೊಳ್ಳಲಾಗುತ್ತಿದೆ. ಮುಂಡಗೋಡದಲ್ಲಿ ಕೋವಿಡ್ ವೇಳೆ ಸೋಂಕಿತರ ಆರೈಕೆ ಕೇಂದ್ರವಾಗಿ ಕಟ್ಟಡ ಬಳಕೆ ಆಗಿತ್ತು.

ದಾಂಡೇಲಿಯ ವಸತಿ ನಿಲಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಳಿಯಾಳದ ವಸತಿ ನಿಲಯವನ್ನು ಸಮಾಜ ಕಲ್ಯಾಣ ಇಲಾಖೆ ಸುಪರ್ದಿಗೆ ವಹಿಸಲಾಗಿದೆ. ಅಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮೆಟ್ರಿಕ್ ನಂತರದ ಕೆಲ ವಿದ್ಯಾರ್ಥಿಗಳು ಆಶ್ರಯ ಪಡೆದುಕೊಂಡಿದ್ದಾರೆ. ಮುಂಡಗೋಡ ವಸತಿ ನಿಲಯವನ್ನು ಸಮಾಜ ಕಲ್ಯಾಣ ಇಲಾಖೆ ಹಸ್ತಾಂತರಿಸಿಕೊಳ್ಳುವ ಪ್ರಯತ್ನದಲ್ಲಿದೆ.

‘ಕಾಲೇಜು ಆವರಣದಲ್ಲಿರುವ ಕಟ್ಟಡಕ್ಕೆ ನೀರು, ವಿದ್ಯುತ್ ಸೌಕರ್ಯ ಇಲ್ಲ. ಬಳಕೆ ಮಾಡದ ಪರಿಣಾಮ ಹಾಳು ಸುರಿಯುತ್ತಿದೆ. ಈಚೆಗೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಾಮಗ್ರಿಗಳ ದಾಸ್ತಾನಿಗೆ ಬಳಕೆ ಮಾಡುವುದು ಅನಿವಾರ್ಯವಾಗಿದೆ’ ಎಂದು ಶಿರಸಿ ಪದವಿ ಕಾಲೇಜಿ‌ನ ಸಿಬ್ಬಂದಿಯೊಬ್ಬರು ತಿಳಿಸಿದರು.

ಕಾಲೇಜಿನ ಎನ್.ಎಸ್.ಎಸ್‌. ಚಟುವಟಿಕೆಗೆ ಕಟ್ಟಡವನ್ನು ಆಗೊಮ್ಮೆ ಈಗೊಮ್ಮೆ ಬಳಸುವುದು ಬಿಟ್ಟರೆ ಉಳಿದ ದಿನಗಳಲ್ಲಿ ಖಾಲಿ ಬೀಳುತ್ತಿದೆ ಎಂದು ಕಾರವಾರ ಕಾಲೇಜಿನ ಸಿಬ್ಬಂದಿ ಹೇಳಿದರು.

ಹಸ್ತಾಂತರಕ್ಕೆ ಗೊಂದಲ:

‘ಕಾಲೇಜು ಶಿಕ್ಷಣ ಇಲಾಖೆ ನಿರ್ಮಿಸಿದ್ದ ವಿದ್ಯಾರ್ಥಿ ವಸತಿ ನಿಲಯಕ್ಕೆ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಂಡಿತ್ತೆ ವಿನಃ ಸರಿಯಾದ ಮೂಲಸೌಕರ್ಯ ಒದಗಿಸಿರಲಿಲ್ಲ. ಅಲ್ಲದೆ ವಸತಿ ನಿಲಯ ನಿರ್ವಹಣೆಗೆ ಇಲಾಖೆಯ ಸಿಬ್ಬಂದಿ ಇಲ್ಲದಿರುವುದು ಸಮಸ್ಯೆ ಆಗಿತ್ತು. ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಗೊಂದಲಗಳು ಎದುರಾಗಿದ್ದವು‌. ಹೀಗಾಗಿ ಹಲವು ವರ್ಷ ಖಾಲಿಯೇ ಉಳಿದಿತ್ತು. ಈಚೆಗೆ ವಸತಿ ನಿಲಯವನ್ನು ಅನಿವಾರ್ಯತೆಯಿಂದಾಗಿ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ’ ಎಂದು ಸರ್ಕಾರಿ ಕಾಲೇಜೊಂದರ ಪ್ರಾಚಾರ್ಯರು ತಿಳಿಸಿದರು.

******

ಕಾಲೇಜು ಆವರಣದಲ್ಲಿರುವ ವಿದ್ಯಾರ್ಥಿ ವಸತಿ ನಿಲಯವನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ಆಯಾ ಕಾಲೇಜುಗಳ ಪ್ರಾಚಾರ್ಯರ ಜತೆ ಚರ್ಚಿಸಿ ನಿರ್ಣಯಿಸಲಾಗುವುದು.

- ಕೃಷ್ಣಮೂರ್ತಿ ಬಿ.ಆರ್.,ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ, ಧಾರವಾಡ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT