ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ: ಡಿ.ಕೆ.ಶಿವಕುಮಾರ್ ಭರವಸೆ

ಕಾಂಗ್ರೆಸ್ ಪಕ್ಷದ ಜನಜಾಗೃತಿ ಸಮಾವೇಶ
Last Updated 24 ನವೆಂಬರ್ 2022, 15:16 IST
ಅಕ್ಷರ ಗಾತ್ರ

ಕುಮಟಾ/ ಕಾರವಾರ: ‘ಬಿ.ಜೆ.ಪಿ ಸರ್ಕಾರದ ಆಡಳಿತದಲ್ಲಿ ಯಾರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕರಾವಳಿಯ ಅಭಿವೃದ್ಧಿ ಮತ್ತು ಶಾಂತಿಗಾಗಿ ಪ್ರತ್ಯೇಕ ಪ್ರಣಾಳಿಕೆ ಕೊಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ‘ಜನಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಪರೇಶ ಮೇಸ್ತ ಸಾವು ಪ್ರಕರಣದಲ್ಲಿ ಹನಿ ಹನಿ ರಕ್ತಕ್ಕೂ ನ್ಯಾಯ ಕೊಡಿಸುವುದಾಗಿ ಇಲ್ಲಿನ ಸಂಸದ ಹೇಳಿದರು. ಅವರು ನ್ಯಾಯ ಕೊಡಿಸಿದ್ರಾ? ಬಿಜೆಪಿಯವರು ತಮ್ಮ ಪ್ರಣಾಳಿಕೆಯನ್ನು ಪಾಲಿಸಿದ್ದಾರಾ? ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ₹ 1 ಲಕ್ಷದವರೆಗೆ ಸಾಲಮನ್ನಾ ಮಾಡುವುದಾಗಿ ಹೇಳಿದಂತೆ ನಡೆದುಕೊಂಡರಾ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ಹಾಲಕ್ಕಿ ಸಮುದಾಯವರನ್ನು ಎಸ್.ಟಿ.ಗೆ ಸೇರಿಸಲು ಮನವಿ ಮಾಡುತ್ತಿದ್ದಾರೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಕ್ಕೆ ಇದು ಸಾಧ್ಯವಿಲ್ಲವೇ?’ ಎಂದರು.

ಎಐಸಿಸಿ ಉಪಾಧ್ಯಕ್ಷ ಮಯೂರ ಜಯಕುಮಾರ್ ಮಾತನಾಡಿ, ‘ಬಿಜೆಪಿ ಭ್ರಷ್ಟಾಚಾರ, ದುರಾಡಳಿತ ನಡೆಸುತ್ತಿದೆ. ಧರ್ಮ, ಜಾತಿ ಧೃವೀಕರಣ ಮಾಡುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ. ತನ್ನ ಆಡಳಿತದಲ್ಲಿ ಬಿಜೆಪಿ ದೇಶದಲ್ಲಿ ಜಾರಿ ಮಾಡಿರುವ ದೊಡ್ಡ ಪ್ರಮುಖ ನೀತಿ ಏನಿದೆ? ಆ ಪಕ್ಷದವರು ಶೇ 40 ಕಮಿಷನ್ ಪಡೆದು ಲೂಟಿ ಮಾಡಿದರು. ನಾವು ಪ್ರತಿಯೊಬ್ಬ ಮತದಾರರ ಬಳಿ ತಲುಪಬೇಕು. ಬಿಜೆಪಿಯ ದುರಾಡಳಿತವನ್ನು ಮನವರಿಕೆ ಮಾಡಬೇಕು’ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, ‘ಜಿಲ್ಲೆಯ ಬಿಜೆಪಿ ಮುಖಂಡರು ಪರೇಶ ಮೇಸ್ತನ ಸಾವು ಮುಂದಿಟ್ಟುಕೊಂಡೇ ಶಾಸಕರಾದಿರಿ. ಎಡ– ಬಲದಲ್ಲಿ ಸಾವಿನ ಸಾಲು ಮಾಡಿ, ಕೋಮು ಭಾವನೆ ಬಿತ್ತಿ ಸಮಾಜವನ್ನು ವಿಭಜಿಸಿದ್ದರ ಫಲಾನುಭವಿಗಳು ನೀವು’ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಆರ್.ವಿ.ದೇಶಪಾಂಡೆ, ‘ಬಿಜೆಪಿಯು ನ್ಯಾಯ ಮಾರ್ಗದಿಂದ ಅಧಿಕಾರಕ್ಕೆ ಬರುವುದಿಲ್ಲ. ಕೋಮು ಗಲಭೆ, ಗಲಾಟೆ ಮಾಡಿ ಅಧಿಕಾರ ಪಡೆಯುತ್ತದೆ. ಇದು ಕೇವಲ ಪರೇಶ ಮೇಸ್ತ ಸಾವಿನ ವಿಚಾರದಲ್ಲಿ ಹಮ್ಮಿಕೊಂಡಿರುವ ಜಾಗೃತಿ ಸಮಾವೇಶವಲ್ಲ. ಬಿಜೆಪಿ ಆಡಳಿತದಲ್ಲಿ ದೇಶದಾದ್ಯಂತ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಂದರ್ಭವಿದು’ ಎಂದರು.

‘ಹಿಂದೆ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು, ಬಡವರಿಗೆ ಭೂ ಹಕ್ಕು ಕೊಟ್ಟರು. ಬಂಗಾರಪ್ಪ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಟ್ಟರು. ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟರು. ಆದರೆ ಬಿಜೆಪಿ ಸರ್ಕಾರವು ಜನ ಬಡಿದಾಡುಕೊಳ್ಳುವಂತೆ ಅವರ ಕೈಗೆ ಬಂದೂಕು ಕೊಟ್ಟಿತು’ ಎಂದು ಶಾಸಕ ಮಧು ಬಂಗಾರಪ್ಪ ಟೀಕಿಸಿದರು.

‘ಸಂಖ್ಯೆ ಹೇಳಲಾಗದು’:‘ಮಾಜಿ ಶಾಸಕ ವಿ.ಎಸ್.ಪಾಟೀಲ ಸೇರಿದಂತೆ ಹಲವರು ಸದ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾದವರು ವಾಪಸ್ ಬರುತ್ತಿದ್ದಾರೆ. ಆದರೆ, ಎಷ್ಟು ಮಂದಿ ಬರುತ್ತಾರೆ ಎಂದು ಸಂಖ್ಯೆ ಹೇಳಲು ಸಾಧ್ಯವಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್ ಟಿಕೆಟ್‌ಗಾಗಿ ಬಹಳ ಬೇಡಿಕೆಯಿದೆ. ರಾಜ್ಯದಾದ್ಯಂತ 1,200ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಅಭ್ಯರ್ಥಿಗಳ ಬಗ್ಗೆ ಆದಷ್ಟು ಬೇಗ ತೀರ್ಮಾನಿಸುತ್ತೇವೆ. ಅರ್ಜಿ ಹಾಕಿದವರೆಲ್ಲರೂ ಬೂತ್‌ ಮಟ್ಟದಲ್ಲಿ ಶ್ರಮಿಸಬೇಕು’ ಎಂದರು.

ಆಕಾಂಕ್ಷಿಗಳ ಶಕ್ತಿ ಪ್ರದರ್ಶನ:ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಪಡೆಯನ್ನು ಸಮಾವೇಶಕ್ಕೆ ಕರೆಸಿ ಶಕ್ತಿ ಪ್ರದರ್ಶನ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ತಮ್ಮ ನೆಚ್ಚಿನ ಮುಖಂಡರ ಹೆಸರು ಕರೆದಾಗ, ಭಾಷಣ ಮಾಡಲು ಬಂದಾಗ ಜೈಕಾರ, ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು. ಮಿರ್ಜಾನ್‌ನಿಂದ ಕುಮಟಾದವರೆಗೆ ಬೈಕ್ ರ‍್ಯಾಲಿಯ ಮೂಲಕ ಸಾವಿರಾರು ಮಂದಿ ಸಾಗಿ ಬಂದರು.

ಪಕ್ಷದ ಜಿಲ್ಲಾ ಸಮತಿ ಅಧ್ಯಕ್ಷ ಭೀಮಣ್ಣ ನಾಯ್ಕ ಸ್ವಾಗತಿಸಿದರು. ಮಾಜಿ ಸಚಿವ ಆರ್.ಎನ್.ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಮುಖಂಡರಾದ ಶಿವಾನಂದ ಹೆಗಡೆ, ಯಶೋಧರ ನಾಯ್ಕ, ಹೊನ್ನಪ್ಪ ನಾಯಕ, ಪ್ರದೀಪ ನಾಯಕ, ಭಾಸ್ಕರ ಪಟಗಾರ, ರವಿಕುಮಾರ ಶೆಟ್ಟಿ, ವೀಣಾ ನಾಯ್ಕ, ಗಾಯತ್ರಿ ಗೌಡ, ದೀಪಕ್ ನಾಯ್ಕ, ಸಚಿನ್ ನಾಯ್ಕ, ಬ್ಲಾಕ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಜಗದೀಪ ತೆಂಗೇರಿ ಇದ್ದರು.

*
ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆಗೆ ಬಂದಾಗ ಪರೇಶನೂ ಪಾಲ್ಗೊಂಡಿದ್ದ. ನಂತರ ಆತನ ಸಾವನ್ನು ಬಿ.ಜೆ.ಪಿ ಸಂಪೂರ್ಣ ದುರ್ಬಳಕೆ ಮಾಡಿಕೊಂಡಿತು.
– ಶಾರದಾ ಶೆಟ್ಟಿ, ಮಾಜಿ ಶಾಸಕಿ.

*
ಸಂಸದೆ ಶೋಭಾ ಕರಂದ್ಲಾಜೆ, ಪರೇಶನ ಕೈಯಲ್ಲಿದ್ದ ಹಚ್ಚೆ ಕತ್ತರಿಸಲಾಗಿದೆ, ಬಿಸಿ ಎಣ್ಣೆ ಮೈಮೇಲೆ ಸುರಿಯಲಾಗಿದೆ ಎಂದು ಹೇಳಿದ್ದರು. ಸಿ.ಬಿ.ಐ ವರದಿಯು ನಿಜ ಸಂಗತಿ ತಿಳಿಸಿತು.
– ಸತೀಶ ಸೈಲ್, ಮಾಜಿ ಶಾಸಕ.

*
ಕಳೆದ ಚುನಾವಣೆಯಲ್ಲಿ ಬಿ.ಜೆ.ಪಿ ಪರೇಶ ಮೇಸ್ತ ಸಾವನ್ನು ಚುನಾವಣಾ ‘ಟೂಲ್ ಕಿಟ್’ ಮಾಡಿಕೊಂಡಿತು. ಮುಂದಿನ ಚುನಾವಣೆಗೂ ಅಂಥದ್ದೇ ಟೂಲ್‌ಕಿಟ್‌ಗೆ ತಯಾರಿ ನಡೆಸುತ್ತಿದೆ.
– ಮಂಕಾಳು ವೈದ್ಯ, ಮಾಜಿ ಶಾಸಕ.

*
ಮುಂದಿನ ಚುನಾವಣೆ ಗೆಲ್ಲಲು ಮತ್ತೊಬ್ಬ ಪರೇಶನನ್ನು ಬಿ.ಜೆ.ಪಿ ಹುಡುಕುತ್ತಿದೆ. ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿ, ವಿಷಯವನ್ನು ಜೀವಂತವಾಗಿಡುವುದು ಹುನ್ನಾರವಾಗಿದೆ.
– ಯು.ಟಿ.ಖಾದರ್, ಮಾಜಿ ಸಚಿವ.

*
ಹಿಟ್ಲರ್‌ನ ಆಸ್ಥಾನದಲ್ಲಿ ಗೋಬೆಲ್ ಎಂಬ ಮಂತ್ರಿ ಒಂದು ಸುಳ್ಳನ್ನು ಪದೇ ಪದೇ ಹೇಳಿದಾಗ ಸತ್ಯವಾಗುತ್ತದೆ ಎಂದುಕೊಂಡಿದ್ದ. ಬಿಜೆಪಿಯವರು ಅಂಥ ಗೋಬೆಲ್ ಕುಟುಂಬದವರು.
– ವಿನಯಕುಮಾರ್ ಸೊರಕೆ, ಮಾಜಿ ಸಂಸದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT