ಕಾರವಾರ: ಇಲ್ಲಿನ ಕಾಳಿ ನದಿಯ ಹಳೆಯ ಸೇತುವೆ ಕುಸಿದಿದ್ದರಿಂದ ಸಂಚಾರಕ್ಕೆ ಆಸರೆ ಆಗಿರುವ ಹೊಸ ಸೇತುವೆಯಲ್ಲೂ ಬಿರುಕು ಕಾಣಿಸಿಕೊಂಡ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕಾರವಾರ–ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿನ ಸೇತುವೆಯಲ್ಲಿ ಸದ್ಯ ದ್ವಿಮುಖ ವಾಹನ ಸಂಚಾರವಿದೆ. ಹೊಸ ಸೇತುವೆ ಅಡಿಭಾಗದಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ಸ್ಥಳೀಯರೊಬ್ಬರು ಚಿತ್ರಿಸಿದ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ವದಂತಿ ಹರಡಿದ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ನೀಡಲು ಸೇತುವೆ ನಿರ್ಮಿಸಿದ ಐಆರ್‌ಬಿ ವೆಸ್ಟ್ ಕೋಸ್ಟ್ ಟೋಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೂಚಿಸಲಾಗಿತ್ತು. ಸೇತುವೆ ಸುಭದ್ರವಿದೆ. ವಾಹನ ಸಂಚಾರಕ್ಕೆ ಸಮಸ್ಯೆ ಇಲ್ಲ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಲಿಖಿತ ವರದಿ ಸಲ್ಲಿಸಲು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
‘ಸೇತುವೆಯ ಕಾಮಗಾರಿ ಗುಣಮಟ್ಟದಿಂದ ಕೂಡಿರದ ಬಗ್ಗೆ ನಾಲ್ಕು ವರ್ಷಗಳ ಹಿಂದೆಯೇ ಶಂಕೆ ವ್ಯಕ್ತಪಡಿಸಿದ್ದೆ. ಆಗ ರಾಜಕೀಯ ಮಾಡುತ್ತಿರುವೆ ಎಂದು ಕೆಲವರು ಆಕ್ಷೇಪಿಸಿದ್ದರು. ಸೇತುವೆಯ ಧಾರಣಾ ಸಾಮರ್ಥ್ಯದ ಬಗ್ಗೆ ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸುತ್ತಿದ್ದರೂ ಕಂಪನಿ ಯಾವುದೇ ಕ್ರಮವಹಿಸಿಲ್ಲ. ಸೇತುವೆಯ ಮೇಲೆ ವಾಹನ ದಟ್ಟಣೆ ಹೆಚ್ಚಿದ್ದು ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಶಾಸಕ ಸತೀಶ ಸೈಲ್ ಒತ್ತಾಯಿಸಿದ್ದಾರೆ.
ಕಾಳಿ ನದಿಯ ಸೇತುವೆಯ ಅಡಿಭಾಗದಲ್ಲಿ ಬಿರುಕು ಕಾಣಿಸಿಕೊಂಡಿರುವುದು.