ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರನ್ನವರಾತ್ರಿಯ ಭದ್ರಕಾಳಿ ವೈಭವ

ನೇತ್ರಾಸುರ, ಶುಂಭ ನಿಶುಂಭರನ್ನು ಸಂಹರಿಸಿ ಗೋಕರ್ಣದಲ್ಲಿ ನೆಲೆಸಿದ ದುರ್ಗೆ
Last Updated 1 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಗೋಕರ್ಣ: ಪವಿತ್ರ ಕ್ಷೇತ್ರವಾದ ಗೋಕರ್ಣದಲ್ಲಿ ‘ದಕ್ಷಿಣ ಕಾಳಿ’ ಎಂದೇ ಪ್ರಸಿದ್ಧಿ ಪಡೆದ ಭದ್ರಕಾಳಿಯ ಶಕ್ತಿ, ಮಹಿಮೆ ಅಪಾರವಾದುದು. ಭದ್ರಕಾಳಿಯು ಗೋಕರ್ಣದ ಪೂರ್ವ ದಿಕ್ಕಿನ ದ್ವಾರದಲ್ಲಿದ್ದು, ಕ್ಷೇತ್ರವನ್ನು ರಕ್ಷಿಸುತ್ತಿದ್ದಾಳೆ. ಗೋಕರ್ಣಕ್ಕೆ ಶ್ರೀ ಮಹಾಬಲನು ಕ್ಷೇತ್ರಾಧೀಶ್ವರನಾಗಿದ್ದರೆ, ಭದ್ರಕಾಳಿ ಗ್ರಾಮ ದೇವತೆಯಾಗಿದ್ದಾಳೆ.

ಈ ಭದ್ರಕಾಳಿಯ ಕಥೆ ಹಾಗೂ ಉಲ್ಲೇಖವು ಅಸ್ಸಾಂನ ಗುವಾಹಟಿಯ ಕಾಮಾಖ್ಯಾ ದೇವಿಯ ಪುರಾಣದಲ್ಲಿಯೂ ಕಂಡು ಬರುತ್ತದೆ. ಇಲ್ಲಿಯ ಭದ್ರಕಾಳಿಯು ಅಲ್ಲಿಯ ಪುರಾಣದಂತೆ ದೇವಿಯ ಕಿವಿಯ ಸ್ಥಾನ ಎಂಬ ಉಲ್ಲೇಖವಿದೆ.

ಪುರಾಣ ಕಾಲದಲ್ಲಿ ರಾಕ್ಷಸರ ಉಪಟಳ ಹೆಚ್ಚಾದಾಗಲೆಲ್ಲಾ ದೇವಿ ಒಂದಿಲ್ಲೊಂದು ಅವತಾರವಾಗಿ ಲೋಕ ಕಲ್ಯಾಣ ಮಾಡಿದ ನಂಬಿಕೆಯಿದೆ. ಸಿಂಧು ದ್ವೀಪವನ್ನು ಆಳುತ್ತಿದ್ದ ನೇತ್ರಾಸುರನು ಮೂರೂ ಲೋಕಗಳನ್ನು ತನ್ನ ಶಕ್ತಿ ಪರಾಕ್ರಮಗಳಿಂದ ಮೂರಾಬಟ್ಟೆ ಮಾಡಿದ್ದನಂತೆ.

ಹರಿ– ಹರ, ಬ್ರಹ್ಮಾದಿಗಳು ಅತ್ಯುಗ್ರರಾದರು. ಇದರಿಂದ ಒಂದು ಅಮೋಘ ಕಾಂತಿ ಹೊರಹೊಮ್ಮಿತು. ಈ ಕಾಂತಿ ತಟ್ಟನೆ ಒಂದು ಹೆಣ್ಣಿನ ರೂಪ ತಳೆಯಿತು. ನೇತ್ರಾಸುರನನ್ನು ಜಯಿಸಲು ಇವಳೇ ತಕ್ಕವಳು ಎಂದು ಭಾವಿಸಿದ ದೇವತೆಗಳು, ಅತಿ ಶ್ರೇಷ್ಠವಾದ ಒಂದೊಂದು ಆಯುಧವನ್ನು ಮತ್ತು ತಮ್ಮ ವಿಶೇಷ ಶಕ್ತಿಯನ್ನೂ ಆ ಹೆಣ್ಣಿನ ರೂಪಕ್ಕೆ ನೀಡಿದರು. ಹೀಗೆ ಸರ್ವಾಯುಧಗಳನ್ನೂ ಜಯಿಸಿ ಈ ಸ್ತ್ರೀರೂಪವನ್ನು ಜಯಿಸುವುದು ಮೂರೂ ಜಗತ್ತಿನಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಆಕೆ ಅತಿ ದುರ್ಗಮಳಾಗಿದ್ದ ಕಾರಣ ‘ದುರ್ಗೆ’ ಎಂಬ ಹೆಸರು ಬಂತು ಎಂದು ಪೌರಾಣಿಕ ಉಲ್ಲೇಖಗಳಿವೆ.

ನೇತ್ರಾಸುರನ್ನು ಸಂಹರಿಸಿದ ದುರ್ಗೆ ಮುಂದೆ ಭದ್ರಕಾಳಿಯಾಗಿ ಶುಂಭ ನಿಶುಂಭರನ್ನು ಸಂಹರಿಸುತ್ತಾಳೆ. ತನಗೆ ವಹಿಸಿದ ಕಾರ್ಯವನ್ನು ಮುಗಿಸಿದ ಭದ್ರಕಾಳಿ ಶಂಕರನ ಅಪ್ಪಣೆಯಂತೆ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಬಂದಳು. ತನ್ನ ಆಯುಧಗಳನ್ನೆಲ್ಲಾ ನೀರಿನಿಂದ ತೊಳೆದು ತಪಸ್ಸನ್ನಾಚರಿಸಲು ಸಂಕಲ್ಪಿಸಿದಳು. ಪರಿಶುದ್ಧವಾದ ಶತಶೃಂಗ ಗಿರಿಯ ತಟದಲ್ಲಿ ದಕ್ಷಿಣಾಭಿಮುಖವಾಗಿ ನೆಲೆಸಿದಳು. ಗೋಕರ್ಣದ ಪ್ರವೇಶ ದ್ವಾರದಲ್ಲಿಯೇ ಭದ್ರಕಾಳಿ ದೇವಾಲಯವಿದೆ. ಎಲ್ಲಿ ದೇವಿಯು ಆಯುಧಗಳನ್ನು ತೊಳೆದಳೋ ಅದು ‘ಕಾಲೀಹೃದ’ (ಈಗ ಈ ತೀರ್ಥ ನಶಿಸಿಹೋಗಿದೆ) ಎಂದು ಖ್ಯಾತವಾಯಿತು ಎಂದು ಪ್ರತೀತಿಯಿದೆ.

ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಭದ್ರಕಾಳಿ, ದೇಶದಾದ್ಯಂತ ಹಲವು ಭಕ್ತರನ್ನು ಹೊಂದಿದೆ. ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಹಾಗೂ ವಸಂತ ನವರಾತ್ರಿ ಮಹೋತ್ಸವಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರುತ್ತವೆ.

ವಿಶೇಷವಾಗಿ ಶರನ್ನವರಾತ್ರಿಯೇ ಪ್ರಧಾನವಾದುದು. ಉತ್ಸವದ ಒಂಬತ್ತೂ ದಿನಗಳಲ್ಲಿ ಆಸ್ತಿಕ ಭಕ್ತರು ಪೂಜಾದಿ ಸೇವಾ ಕೈಂಕರ್ಯಗಳನ್ನು ನಿರಂತರವಾಗಿ ಮಾಡಿಸುತ್ತಾರೆ. ಮಧ್ಯಾಹ್ನದ ಮಹಾಪೂಜೆಯ ನಂತರ ಅಲಂಕಾರ ಮಹಾ ನೈವೇದ್ಯ, ಮಹಾ ಮಂಗಳಾರತಿ ನಡೆಯುತ್ತದೆ. ಅಪರಾಹ್ನದ ನಂತರ ದೇವರ ದರ್ಶನಕ್ಕೆ ಲಭ್ಯವಿದ್ದು, ದಿನವೂ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT