ಶುಕ್ರವಾರ, ಡಿಸೆಂಬರ್ 2, 2022
19 °C

ಕೆಂಪು ಹರಿವೆ ಸೊಪ್ಪಿನ ಬೀಜ ಉತ್ಪಾದನೆ: ಕೃಷಿಗೆ ಕೊಡುಗೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕೆಂಪು ಹರಿವೆ (ಹರಿಗೆ) ಸೊಪ್ಪನ್ನು ಬೆಳೆದು ಮಾರಾಟ ಮಾಡುವವರು ಬಹಳಷ್ಟು ರೈತರಿದ್ದಾರೆ. ಆದರೆ, ಅದಕ್ಕೆ ಬೇಕಾದ ಬೀಜವನ್ನು ಸಿದ್ಧಪಡಿಸುವವರು ವಿರಳ. ನಾನು ಆ ಕೆಲಸವನ್ನು ಏಳೆಂಟು ವರ್ಷಗಳಿಂದ ಮಾಡುತ್ತಿದ್ದೇನೆ...’

ತಮ್ಮ ಕೃಷಿ ಸಾಧನೆಯ ಬಗ್ಗೆ ಹೆಮ್ಮೆಯಿಂದ ಹೇಳುತ್ತ ಮಾತಿಗಿಳಿದವರು, ತಾಲ್ಲೂಕಿನ ತೋಡೂರಿನ ರೈತ ರಂಗನಾಥ ತೋಡೂರಕರ್.

ತಮ್ಮ ಪುಟ್ಟ ಜಮೀನಿನಲ್ಲಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ವರ್ಷಕ್ಕೆ ಸುಮಾರು ಒಂದೂವರೆ ಕ್ವಿಂಟಲ್‌ಗಳಷ್ಟು ಕೆಂಪು ಹರಿವೆಯ ಬೀಜವನ್ನು ತಮ್ಮ ಗದ್ದೆಯ 30 ಗುಂಟೆ ಜಮೀನಿನಲ್ಲಿ ಉತ್ಪಾದನೆ ಮಾಡುತ್ತಿದ್ದಾರೆ.

‘ಹರಿವೆ ಸೊಪ್ಪಿನ ಬೀಜಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಂಕೋಲಾದಲ್ಲಿ ಮಾರುಕಟ್ಟೆ ಲಭ್ಯವಿದೆ. ವರ್ಷಕ್ಕೆ ₹ 40 ಸಾವಿರದಿಂದ ₹ 50 ಸಾವಿರದ ಆದಾಯ ಸಿಗುತ್ತಿದೆ. ಎರಡು ವರ್ಷಗಳಿಂದ ಮಳೆಯ ವೈ‍ಪರೀತ್ಯದಿಂದಾಗಿ ಉತ್ಪಾದನೆ ಸರಿಯಾಗಿ ಆಗಿರಲಿಲ್ಲ. ಈ ವರ್ಷ ಚೆನ್ನಾಗಿದೆ. ಈ ವರ್ಷ ಎರಡು ಕ್ವಿಂಟಲ್‌ಗಳಷ್ಟು ಬೀಜಕ್ಕೆ ಬೇಡಿಕೆಯಿದೆ’ ಎಂದು ಮುಗುಳ್ನಗುತ್ತಾರೆ.

‘ಸಸಿ ನಾಟಿ ಮಾಡಿ ಬೀಜಗಳ ಉತ್ಪಾದನೆಗೆ ಎರಡೂವರೆ ತಿಂಗಳು ಬೇಕಾಗುತ್ತದೆ. ಬೀಜಗಳನ್ನು ಇರುವೆಗಳು ತಿನ್ನದಂತೆ ಗಿಡದ ಸುತ್ತಮುತ್ತ ಕೀಟನಾಶಕ ಸಿಂಪಡಿಸುತ್ತೇನೆ’ ಎಂದು ವಿವರಿಸುತ್ತಾರೆ.

54 ವರ್ಷದ ರಂಗನಾಥ ಅವರಿಗೆ ತಂದೆ ರತ್ನಾಕರ ಅವರ ಮಾರ್ಗದರ್ಶನವಿದೆ. ಸುಮಾರು 50 ವರ್ಷಗಳಿಂದ ಕೃಷಿಯಲ್ಲಿ ತೊಡಗಿರುವ ಅವರಿಗೆ ಅನುಭವ ಜೊತೆಯಾಗಿ ಬಂದಿದೆ. ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ, ಒಂದು ಎಕರೆಯಲ್ಲಿ ‘ಪಿ.ಎ.ಸಿ 837‌’ ತಳಿಯ ಹೈಬ್ರೀಡ್ ಭತ್ತದ ಕೃಷಿ ಮಾಡಿದ್ದಾರೆ. ಈಗ ಕಟಾವಿಗೆ ಸಿದ್ಧತೆ ನಡೆಸಿದ್ದಾರೆ. 

20 ಗುಂಟೆಯಲ್ಲಿ ಮಿಟ್ಕಾ ಬಾಳೆ ಬೇಸಾಯ ಮಾಡಿದ್ದಾರೆ. ಅದರ ಫಸಲನ್ನು ಸಮೀಪದ ಅಂಗಡಿಗೆ ಮಾರಾಟ ಮಾಡಿ ಪೂರಕ ಆದಾಯ ಗಳಿಸುತ್ತಿದ್ದಾರೆ. ಉಳಿದಂತೆ, 70 ತೆಂಗಿನ ಮರಗಳು, 100 ಅಡಿಕೆ ಮರಗಳೂ ತೋಟದಲ್ಲಿವೆ.

ಹೈನುಗಾರಿಕೆ, ಗೋಬರ್ ಅನಿಲ:

ಕೃಷಿಗೆ ಪೂರಕವಾಗಿರುವ ಹೈನುಗಾರಿಕೆಯನ್ನೂ ಮಾಡುತ್ತಿದ್ದು, ನಾಲ್ಕು ಎಮ್ಮೆಗಳನ್ನು ಸಲಹುತ್ತಿದ್ದಾರೆ. ಅವುಗಳ ಹಾಲನ್ನು ಸುತ್ತಮುತ್ತಲಿನ ಮನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಜಾನುವಾರಿಗೆ ಅನುಕೂಲವಾಗುವಂತೆ ನೇಪಿಯರ್ ಹುಲ್ಲನ್ನು (ಹಸಿ ಮೇವು) 15 ಗುಂಟೆಯಲ್ಲಿ ಬೆಳೆಸಿದ್ದಾರೆ. ವರ್ಷಕ್ಕೆ ನಾಲ್ಕೈದು ಸಲ ಕಟಾವಿಗೆ ಸಿಗುತ್ತಿರುವ ಕಾರಣ, ಒಣಹುಲ್ಲಿನ ಮೇಲೆ ಮಾಡಬೇಕಾದ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ. ಕೊಟ್ಟಿಗೆಯ ಗೊಬ್ಬರ ಹಾಗೂ ಸಾವಯವ ಗೊಬ್ಬರವನ್ನೇ ವ್ಯವಸಾಯಕ್ಕೆ ಬಳಕೆ ಮಾಡುತ್ತಿದ್ದಾರೆ.

‘ಜಾನುವಾರು ಇರುವ ಕಾರಣ ಮನೆಯ ಸಮೀಪದಲ್ಲೇ ಗೋಬರ್ ಅನಿಲದ ಘಟಕವನ್ನೂ ಸ್ಥಾಪಿಸಿಕೊಂಡಿದ್ದೇವೆ. ಅದರಿಂದ ಬರುವ ಅನಿಲವೇ ಮನೆ ಬಳಕೆಗೆ ಯಥೇಚ್ಛವಾಗಿ ಸಿಗುವ ಕಾರಣ ಎಲ್.ಪಿ.ಜಿ. ಮೇಲೆ ಅವಲಂಬನೆ ಬಹಳ ಕಡಿಮೆಯಾಗಿದೆ’ ಎಂದು ಅವರು ಹೇಳುತ್ತಾರೆ.

ಕೃಷಿ ಸಾಧನೆಗೆ ಪ್ರಶಸ್ತಿಯ ಗರಿ:

ರಂಗನಾಥ ಅವರ ಕೃಷಿ ಸಾಧನೆಯನ್ನು ಪರಿಗಣಿಸಿ, ಕೇಂದ್ರ ಪುರಸ್ಕೃತ ‘ಆತ್ಮ’ ಯೋಜನೆಯಿಂದ ಕಳೆದ ಬಾರಿ ‘ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ’ ‍ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಮಾಹಿತಿ ನೀಡಿದ ಯೋಜನೆಯ ಕಾರವಾರ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಮಂಜುನಾಥ ಡಿ.ಕೆ, ‘ರಂಗನಾಥ ಅವರು ವ್ಯವಸಾಯದಲ್ಲಿ ಶ್ರದ್ಧೆ ಹೊಂದಿದ್ದಾರೆ. ಬೇಸಾಯವನ್ನು ಮತ್ತಷ್ಟು ಉತ್ತಮಗೊಳಿಸಲು ಅಗತ್ಯವಿರುವ ತಾಂತ್ರಿಕ ಮಾಹಿತಿಗಳನ್ನು ನೀಡಿದ್ದೇವೆ. ಭತ್ತವನ್ನು ಸಾಲು ನಾಟಿ ಮಾಡುವಂತೆ ನೀಡಿದ್ದ ಸಲಹೆಯನ್ನು ಸ್ವೀಕರಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.