ಗೋಕರ್ಣ: ಇಲ್ಲಿಯ ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ದುಬ್ಬನಸಸಿ ಬೀಚಿನಲ್ಲಿ ಬುಧವಾರ ಸಮುದ್ರದಲ್ಲಿ ಈಜಾಡಲು ಇಳಿದ 6 ಜನರ ಪ್ರವಾಸಿಗರಲ್ಲಿ, ಒಬ್ಬರು ಅಲೆಯ ರಭಸಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾದರೆ, ಉಳಿದ ಐವರು ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ವಿನಯ ಎಸ್.ವಿ (23) ಎಂಬಾತ ನಾಪತ್ತೆಯಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ಅನಸ್ವರ್ ರವೀಂದ್ರಾ (25), ಮಷಿರಾ ತಲಿಫಾ (23) ಹಾಗೂ ಮನೋಜ್.ಪಿ.ಎನ್ ( 23), ಗೋಪಿ ಎಂ. (23) ಮತ್ತು ಮುರಳೀಧರನ್ ವಿ. (23) ಎಂಬ ಐವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 48 ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡಲು ತೆರಳಿದಾಗ ಈ ಘಟನೆ ನಡೆದಿದೆ. ಅಲೆಯ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಅದರಲ್ಲಿ ಐವರನ್ನು ಸ್ಥಳೀಯರು ರಕ್ಷಿಸಿ ದಡಕ್ಕೆ ತಂದಿದ್ದಾರೆ.
ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ನಾಪತ್ತೆಯಾದವನ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.