ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಕಾಡಿನ ಮರಗಳ ಬೀಜ ಸಂಗ್ರಹಿಸುವ ರಾಮಚಂದ್ರ

ಮುಸೇಗಾರಿನಲ್ಲಿ ಹಣ್ಣುಗಳ ಘಮಲು
Last Updated 9 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಸಿದ್ದಾಪುರ: ವಾಣಿಜ್ಯ ಬೆಳೆಗಳೊಟ್ಟಿಗೆ ವಿವಿಧ ಬಗೆಯ ಹಣ್ಣಿನ ಗಿಡ, ಹೂವಿನ ಗಿಡಗಳನ್ನು ಬೆಳೆದು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಸೇಗಾರಿನ ಕೃಷಿಕ ರಾಮಚಂದ್ರ ನಾರಾಯಣ ಹೆಗಡೆ.

ಮಲೆನಾಡಿನ ಬಹುತೇಕ ಕಡೆಗಳಲ್ಲಿ ಕೃಷಿ ಎಂಬುದು ಕೇವಲ ವಾಣಿಜ್ಯ ಬೆಳೆಗಳಿಗೆ ಸೀಮಿತಗೊಳ್ಳುತ್ತಿದೆ. ಆದರೆ ಕೃಷಿಕ ರಾಮಚಂದ್ರ ಹೆಗಡೆ ತಮ್ಮ ಇಳಿಯ ವಯಸ್ಸಿನಲ್ಲಿಯೂ ಅಳಿವಿನಂಚಿನಲ್ಲಿರುವ ಕಾಡಿನ ಮರಗಳ ಬೀಜಗಳನ್ನು ಸಂಗ್ರಹಿಸಿ ಉಳಿಸುವುದು ಇನ್ನೊಂದು ವಿಶೇಷ.

ಪೂರ್ವಜರಿಂದ ಬಂದ ಸುಮಾರು ಮೂರು ಎಕರೆಯಷ್ಟು ಜಾಗದಲ್ಲಿ ಅಡಿಕೆ, ಬಾಳೆ, ಕಾಳುಮೆಣಸು, ಲವಂಗ, ಏಲಕ್ಕಿ, ಜಾಯಿಕಾಯಿ, ಅರಿಶಿನ, ಕಾಫಿ, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುವುದರ ಜತೆಗೆ ಜೇನು ಸಾಕಣೆ ಮಾಡಿ ಸುಸ್ಥಿರ ಆದಾಯ ಗಳಿಸುತ್ತಿದ್ದಾರೆ. ಪತ್ನಿ ನೇತ್ರಾವತಿ ಹೆಗಡೆ ಪತಿಯ ಕೃಷಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

‘ಆರಂಭದಲ್ಲಿ ಮನೆಯಲ್ಲಿ ಮಾವು, ಪೇರಲೆ, ಪಪ್ಪಾಯ ಹಣ್ಣಿನ ಗಿಡಗಳಿದ್ದವು. ಪೇಟೆಯಿಂದ ಹಣ ಕೊಟ್ಟು ಖರೀದಿಸಿದ ಹಣ್ಣುಗಳಿಗಿಂತ ಮನೆಯಲ್ಲೇ ಬೆಳೆದ ಹಣ್ಣುಗಳನ್ನು ತಿನ್ನುವಾಗ ಖುಷಿ ಎನಿಸುತ್ತಿತ್ತು. ಮನೆಯಲ್ಲಿಯೇ ಹಣ್ಣುಗಳನ್ನು ಬೆಳೆಯಲು ನಿರ್ಧರಿಸಿದೆ. ಈಗ ಸೇಬು, ಲಿಚ್ಚಿ, ರಾಮ್ ಬೂಟಾನ್, ದ್ರಾಕ್ಷಿ, ಕೊಡಗಿನ ಕಿತ್ತಲೆ, ಮೂಸಂಬಿ, ದಾಳಿಂಬೆ, ಚಿಕ್ಕು, ಸ್ಟ್ರಾಬೆರಿ, ಕ್ರೀಮ್ ಫ್ರೂಟ್, ಮೆಲಾಸ್ಟಿನ್, ಚಕೊತ್ತಾ, ಡ್ರಾಗನ್ ಫ್ರೂಟ್, ಸ್ಟಾರ್ ಫ್ರೂಟ್, ಅನಾನಸ್, ಪುನ್ನೇರಲೆ, ಜಂಬೆ ಮುಂತಾದ ಹಣ್ಣುಗಳನ್ನು ಮನೆಯಲ್ಲಿಯೇ ಬೆಳೆಯುತ್ತಿದ್ದೇನೆ’ ಎನ್ನುತ್ತಾರೆ ಕೃಷಿಕ ರಾಮಚಂದ್ರ ಹೆಗಡೆ.

ಹೂವಿನ ಗಿಡಗಳ ಬಗೆಗೂ ಒಲವು ಹೊಂದಿದ ಇವರು ತಮ್ಮ ಮನೆಯಂಗಳದಲ್ಲಿ ಸುಮಾರು 9 ಜಾತಿಯ ಮಲ್ಲಿಗೆ, 20 ಬಗೆಯ ದಾಸವಾಳ, ಐದು ಜಾತಿಯ ಕೋಟೆ ಗೆಂಟಿಗೆ, ಎಂಟು ಜಾತಿಯ ಗುಲಾಬಿ, ಅಪರೂಪವಾದ ನಾಗಲಿಂಗ, ಸೀತಾ ಅಶೋಕ, ಫಾರೆಸ್ಟ್ ಫ್ಲವರ್ ಮುಂತಾದ ಹೂವಿನ ಗಿಡಗಳನ್ನು ಬೆಳೆದಿದ್ದಾರೆ. ಮನೆಯ ಸುತ್ತ ಹಲವು ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ತೋಟದ ಅಂಚಿನಲ್ಲಿ ಕೊಳಲು ತಯಾರಿಕೆಗೆ ಬಳಸುವ ವಾಟೆ ಬಿದಿರು, ಬರ್ಮಾ ಬಿದಿರು ಬೆಳೆದಿದ್ದಾರೆ.

ಬೀಜ ಸಂಗ್ರಹಣೆ ಆಸಕ್ತಿ: ಅಪರೂಪದ ತಳಿಯ ಗಿಡಗಳ ಬೀಜ ಸಂಗ್ರಹಿಸುವುದು ರಾಮಚಂದ್ರ ಹೆಗಡೆ ಅವರ ಹವ್ಯಾಸವಾಗಿದೆ. ಸುಮಾರು ಈಗ 300ಕ್ಕೂ ಹೆಚ್ಚು ಜಾತಿಯ ಮರ, ಬಳ್ಳಿಗಳ ಬೀಜಗಳನ್ನು ಸಂಗ್ರಹಿಸಿದ್ದಾರೆ.

‘ಕೃಷಿಗೆ ಅರಣ್ಯ ಸಂಪತ್ತು ಉಳಿವು ಕೂಡ ಅತಿ ಮುಖ್ಯ. ಕೃಷಿಯ ಹೆಸರಿನಲ್ಲಿ ಅರಣ್ಯ ನಾಶ ನಡೆಯುತ್ತಿದೆ. ಹಲವಾರು ಜಾತಿಯ ಮರಗಳು ಅಳಿವಿನಂಚಿನಲ್ಲಿದೆ. ಕಾಡಿನ ಮರ ಬಳ್ಳಿಗಳ ಬೀಜಗಳನ್ನು ಸಂಗ್ರಹಿಸುವ ಕೆಲಸ ಆರಂಭಿಸಿದೆ. ಬೇರೆ ಪ್ರದೇಶಗಳಿಗೆ ಹೋದಾಗ ಅಲ್ಲಿನ ಕಾಡುಗಳನ್ನು ಸುತ್ತಿ ಮರ, ಬಳ್ಳಿಗಳ ಬೀಜಗಳನ್ನು ಸಂಗ್ರಹಿಸುತ್ತೇನೆ. ಸಂಬಂಧಿಕರ ಅಥವಾ ಪರಿಚಯಸ್ಥರ ಮನೆಗಳಿಗೆ ಹೋದಾಗ ಯಾವುದಾರೂ ಒಂದು ಗಿಡ ಅಥವಾ ಬೀಜ ಸಂಗ್ರಹಿಸಿ ತರುವುದನ್ನು ಹವ್ಯಾಸವಾಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ರಾಮಚಂದ್ರ ಹೆಗಡೆ.

***

ಕೃಷಿಯಿಂದ ಕೇವಲ ಆದಾಯವನ್ನಷ್ಟೆ ನೋಡದೆ ನೆಟ್ಟ ಗಿಡಗಳ ಜೊತೆ ಭಾವನಾನ್ಮಕ ಸಂಬಂಧ ಬೆಳೆಸಿಕೊಂಡಾಗ ಮಾತ್ರ ಕೃಷಿಯಲ್ಲಿ ಆಸಕ್ತಿ ಮೂಡುತ್ತದೆ.
–ರಾಮಚಂದ್ರ ಹೆಗಡೆ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT