ಕಾರವಾರ: ಒಂದೂವರೆ ವರ್ಷಗಳ ಹಿಂದೆ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತ ಘಟಿಸಿದ್ದು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿತ್ತು. ದುರಂತದಲ್ಲಿ ಗಂಗಾವಳಿ ನದಿಗೆ ಸೇರಿದ್ದ ಮಣ್ಣಿನ ರಾಶಿ ಇಂದಿಗೂ ಉಳುವರೆ ಗ್ರಾಮಸ್ಥರ ಆತಂಕ ಜೀವಂತವಾಗಿಟ್ಟಿದೆ. ನದಿಯಲ್ಲಿ ಸಿಲುಕಿರುವ ಹೂಳು ತೆರವುಗೊಳಿಸಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿರುವ ಆರೋಪ ಹೆಚ್ಚಿದೆ.

2024ರ ಜುಲೈ 16ರಂದು ಶಿರೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿದು 11 ಮಂದಿ ಮೃತಪಟ್ಟಿದ್ದರು. ಹೆದ್ದಾರಿ ಆವರಿಸಿಕೊಂಡು, ಪಕ್ಕದಲ್ಲಿದ್ದ ನದಿಗೆ ಬೃಹತ್ ಗಾತ್ರದ ಬಂಡೆಗಳು, ಮಣ್ಣಿನ ರಾಶಿ ಸೇರಿತ್ತು. ದುರ್ಘಟನೆ ಸಂಭವಿಸಿ ಸುದೀರ್ಘ ಅವಧಿಯಾದರೂ ಮಣ್ಣಿನ ರಾಶಿ ತೆರವುಗೊಳಿಸುವ ಕೆಲಸ ನಡೆದಿಲ್ಲ ಎಂಬುದು ಸ್ಥಳೀಯ ಗ್ರಾಮಸ್ಥರ ಆರೋಪ.

‘ಗಂಗಾವಳಿ ನದಿಯಲ್ಲಿ ಸಿಲುಕಿರುವ ಹೂಳಿನ ರಾಶಿಯಿಂದ ಮಳೆಗಾಲದಲ್ಲಿ ಉಳುವರೆ, ವಾಸರ ಕುದ್ರಿಗೆ ಸೇರಿದಂತೆ ಹಲವು ಗ್ರಾಮಗಳ ಜನರು ಪ್ರವಾಹ ಭೀತಿ ಎದುರಿಸಬೇಕಾಗುತ್ತಿದೆ. ನದಿಯಂಚಿನ ಜನರ ಆತಂಕ ಹೂಳಿನ ಕಾರಣಕ್ಕೆ ಇನ್ನೂ ದೂರವಾಗಿಲ್ಲ. ಮಳೆಗಾಲ ಸಮೀಪಿಸಿದ್ದು, ಇನ್ನೂ ಹೂಳು ತೆರವುಗೊಳಿಸುವ ಕೆಲಸ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ’ ಎಂದು ಸ್ಥಳೀಯ ಮುಖಂಡ ಸುದರ್ಶನ ನಾಯಕ ಹೇಳಿದರು.

‘ಉಳುವರೆ ಗ್ರಾಮದ ಸಮೀಪದಲ್ಲೇ ನದಿಯಲ್ಲಿ ಹೂಳಿನ ರಾಶಿ ತುಂಬಿಕೊಂಡಿದೆ. ದಿನದಿಂದ ದಿನಕ್ಕೆ ಇಲ್ಲಿ ಹೂಳು ಸಂಗ್ರಹ ಹೆಚ್ಚುತ್ತಿದೆ. ಇದರಿಂದ ನದಿಯ ನೀರಿನ ಸಹಜ ಹರಿವಿಗೆ ಅಡ್ಡಿಯಾಗಬಹುದು. ಮೀನುಗಾರಿಕೆ ಚಟುವಟಿಕೆಗೂ ಹೂಳಿನಿಂದ ಅಡ್ಡಿಯಾಗುತ್ತಿದೆ’ ಎಂದು ಉಳುವರೆ ಗ್ರಾಮದ ಜಗದೀಶ ಗೌಡ ದೂರಿದರು.

‘ಗುಡ್ಡ ಕುಸಿತ ದುರಂತದಿಂದ ಗಂಗಾವಳಿ ನದಿಯಲ್ಲಿ ಸುಮಾರು 1.48 ಲಕ್ಷ ಕ್ಯುಬಿಕ್ ಮೀಟರ್ ಪ್ರಮಾಣದ ಹೂಳು ಸಂಗ್ರಹ ಆಗಿರುವುದಾಗಿ ಪ್ರಾಥಮಿಕ ಸಮೀಕ್ಷೆಯಿಂದ ಅಂದಾಜಿಸಲಾಗಿತ್ತು. ಇಷ್ಟೊಂದು ಪ್ರಮಾಣದ ಹೂಳು ತೆರವುಗೊಳಿಸಲು ಕನಿಷ್ಠ ₹4.5 ಕೋಟಿ ವೆಚ್ಚ ತಗಲುವುದಾಗಿ ಪ್ರಸ್ತಾವ ಸಲ್ಲಿಕೆಯಾಗಿತ್ತು’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು.

ನೇರ ಗುತ್ತಿಗೆಗೆ ಪತ್ರ

‘ಗಂಗಾವಳಿ ನದಿಯಲ್ಲಿ ಸಂಗ್ರಹವಾದ ಹೂಳು ತೆರವಿಗೆ ನಾಲ್ಕು ಬಾರಿ ಟೆಂಡರ್ ಕರೆದರೂ ಗುತ್ತಿಗೆ ಕಂಪನಿ ಆಯ್ಕೆ ಮಾಡಲು ತಾಂತ್ರಿಕ ಸಮಸ್ಯೆಗಳು ಎದುರಾದವು. ಟೆಂಡರ್ ಷರತ್ತಿಗೆ ಸೂಕ್ತ ಕಂಪನಿ ಆಯ್ಕೆಯಾಗಲಿಲ್ಲ. ಕೆಲವೊಮ್ಮೆ ಒಬ್ಬರೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ 4ಜಿ ವಿನಾಯಿತಿ ಮೂಲಕ ನೇರ ಗುತ್ತಿಗೆ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ₹2 ಕೋಟಿ ಹೂಳು ತೆರವು ಕಾರ್ಯಾಚರಣೆಗೆ ಮಂಜೂರಾಗಿದ್ದರಿಂದ ನದಿಯ ಮೇಲ್ಮಟ್ಟದಿಂದ 3 ಮೀಟರ್ ಆಳದವರೆಗಿನ ಸುಮಾರು 68 ಸಾವಿರ ಘನ ಮೀಟರ್ ಹೂಳು ತೆರವುಗೊಳಿಸಲು ನಿರ್ಧರಿಸಲಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿ ನಿರ್ದೇಶಕ ಟಿ.ಎಸ್.ರಾಠೋಡ್ ತಿಳಿಸಿದರು.

ಗಂಗಾವಳಿ ನದಿಯಲ್ಲಿ ಸಂಗ್ರಹವಾದ ಹೂಳು ತೆರವುಗೊಳಿಸಲು ತುರ್ತು ಕ್ರಮವಹಿಸಲು ಹಲವು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದ್ಯತೆ ಮೇರೆ ಕ್ರಮವಹಿಸಿಲ್ಲ
– ಸತೀಶ ಸೈಲ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.