ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸಂಪರ್ಕ ಸೇತುವೆ ನಿರೀಕ್ಷೆಯಲ್ಲಿ ಗಿಳಿಗುಂಡಿ

ಗ್ರಾಮಸ್ಥರ ಎರಡು ದಶಕಗಳ ಬೇಡಿಕೆ
Last Updated 2 ನವೆಂಬರ್ 2022, 13:08 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಬಂಡಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿಳಿಗುಂಡಿ ಹಳ್ಳಕ್ಕೆ ಸೇತುವೆ ನಿರ್ಮಿಸಿಬೇಕು ಎಂಬುದು ಸ್ಥಳೀಯ ಗ್ರಾಮಸ್ಥರ ಬೇಡಿಕೆ. ಎರಡು ದಶಕಗಳಿಂದಲೂ ಬೇಡಿಕೆ ಮುಂದಿಡುತ್ತಿದ್ದರೂ ಈಡೇರಿಲ್ಲ ಎಂಬುದು ಅವರ ಆರೋಪ.

ರೇವಣಕಟ್ಟಾ, ಹೊಳೆಪುಟ್ಟದಮನೆ, ಕೊಡೆಗದ್ದೆ, ಸೋಮನಳ್ಳಿ, ತಪ್ಪಲತೋಟ, ಬಾಳೆಗದ್ದೆ, ಕಬ್ಬಿನಮನೆ, ಜಡ್ಲಮನೆ, ಭಾಗಿಮನೆ, ಗಿಳಿಗುಂಡಿ, ಐಗನಮನೆ, ಮಾಗೇತೋಟ ಮುಂತಾದ ಹಳ್ಳಿಗಳಿಂದ ಶಿರಸಿ-ಕುಮಟಾ ಹೆದ್ದಾರಿ ಸಮೀಪವಾಗಿಸಲು ಗಿಳಿಗುಂಡಿ ಹಳ್ಳಕ್ಕೆ ಸೇತುವೆ ಅಗತ್ಯವಿದೆ. ಮಳೆಗಾಲದಲ್ಲಿ ಹಳ್ಳ ದಾಟುವುದು ಕಷ್ಟವಾಗುತ್ತಿದೆ.

ಮಂಜುಗುಣಿಯ ವೆಂಕಟರಮಣ ದೇವರ ಉಗಮ ಸ್ಥಾನವಾಗಿರುವ ಗಿಳಿಗುಂಡಿ ಗ್ರಾಮವು ಧಾರ್ಮಿಕ ಕೇಂದ್ರ ಬಿಂದುವಾಗಿದೆ. ವರ್ಷಕ್ಕೆ ಒಮ್ಮೆ ಮಂಜುಗುಣಿಯಿಂದ ವೆಂಕಟರಮಣ ದೇವರ ಪಲ್ಲಕ್ಕಿ ಮೂಲ ಸ್ಥಾನಕ್ಕೆ ಕರೆತರಲಾಗುತ್ತದೆ. ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ನಿರ್ಮಿಸಿಕೊಂಡಿರುವ ತಾತ್ಕಾಲಿಕ ವ್ಯವಸ್ಥೆ ಬಳಸಿ ಸಾಗಬೇಕಾಗುತ್ತಿದೆ.

‘ಗಿಳಿಗುಂಡಿ ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ಸುತ್ತಮುತ್ತಲಿನ ಪ್ರದೇಶದ 400ಕ್ಕೂ ಹೆಚ್ಚು ಮನೆಗಳಿಗೆ ಮುಖ್ಯ ಹೆದ್ದಾರಿ ಸಂಪರ್ಕಿಸಲು 12 ಕಿ.ಮೀ. ಸುತ್ತಾಟ ಕಡಿಮೆಯಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ಪ್ರಮುಖ ನಾರಾಯಣ ಗೌಡ.

‘ಗಿಳಿಗುಂಡಿ ಭಾಗಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂಬ ಜನರ ಆಗ್ರಹಕ್ಕೆ ಜನಪ್ರತಿನಿಧಿಗಳು ಸ್ಪಂದಿಸಲಿ. ರೈತರು, ಕೂಲಿಕಾರ್ಮಿಕರು ಹೆಚ್ಚಿರುವ ಈ ಪ್ರದೇಶಕ್ಕೆ ಸೇತುವೆ ನಿರ್ಮಿಸಿ ಅನುಕೂಲ ಕಲ್ಪಿಸುವ ಕೆಲಸ ಬೇಗನೆ ನಡೆಯಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

‘ಗಿಳಿಗುಂಡಿಗೆ ಸೇತುವೆ ನಿರ್ಮಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಲಾಗುವುದು. ಬಳಿಕ ಪ್ರಸ್ತಾವ ಸಿದ್ಧಪಡಿಸಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ಅನಿಲಕುಮಾರ್ ಎಸ್. ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT