ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಬಿಗಳ ಸ್ಥಿತಿಗತಿ ಕೇಂದ್ರಕ್ಕೆ ಮನವರಿಕೆ

ಪಾದಯಾತ್ರೆಯಲ್ಲಿ ಭಾಗಿ: ಗೋವಾ ವಿಧಾನಸಭಾಧ್ಯಕ್ಷ ರಮೇಶ ತಡವ್ಕರ್ ಭರವಸೆ
Last Updated 20 ಜನವರಿ 2023, 15:24 IST
ಅಕ್ಷರ ಗಾತ್ರ

ಕಾರವಾರ: ‘ಗೋವಾದಲ್ಲಿರುವ ಕುಣಬಿ ಮತ್ತು ಕರ್ನಾಟಕದಲ್ಲಿರುವ ಕುಣಬಿಗಳ ಸಾಮಾಜಿಕ ಸ್ಥಿತಿಗತಿ, ಸಂಸ್ಕೃತಿ, ಜೀವನ ಪದ್ಧತಿ ಒಂದೇ ತೆರನಾಗಿದೆ. ಎರಡೂ ರಾಜ್ಯಗಳಲ್ಲಿ ಹಂಚಿಹೋಗಿರುವ ಸಮುದಾಯದವರು ಸಹೋದರರಂತೆ. ಒಬ್ಬ ಸಹೋದರನಿಗೆ ಸಿಕ್ಕ ನ್ಯಾಯ ಇನ್ನೊಬ್ಬ ಸಹೋದರನಿಗೂ ಸಿಗಬೇಕಾಗಿದೆ. ಗೋವಾದಲ್ಲಿ ಇವರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದ್ದು, ಇಲ್ಲಿಯೂ ಸೇರಿಸಬೇಕಾಗಿದೆ’ ಎಂದು ಗೋವಾ ವಿಧಾನಸಭಾಧ್ಯಕ್ಷ ರಮೇಶ ತವಡ್ಕರ್ ಹೇಳಿದರು.

ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಕುಣಬಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಜೋಯಿಡಾದಿಂದ ಕಾರವಾರದವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಹಲವು ವರ್ಷ ಹೋರಾಟ ಮಾಡಿದ್ದರಿಂದ ಗೋವಾದ ಕುಣಬಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲಿ ನಾಲ್ಕು ದಶಕದಿಂದ ಹೋರಾಟ ನಡೆದಿದ್ದರೂ ಬೇಡಿಕೆ ಈಡೇರಿಲ್ಲ. ಕುಣಬಿಗಳ ಸ್ಥಿತಿಗತಿಯ ಕುರಿತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ (ಆರ್.ಜಿ.ಐ.) ಮನವರಿಕೆ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮಾತನಾಡಿ, ‘ದೊಡ್ಡ ಸಮುದಾಯಗಳಿಗೆ ರಾಜಕೀಯ ಆಧಾರದಲ್ಲಿ ನ್ಯಾಯ ಒದಗಿಸುವ ಬಿಜೆಪಿ ಸರ್ಕಾರ ಕುಣಬಿಗಳಿಗೂ ನ್ಯಾಯ ಒದಗಿಸಬೇಕು‌. ಅರಣ್ಯ ಪ್ರದೇಶದಲ್ಲಿ ಜೀವನ ಕಟ್ಟಿಕೊಂಡಿರುವ ಬಡ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಲು ಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದೆ’ ಎಂದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ‘ಕುಣಬಿಗಳು ಸಂವಿಧಾನಬದ್ಧವಾಗಿ ತಮಗೆ ದೊರೆಯುವ ಹಕ್ಕು ಕೇಳುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸದಿದ್ದರೆ ಕಾಡಿನ ಜನ ಬಂದೂಕು ಹಿಡಿಯಬೇಕಾದ ಅನಿವಾರ್ಯತೆ ಎದುರಾಗಬಹುದು’ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಸುನೀಲ ಹೆಗಡೆ, ‘ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಸಮಾಜ ಕಲ್ಯಾಣ ಇಲಾಖೆ ಸಚಿವರು, ಸಂಸದರ ನೇತೃತ್ವದಲ್ಲಿ ಸದ್ಯದಲ್ಲಿಯೇ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿದೆ. ಕುಣಬಿಗಳು ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನೂ ಬಗೆಹರಿಸಲಾಗುವುದು’ ಎಂದರು.

ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕುಣಬಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಚಂದ್ರಶೇಖರ ಸಾವರ್ಕರ್, ರಮೇಶ ನಾಯ್ಕ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT