ಕಾರವಾರ: ತಾಲ್ಲೂಕಿನ ಸದಾಶಿವಗಡದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಿತ್ತಾಕುಲ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯ ದಿಲೀಪ ಗಜಿನಕರ ಎಂಬುವವರನ್ನು ಬುಧವಾರ ಚಿತ್ತಾಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮೆರವಣಿಗೆ ಬೇಗನೆ ಸಾಗುವಂತೆ ಸೂಚಿಸಿದ ಕಾರಣಕ್ಕೆ ಸಬ್ ಇನ್ಸಪೆಕ್ಟರ್ ಮಹಾಂತೇಶ ವಾಲ್ಮೀಕಿ ಅವರಿಗೆ ಬೆದರಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ದೂರಿ ಪೊಲೀಸರು ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ನಸುಕಿನ ಜಾವ ಮನೆಗೆ ನುಗ್ಗಿ ಅವಾಚ್ಯ ಶಬ್ದದಿಂದ ನಿಂದಿಸಿ, ಹಲ್ಲೆ ನಡೆಸಿ ಠಾಣೆಗೆ ಎಳೆದೊಯ್ದಿದ್ದಾರೆ. ಠಾಣೆಯಲ್ಲೂ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ದಿಲೀಪ್ ಆರೋಪಿಸಿದ್ದಾರೆ. ಅಲ್ಲದೆ ನ್ಯಾಯಾಲಯದಲ್ಲಿ ಎಸ್ಐ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ದಿಲೀಪ್ ಬೆಂಬಲಿಗರು ತಿಳಿಸಿದ್ದಾರೆ.