ಕಾರವಾರ: ನಗರದ ಮಾರುಕಟ್ಟೆಯಲ್ಲಿ ಈಗ ಗುಮಟೆ, ಶಂಬಳ ವಾದನದ ಸದ್ದು ಜೋರಾಗಿ ಕೇಳಿಸುತ್ತಿದೆ. ಗಣೇಶ ಚತುರ್ಥಿ ಹಬ್ಬ ಕಳೆಗಟ್ಟಿಸುವ ವಾದನಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.
ಜಿಲ್ಲೆಯ ಕರಾವಳಿ ಭಾಗದಲ್ಲಿ, ಅದರಲ್ಲಿಯೂ ತಾಲ್ಲೂಕಿನಲ್ಲಿ ಹಬ್ಬದ ಆಚರಣೆಯಲ್ಲಿ ಸಾಂಪ್ರದಾಯಿಕ ಗುಮಟೆ ಮತ್ತು ಶಂಬಳದ ಬಳಕೆ ಚಾಚೂತಪ್ಪದೆ ನಡೆಯುತ್ತದೆ. ಹಬ್ಬ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಅವುಗಳ ಮಾರಾಟ ಚುರುಕುಗೊಳ್ಳುತ್ತದೆ. ಇಲ್ಲಿನ ಜನತಾ ಬಝಾರ್ ಎದುರಿನ ಜಾಗ ಗುಮಟೆ, ಶಂಬಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ.
ಗ್ರಾಮೀಣ ಪ್ರದೇಶದ ವಿವಿಧೆಡೆಯಿಂದ ಬರುವ ಮಾರಾಟಗಾರರು ಇಲ್ಲಿನ ರಸ್ತೆಯ ಬದಿಯಲ್ಲೇ ಕುಳಿತು ಗುಮಟೆ, ಶಂಬಳ ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಮಣ್ಣಿನ ಮಡಕೆಗೆ ಎರಡೂ ಬದಿಯಲ್ಲಿ ಕುರಿಯ ಚರ್ಮವನ್ನು ಬಿಗಿಯಾಗಿ ಕಟ್ಟಿ ‘ಗುಮಟೆ’ ಸಿದ್ಧಪಡಿಸಲಾಗುತ್ತದೆ. ಮರ ಅಥವಾ ಸ್ಟೀಲ್‍ನಿಂದ ಚಂಡೆ ಮಾದರಿಯಂತೆ ಸಿದ್ಧಪಡಿಸಿ ಅದಕ್ಕೆ ಒಂದು ಬದಿಯಲ್ಲಿ ಕುರಿಯ ಚರ್ಮ ಬಿಗಿಯಾಗಿ ಕಟ್ಟಿ ‘ಶಂಬಳ’ ತಯಾರಿಸಲಾಗುತ್ತದೆ.
ಹೀಗೆ ಸಿದ್ಧಗೊಂಡ ವಾದನಗಳನ್ನು ಮಾರಾಟಗಾರರು ಬಡಿಯುತ್ತ ಕುಳಿತರೆ ಅವುಗಳಿಂದ ಹೊರಹೊಮ್ಮುವ ವಾದನ ಗ್ರಾಹಕರನ್ನು ಸೆಳೆಯುತ್ತದೆ. ಕಾರವಾರ, ಜೊಯಿಡಾ, ಅಂಕೋಲಾ, ಕುಮಟಾ ಭಾಗದಲ್ಲಿ ಹಬ್ಬದ ಪೂಜೆಯ ವೇಳೆ ಬಳಕೆ ಹೆಚ್ಚಿದ್ದು, ದೂರದ ಊರುಗಳಿಂದ ಬಂದ ಗ್ರಾಹಕರು ಸಾಂಪ್ರದಾಯಿಕ ವಾದನ ಖರೀದಿಗೆ ಮುಂದಾಗುತ್ತಾರೆ.
‘ಗುಮಟೆ ತಯಾರಿಕೆಗೆ ಹಿಂದೆ ಉಡದ ಚರ್ಮ ಬಳಕೆ ಮಾಡಲಾಗುತ್ತಿತ್ತು. ಈಗ ಅವುಗಳನ್ನು ಬಳಸುತ್ತಿಲ್ಲ. ಕುರಿಯ ಚರ್ಮದಿಂದ ಸಿದ್ಧಪಡಿಸಿದ ಗುಮಟೆಗೆ ಬೇಡಿಕೆ ಈಗಲೂ ಹೆಚ್ಚಿದೆ. ₹500 ರಿಂದ ಆರಂಭಿಸಿ ₹2 ಸಾವಿರ ಮೊತ್ತದವರೆಗಿನ ಗುಮಟೆ ಮಾರಾಟ ಮಾಡಲಾಗುತ್ತಿದೆ’ ಎಂದು ಗುಮಟೆ ವ್ಯಾಪಾರಿ ಉದಯ ಗುನಗಾ ಹೇಳಿದರು.
‘ಚತುರ್ಥಿಗೆ ಹದಿನೈದು ದಿನ ಮುಂಚಿತವಾಗಿ ಶಂಬಳ ಮಾರಾಟ ಆರಂಭಿಸುತ್ತೇವೆ. ಅವುಗಳ ತಯಾರಿಕೆಗೆ ಬೇಕಾದ ಮರದ ಸಾಮಗ್ರಿಯನ್ನು ಉಡುಪಿ ಭಾಗದಿಂದ ತರಿಸಿಕೊಳ್ಳಲಾಗುತ್ತದೆ. ಮಾರುಕಟ್ಟೆಯಲ್ಲೇ ಜನರೆದುರು ಶಂಬಳ ಸಿದ್ಧಪಡಿಸಿ ನೀಡುತ್ತೇವೆ. ಮರದ ಶಂಬಳಕ್ಕೆ ₹2 ಸಾವಿರದಿಂದ ₹2,500 ವೆಚ್ಚವಾಗುತ್ತದೆ. ಸ್ಟೀಲ್‍ನಿಂದ ತಯಾರಿಸಿ ವಾದನಕ್ಕೆ ಕಡಿಮೆ ದರವಿದೆ’ ಎಂದು ವ್ಯಾಪಾರಿ ಮಹೇಶ್ ಹೇಳುತ್ತಾರೆ.
ಸಾಂಪ್ರದಾಯಿಕ ಆಚರಣೆಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ ಗುಮಟೆ ಶಂಬಳದಂತಹ ಸಾಂಪ್ರದಾಯಿಕ ವಾದನಗಳ ಖರೀದಿ ಕಡಿಮೆ ಆಗಿಲ್ಲಉದಯ ಗುನಗಾ ಗುಮಟೆ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.