ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆರೋಗ್ಯ ಇಲಾಖೆಗೆ ಸಿಬ್ಬಂದಿ ಕೊರತೆ ಕಾಯಿಲೆ

ಮಳೆಗಾಲಕ್ಕೆ ಅಗತ್ಯ ಔಷಧಗಳ ದಾಸ್ತಾನು, ಸಾಂಕ್ರಾಮಿಕ ತಡೆಗೆ ಜಾಗೃತಿ ಕಾರ್ಯ
Published 10 ಜೂನ್ 2023, 23:40 IST
Last Updated 10 ಜೂನ್ 2023, 23:40 IST
ಅಕ್ಷರ ಗಾತ್ರ

ಕಾರವಾರ: ಮಳೆಗಾಲ ಆರಂಭಗೊಂಡಿದ್ದು ಜಿಲ್ಲೆಯಲ್ಲಿ ಜನರಿಗೆ ಚಿಕಿತ್ಸೆ ಒದಗಿಸಲು ಸೌಕರ್ಯಗಳಿದ್ದರೂ ಸಿಬ್ಬಂದಿ ಇಲ್ಲದ ಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಇದೆ.

ಕಾರವಾರವೂ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಭಾರ ವೈದ್ಯರೇ ಹೆಚ್ಚಿದ್ದಾರೆ. ಕೆಲವೆಡೆ ಬಿ.ಎಂ.ಎಸ್ ವೈದ್ಯರು ಕೆಲಸ ಮಾಡುತ್ತಿದ್ದರೆ, ಈಗಷ್ಟೇ ಎಂ.ಬಿ.ಬಿ.ಎಸ್. ಮುಗಿಸಿದವರೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಂಡಿದ್ದಾರೆ.

ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಇದೆ ಎಂದು ಇಲಾಖೆ ಹೇಳಿಕೊಳ್ಳುತ್ತಿದ್ದರೂ ಬಹುತೇಕ ಕಡೆಗಳಲ್ಲಿ ಖಾಸಗಿ ಅಂಗಡಿಯಲ್ಲಿ ಔಷಧ ಖರೀದಿಗೆ ಚೀಟಿ ಬರೆದುಕೊಡುತ್ತಿರುವುದು ಇನ್ನೂ ತಪ್ಪಿಲ್ಲ. ಅಲ್ಲದೆ ರಕ್ತ, ಮೂತ್ರ ಪರೀಕ್ಷೆಗೂ ಖಾಸಗಿ ಪ್ರಯೋಗಾಲಯಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

54 ಹುದ್ದೆ ಖಾಲಿ

ಶಿರಸಿ: ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳ ತಡೆಯುವ ನಿಟ್ಟಿನಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

‘ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ 139 ಹುದ್ದೆಗಳ ಪೈಕಿ 85 ಹುದ್ದೆ ಭರ್ತಿಯಾಗಿದೆ. 54 ಹುದ್ದೆಗಳು ಖಾಲಿಯಿವೆ. ಹಾವು ಕಚ್ಚಿದರೆ ನೀಡುವ ಔಷಧ, ವಾಂತಿ ಬೇಧಿ, ಜ್ವರ ಸಂಬಂಧಿ ಔಷಧ ಸಂಗ್ರಹಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಮಾಹಿತಿ ನೀಡಿದರು.

ಔಷಧಕ್ಕೆ ಖಾಸಗಿ ಅಂಗಡಿಗೆ ಚೀಟಿ

ಮುಂಡಗೋಡ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜನ್‌ ಸಹಿತ ವೈದ್ಯರ ಕೊರತೆ ಇದೆ. ಔಷಧಗಳ ಕೊರತೆ ಇಲ್ಲವೆಂದು ಅಲ್ಲಿನ ವೈದ್ಯರು ಹೇಳಿದರೂ, ರೋಗಿಗಳಿಗೆ ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧ ತೆಗೆದುಕೊಳ್ಳಲು ಚೀಟಿ ಬರೆದುಕೊಡುತ್ತಾರೆ ಎಂಬ ಆರೋಪವೂ ಇದೆ.

ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ರಾತ್ರಿ ಸಮಯದಲ್ಲಿ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕಳಿಸುವ ಪದ್ಧತಿ ಈಚೆಗೆ ಹೆಚ್ಚಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

‘ಸಾಂಕ್ರಾಮಿಕ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಔಷಧಿಗಳ ಕೊರತೆಯಿಲ್ಲ. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ. ಜ್ವರ, ವಾಂತಿ, ಬೇಧಿಯಂತ ಲಕ್ಷಣಗಳು ಸಹಿತ ಇನ್ನಿತರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ ಚಕ್ರಸಾಲಿ ಹೇಳಿದರು.

ತಜ್ಞ ವೈದ್ಯರ ಕೊರತೆ

ಸಿದ್ದಾಪುರ: ತಾಲ್ಲೂಕಿನಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಬಿಳಗಿ ಮತ್ತು ದೊಡ್ಮನೆ ಕೇಂದ್ರಗಳಲ್ಲಿ ವೈದ್ಯರು ಇಲ್ಲ. ತಾಲ್ಲೂಕು ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲಿನ ತಜ್ಞ ವೈದ್ಯರು ಇಲ್ಲ.

‘ತಾಲ್ಲೂಕಿನಾದ್ಯಂತ ಜನರಿಗೆ ತೊಂದರೆಯಾಗದಂತೆ ಎಲ್ಲ ರೀತಿಯಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಮಾಹಿತಿ ನೀಡಿದರು.

30 ಕಿ.ಮೀ. ದೂರ ಹೋಗಬೇಕು

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಮತ್ತು ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರಿಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗಿದೆ. ರೋಗಿಗಳು ಸಣ್ಣ ಪುಟ್ಟ ಚಿಕಿತ್ಸೆಗೂ 20–30 ಕಿ.ಮೀ. ದೂರದ ತಾಲ್ಲೂಕು ಕೇಂದ್ರಕ್ಕೆ ಬರಬೇಕಾಗಿದೆ.

‘ಸಾಂಕ್ರಾಮಿಕ ರೋಗಗಳು ಬಾರದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ಹೇಳಿದರು.

ನೀರು ಶುದ್ಧೀಕರಣ ಔಷಧ ವಿತರಣೆ

ಕುಮಟಾ: ‘ತಾಲ್ಲೂಕಿನ ಎಲ್ಲ ಆಸ್ಪತ್ರೆಗಳಲ್ಲಿ ಔಷಧ ಸಂಗ್ರಹ ಇದೆ. ಸಾಮಾನ್ಯ ಜ್ವರ, ಡೆಂಗಿ, ವಾಂತಿ-ಬೇಧಿ ಮುಂತಾದ ಕಾಯಿಲೆಗಳಿಗೆ ಅಗತ್ಯವಿರುವ ಔಷಧ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗಿದೆ. ಕುಡಿಯುವ ನೀರಿನ ಬಾವಿ ಶುದ್ಧೀಕರಿಸಲು ಬಳಸುವ ಔಷಧ ಕೂಡ ವಿತರಣೆ ಮಾಡಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಆಜ್ಞಾ ನಾಯಕ ಮಾಹಿತಿ ನೀಡಿದರು.

ಖಾಸಗಿ ಪ್ರಯೋಗಾಲಯಕ್ಕೆ ಮೊರೆ

ಹೊನ್ನಾವರ: ತಾಲ್ಲೂಕು ಆಸ್ಪತ್ರೆ ಸೇರಿದಂತೆ ಒಟ್ಟೂ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಆಸ್ಪತ್ರೆಗಳಲ್ಲಿ ಔಷಧಗಳ ವಿತರಣೆಗೆ ಫಾರ್ಮಾಸಿಸ್ಟ್ ಕೊರತೆ ಇದೆ. ಸಾಲ್ಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದ ವೈದ್ಯರೇ ವೈದ್ಯಾಧಿಕಾರಿಯಾಗಿದ್ದಾರೆ. ಮಂಕಿಯಲ್ಲಿ ಖಾಯಂ ವೈದ್ಯರೇ ಇಲ್ಲ. ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಿಬ್ಬಂದಿಯ ಕೊರತೆ ಇದ್ದು ರೋಗಿಗಳು ರಕ್ತ, ಮಲ, ಮೂತ್ರ ತಪಾಸಣೆಗಾಗಿ ಖಾಸಗಿ ಪ್ರಯೋಗಾಲಯಗಳ ಮೊರೆ ಹೋಗಬೇಕಾಗಿದೆ.

‘ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳ ಹುದ್ದೆ ತುಂಬಲು ಪ್ರಸ್ತಾವ ಸಲ್ಲಿಸಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ.

ಸಿಬ್ಬಂದಿ ಇಲ್ಲದೆ ಸಮಸ್ಯೆ

ಭಟ್ಕಳ: ತಾಲ್ಲೂಕಿನಲ್ಲಿ ವೈದ್ಯರಿದ್ದರೂ ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ನೀಡಲು ಕೆಲವು ಕಡೆ ವಿಳಂಬವಾಗುತ್ತಿದೆ. ಆಸ್ಪತ್ರೆಗಳಲ್ಲಿ ಔಷಧ ದಾಸ್ತಾನಿದೆ.

‘ಮಳೆಗಾಲದಲ್ಲಿ ಅಶುದ್ಧ ಬಾವಿಯ ನೀರು ಕುಡಿದು ಅಸ್ವಸ್ಥರಾಗದಂತೆ ಸಾರ್ವಜನಿಕರಿಗೆ ಕ್ಲೋರಿನ್ ಸರಬರಾಜು ಮಾಡಲಾಗುತ್ತಿದೆ’ ಎಂದು ಆರೋಗ್ಯಾಧಿಕಾರಿ ಸವಿತಾ ಕಾಮತ್ ಮಾಹಿತಿ ನೀಡಿದರು.

ಕಿರಿದಾದ ಕಟ್ಟಡದಲ್ಲಿ ಆಸ್ಪತ್ರೆ

ಗೋಕರ್ಣ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸದಾಗಿ ಹೊಸ ರೂಪದಲ್ಲಿ ನಿರ್ಮಾಣ ಹಂತದಲ್ಲಿರುವುದರಿಂದ ಸದ್ಯ ರೋಗಿಗಳ ಚಿಕಿತ್ಸೆಗೆ ದಾನಿಗಳು ಕಟ್ಟಿಸಿದ ಕಟ್ಟಡವೇ ಅನಿವಾರ್ಯವಾಗಿದೆ.

ಹೊಸ ಕಟ್ಟಡ ಚಿಕ್ಕದಾಗಿದ್ದು ಮಳೆಗಾಲದಲ್ಲಿ ಅಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸಮಸ್ಯೆಯಾಗಿದೆ.

‘ಮಳೆಗಾಲದಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಸಾಕಷ್ಟು ಔಷಧಗಳ ದಾಸ್ತಾನು ಮಾಡಲಾಗಿದೆ. ತುರ್ತು ಅವಶ್ಯಕತೆಗೆ ಬೇಕಾದ ಔಷಧಗಳನ್ನು ಮೀಸಲಿಟ್ಟ ಹಣದಿಂದ ನಾವು ತೆಗೆದುಕೊಳ್ಳುತ್ತೇವೆ’ ಎಂದು ವೈದ್ಯಾಧಿಕಾರಿ ಜಗದೀಶ ನಾಯ್ಕ ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ಕಾಯಬೇಕು

ಅಂಕೋಲಾ: ತಾಲ್ಲೂಕಿನ ಕೆಲವೆಡೆ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಕಾಯುವ ದೃಶ್ಯ ಕಂಡುಬರುತ್ತಿದೆ. ರೋಗಿಗಳನ್ನು ವಿಚಾರಿಸಿದರೆ ಸರಿಯಾದ ಚಿಕಿತ್ಸೆ ಸಿಗುತ್ತಿದೆ ಆದರೆ ಕಾಯಬೇಕು ಎನ್ನುತ್ತಾರೆ.

‘ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದೇವೆ, ರೋಗಿಗಳಿಗೆ ಬೇಕಾದ ಔಷಧಗಳನ್ನು ಸಂಗ್ರಹಿಸಿಕೊಂಡಿದ್ದೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸಂತೋಷ ಕುಮಾರ್ ರಾವ್ ಹೇಳಿದರು.

ಪ್ರಜಾವಾಣಿ ತಂಡ: ಗಣಪತಿ ಹೆಗಡೆ, ರಾಜೇಂದ್ರ ಹೆಗಡೆ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಸುಜಯ್ ಭಟ್, ಮೋಹನ ನಾಯ್ಕ, ವಿಶ್ವೇಶ್ವರ ಗಾಂವಕರ್, ಜ್ಞಾನೇಶ್ವರ ದೇಸಾಯಿ, ಮೋಹನ ದುರ್ಗೇಕರ್.

ಗೋಕರ್ಣದಲ್ಲಿ ದಾನಿಗಳು ನಿರ್ಮಿಸಿ ಕೊಟ್ಟಿರುವ ಸಣ್ಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ
ಗೋಕರ್ಣದಲ್ಲಿ ದಾನಿಗಳು ನಿರ್ಮಿಸಿ ಕೊಟ್ಟಿರುವ ಸಣ್ಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ
ಕುಮಟಾ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಎಳನೀರು ಚೀಪ್ಪುಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ಆಗದಂತೆ ತಡೆಯಲು ಅರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದರು
ಕುಮಟಾ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಎಳನೀರು ಚೀಪ್ಪುಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ಆಗದಂತೆ ತಡೆಯಲು ಅರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದರು
ಕಖಾಯಂ ವೈದ್ಯಾಧಿಕಾರಿ ಇಲ್ಲದ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ
ಕಖಾಯಂ ವೈದ್ಯಾಧಿಕಾರಿ ಇಲ್ಲದ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ

ಕೊರತೆ ಇರುವ ಸಿಬ್ಬಂದಿ ಭರ್ತಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಲ್ಲೂಕು ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನು ಇದೆ.

- ಡಾ.ಅನ್ನಪೂರ್ಣ ವಸ್ತ್ರದ್ ಜಿಲ್ಲಾ ಆರೋಗ್ಯಾಧಿಕಾರಿ

ಸಿಬ್ಬಂದಿ ಕೊರತೆಯ ಕಾರಣಕ್ಕೆ ಈಗ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಡಾ.ವಿನಾಯಕ ಭಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಶಿರಸಿ

ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಲಭ್ಯವಿಲ್ಲ. ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವುದರಿಂದ ಅನಾರೋಗ್ಯದ ಸಮಯದಲ್ಲಿ ತಾಲ್ಲೂಕು ಆಸ್ಪತ್ರೆಗೆ ಹೋಗಲೂ ಕಷ್ಟವಾಗುತ್ತಿದೆ.

- ಮಂಜುನಾಥ ನಾಯ್ಕ ಸಿದ್ದಾಪುರ ತಾಲ್ಲೂಕು ದೊಡ್ಮನೆ ನಿವಾಸಿ

ಸಣ್ಣ ಪುಟ್ಟ ಚಿಕಿತ್ಸೆಗೆ ಮಲವಳ್ಳಿ ಆಸ್ಪತ್ರೆಯನ್ನೇ ಅವಲಂಬಿಸಿದ್ದೆವು. ಆದರೆ ಈಗ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದ ಕಾರಣ ತೊಂದರೆಯಾಗಿದ್ದು 35 ಕಿ.ಮೀ. ದೂರದ ಯಲ್ಲಾಪುರಕ್ಕೆ ತೆರಳಬೇಕಾಗಿದೆ -ಮಹಾಬಲೇಶ್ವರ ಕುಣಬಿ ಯಲ್ಲಾಪುರ ತಾಲ್ಲೂಕು ಬಂಕೊಳ್ಳಿ ನಿವಾಸಿ

ಕಳೆದ ಮಳೆಗಾಲದಲ್ಲಿ ರೋಗಿಗಳ ಚಿಕಿತ್ಸೆಗೆ ಅಗತ್ಯ ಔಷಧಿಯ ಕೊರತೆ ಇದ್ದುದರಿಂದ ಬಹಳಷ್ಟು ತೊಂದರೆ ಆಗಿತ್ತು. ಈ ಬಾರಿ ಅಂತಹ ಸ್ಥಿತಿ ಉಂಟಾಗಬಾರದು.

- ಅಶೋಕ ಗೌಡ ಅಂಕೋಲಾದ ಬೆಳಸೆ ನಿವಾಸಿ

ಮಳೆಗಾಲದಲ್ಲಿ ರೋಗಿಗಳ ಪರದಾಟ ಜೊಯಿಡಾ: ತಾಲ್ಲೂಕಾ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞ ಚರ್ಮ ರೋಗ ತಜ್ಞ ಅರಿವಳಿಕೆ ತಜ್ಞ ವೈದ್ಯರು ಇಲ್ಲ. ಖಾಸಗಿ ಆಸ್ಪತ್ರೆಗಳು ಇಲ್ಲದಿರುವುದರಿಂದ ಜನರು ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆ ಅಥವಾ ದಾಂಡೇಲಿಗೆ ಓಡಾಡುವ ಪರಿಸ್ಥಿತಿ ಇದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆಯಿಂದ ಅಣಶಿ ಭಾಗದ ಜನರು ಕಾರವಾರಕ್ಕೆ ಗುಂದ ಪ್ರಧಾನಿ ಗಣೇಶಗುಡಿ ಭಾಗದವರು ದಾಂಡೇಲಿ ರಾಮನಗರ ಕ್ಯಾಸಲ್ ರಾಕ್ ಭಾಗದವರು ಖಾನಾಪುರಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಸಾರಿಗೆ ಸಂಪರ್ಕದ ಕೊರತೆ ಇರುವುದರಿಂದ ಮಳೆಗಾಲದಲ್ಲಿ ಜನರು ಆರೋಗ್ಯ ಸೇವೆಗಳಿಗಾಗಿ ಪರದಾಡುವಂತಹ ಸ್ಥಿತಿ ಪ್ರತಿ ವರ್ಷವೂ ನಿರ್ಮಾಣವಾಗುತ್ತದೆ. ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ವೈದ್ಯರು ಅಗತ್ಯ ಸಿಬ್ಬಂದಿ ಇದ್ದಾರೆ. ಆರೋಗ್ಯ ಕಾರ್ಯಕರ್ತರ ತಂಡ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವಿಜಯ ಕೊಚ್ಚರಗಿ ಹೇಳಿದರು.

1287 ಹುದ್ದೆಗಳು ಖಾಲಿ ಆರೋಗ್ಯ ಇಲಾಖೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿದ್ದ 2433 ಹುದ್ದೆಗಳ ಪೈಕಿ 1146 ಮಂದಿ ಮಾತ್ರ ಭರ್ತಿಯಾಗಿದ್ದು 1287 ಹುದ್ದೆ ಖಾಲಿ ಇವೆ. ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಯೇ ಭರ್ತಿಯಾಗಿಲ್ಲ. ಆದರೆ ಸದ್ಯ ಪ್ರಭಾರ ಹುದ್ದೆಯಲ್ಲಿದ್ದವರು ಅದನ್ನು ನಿಭಾಯಿಸುತ್ತಿದ್ದಾರೆ. 5 ತಾಲ್ಲೂಕು ಆರೋಗ್ಯಾಧಿಕಾರಿ 24 ತಜ್ಞ ವೈದ್ಯರು 22 ಮುಖ್ಯ ವೈದ್ಯಾಧಿಕಾರಿ ಸೇರಿದಂತೆ 62 ವೈದ್ಯರ ಹುದ್ದೆಗಳು ಖಾಲಿ ಉಳಿದಿವೆ. ಶುಶ್ರೂಷಕರು ಪ್ರಯೋಗಾಲಯ ತಜ್ಞರು ಸೇರಿದಂತೆ ಸಿ ದರ್ಜೆಯ 768 ಮತ್ತು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿದ್ದ 464 ಡಿ ದರ್ಜೆಯ ಹುದ್ದೆಗಳು ಈವರೆಗೂ ಭರ್ತಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT