ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಹಾಸ್ಟೆಲ್‍ಗಳಿಗೆ ವಾರ್ಡನ್ ಕೊರತೆ

ಕೆಲಸದ ಒತ್ತಡದಲ್ಲಿ ವಿದ್ಯಾರ್ಥಿಗಳತ್ತ ಕಾಳಜಿ ವಹಿಸಲಾಗದ ಅಸಹಾಯಕತೆ
Published : 10 ಸೆಪ್ಟೆಂಬರ್ 2024, 4:53 IST
Last Updated : 10 ಸೆಪ್ಟೆಂಬರ್ 2024, 4:53 IST
ಫಾಲೋ ಮಾಡಿ
Comments

ಕಾರವಾರ: ಜಿಲ್ಲೆಯ ವಿದ್ಯಾರ್ಥಿವಸತಿ ನಿಲಯಗಳಲ್ಲಿ ಸೀಟು ಪಡೆಯಲು ಜಿಲ್ಲೆಯವರಷ್ಟೆ ಅಲ್ಲದೆ ಹೊರಜಿಲ್ಲೆಯ ವಿದ್ಯಾರ್ಥಿಗಳೂ ಪೈಪೋಟಿ ನಡೆಸುತ್ತಾರೆ. ಆದರೆ, ವಸತಿ ನಿಲಯಗಳಲ್ಲಿ ಕೆಲಸ ಮಾಡಲು ಮೇಲ್ವಿಚಾರಕರಾಗಿ (ವಾರ್ಡನ್) ಬರಲು ಮಾತ್ರ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ಹಿಮದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ 180ಕ್ಕೂ ಹೆಚ್ಚು ವಿದ್ಯಾರ್ಥಿ ವಸತಿ ನಿಲಯಗಳು ಜಿಲ್ಲೆಯಲ್ಲಿವೆ. ಅವುಗಳ ಪೈಕಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಐದು ಹುದ್ದೆ ಮಾತ್ರ ಖಾಲಿ ಇದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿರುವ 101 ಹುದ್ದೆಯ ಪೈಕಿ 71 ಹುದ್ದೆ ಹಲವು ತಿಂಗಳುಗಳಿಂದಲೂ ಖಾಲಿಯೇ ಉಳಿದುಕೊಂಡಿದೆ.

ಜಿಲ್ಲಾಕೇಂದ್ರ ಕಾರವಾರದಲ್ಲೇ ಅತಿ ಹೆಚ್ಚು ಮೇಲ್ವಿಚಾರಕ ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಹಲವು ಹಾಸ್ಟೆಲ್‍ಗಳಿಗೆ ದ್ವಿತೀಯ ದರ್ಜೆ ಸಹಾಯಕರು, ವಿಸ್ತರಣಾಧಿಕಾರಿಗಳಿಗೆ ವಾರ್ಡನ್ ಹುದ್ದೆಯ ಜವಾಬ್ದಾರಿ ನೀಡಿ ನಿಯೋಜಿಸಲಾಗುತ್ತಿದೆ. ಒಬ್ಬೊಬ್ಬ ವಾರ್ಡನ್‍ಗೆ ಎರಡು ಅಥವಾ ಮೂರು ಹಾಸ್ಟೆಲ್‍ಗಳ ಉಸ್ತುವಾರಿ ಜವಾಬ್ದಾರಿ ಹೊರಿಸಲಾಗುತ್ತಿರುವ ದೂರುಗಳಿವೆ.

‘ಉತ್ತರ ಕನ್ನಡದ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿ ಪಾಲಕರಿಂದ ಲಾಬಿ, ಪೈಪೋಟಿ ನಡೆಯುತ್ತಿದೆ. ಆದರೆ, ನಿಲಯಗಳಲ್ಲಿ ಕೆಲಸ ಮಾಡಲು ಮಾತ್ರ ನಮಗೆ ಸಿಬ್ಬಂದಿ ಸಿಗುತ್ತಿಲ್ಲ. ಮೇಲ್ವಿಚಾರಕರು ನಿಯೋಜನೆಗೊಂಡರೂ ಕೆಲವೇ ತಿಂಗಳು ಅಥವಾ ವರ್ಷ ಕಳೆಯುವುದರೊಳಗೆ ಅವರು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು ತೆರಳುತ್ತಿದ್ದಾರೆ’ ಎನ್ನುತ್ತಾರೆ ಅಧಿಕಾರಿಯೊಬ್ಬರು.

‘ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಅಡುಗೆ ಸಿದ್ಧಪಡಿಸಲು ಸಿಬ್ಬಂದಿ ಇದ್ದಾರೆ. ಆದರೆ ವಿದ್ಯಾರ್ಥಿಗಳ ಮೇಲೆ ನಿರಂತರ ನಿಗಾ ಇಡಲು, ಅವರು ಸರಿಯಾಗಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಪರಿಶೀಲಿಸಲು ಹೆಚ್ಚು ಸಮಯ ನೀಡಬೇಕಾಗುತ್ತದೆ. ಆದರೆ, ನಮಗೆ ಎರಡು ಅಥವಾ ಮೂರು ಹಾಸ್ಟೆಲ್‍ಗಳ ಜವಾಬ್ದಾರಿ ನಿಭಾಯಿಸುವ ಅನಿವಾರ್ಯತೆ ಇದೆ. ದೂರ ದೂರದಲ್ಲಿ ಹಾಸ್ಟೆಲ್ ಇದ್ದು ಪ್ರತಿ ನಿತ್ಯ ಓಡಾಟ ನಡೆಸಿಯೆ ನಿತ್ರಾಣಗೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳ ಕಡೆ ಗಮನಹರಿಸಲು ಸಮಸ್ಯೆ ಉಂಟಾಗಿದೆ’ ಎಂದು ಹಾಸ್ಟೆಲ್ ವಾರ್ಡನ್ ಒಬ್ಬರು ಸಮಸ್ಯೆ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT