ಕಾರವಾರ: ‘ಕೆನರಾ ವೆಲ್ಫೇರ್ ಟ್ರಸ್ಟ್ ಮತ್ತು ಮೆರಿಟ್ಯೂಡ್ ಸಂಸ್ಥೆ ಸಹಯೋಗದಲ್ಲಿ ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಆ.6 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ’ ಎಂದು ದಿವೇಕರ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಕೇಶವ ಕೆ.ಜಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟೊಯೊಟಾ ಕಿರ್ಲೊಸ್ಕರ್, ಟಾಟಾ, ರಿಲಾಯನ್ಸ್ ಸೇರಿದಂತೆ 35ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಒಂದು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗದಿಂದ ಸ್ನಾತಕೋತ್ತರ ಪದವೀಧರರವರೆಗೆ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ’ ಎಂದರು.
‘ನೋಂದಣಿ ಉಚಿತ ಇರಲಿದೆ. ಉದ್ಯೋಗ ಆಕಾಂಕ್ಷಿಗಳು ಮೇಳ ನಡೆಯುವ ದಿನವೂ ನೇರವಾಗಿ ಸ್ಥಳಕ್ಕೆ ಬಂದು ನೊಂದಣಿ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.
‘ದೇವದತ್ತ ಕಾಮತ್ ನೇತೃತ್ವದಲ್ಲಿ ಯುವಜನತೆಯನ್ನು ಕ್ರಿಯಾಶೀಲವಾಗಿಸುವ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಎರಡು ಮೇಳ ಆಯೋಜನೆಗೆ ನಿರ್ಧರಿಸಿದ್ದಾರೆ. ಕರಾವಳಿ ಭಾಗದಲ್ಲಿ ಉದ್ಯೋಗ ಮೇಳ ನಡೆಯುತ್ತಿದ್ದು, ಕೆಲವು ದಿನದ ಬಳಿಕ ಘಟ್ಟದ ಮೇಲಿನ ಭಾಗದಲ್ಲಿಯೂ ಆಯೋಜಿಸುವ ಸಾಧ್ಯತೆ ಇದೆ’ ಎಂದರು.
ಮೆರಿಟ್ಯೂಡ್ ಸಂಸ್ಥೆಯ ಫಯಾಜ್ ಅಹ್ಮದ್, ಉದ್ಯೋಗ ಮೇಳದ ಸಂಯೋಜಕ ನಾಗರಾಜ ಮಡಿವಾಳ, ಕೆನರಾ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಾನಂದ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.