ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಬೋಧಕರಿಲ್ಲದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು

ರಾಜ್ಯದ ಗಡಿಭಾಗದಲ್ಲಿರುವ ಕಾಲೇಜಿನಲ್ಲಿ ಶೇ10ರಷ್ಟು ಸಿಬ್ಬಂದಿ
Published : 6 ಆಗಸ್ಟ್ 2024, 5:06 IST
Last Updated : 6 ಆಗಸ್ಟ್ 2024, 5:06 IST
ಫಾಲೋ ಮಾಡಿ
Comments

ಕಾರವಾರ: ರಾಜ್ಯದ ಗಡಿ ಕೊನೆಗೊಳ್ಳುವ ಗ್ರಾಮದಲ್ಲಿರುವ, ಜಿಲ್ಲೆಯ ಏಕೈಕ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅಗತ್ಯದಷ್ಟು ಪ್ರಾಧ್ಯಾಪಕರಿಲ್ಲದೆ ತೊಂದರೆ ಎದುರಿಸುತ್ತಿದೆ. ಮಂಜೂರಾದ ಹುದ್ದೆಗಳ ಪೈಕಿ ಶೇ10ರಷ್ಟು ಮಂದಿ ಮಾತ್ರ ಕಾರ್ಯನಿರ್ವಹಣೆಯಲ್ಲಿದ್ದಾರೆ.

ಕಟ್ಟಡ, ಹಾಸ್ಟೆಲ್ ಸೇರಿದಂತೆ ಮೂಲಸೌಕರ್ಯ ಹೊಂದಿದ್ದರೂ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ತಾರತಮ್ಯ ಎದುರಿಸುತ್ತಿದೆ ಎಂಬ ದೂರುಗಳಿವೆ.

ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಒಳಗೊಂಡ ಕಾಲೇಜಿಗೆ ಮಂಜೂರಾದ 56 ಬೋಧಕ ಸಿಬ್ಬಂದಿ ಪೈಕಿ ಪ್ರಾಚಾರ್ಯರನ್ನೂ ಒಳಗೊಂಡು 13 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 115 ಬೋಧಕೇತರ ಸಿಬ್ಬಂದಿ ಪೈಕಿ ಕಾರ್ಯನಿರ್ವಹಿಸುತ್ತಿರುವವರು ಐದು ಮಂದಿ ಮಾತ್ರ!

‘ಗಡಿಭಾಗದಲ್ಲಿರುವ ಜತೆಗೆ ನಗರ ಪ್ರದೇಶದಿಂದ ದೂರವಿರುವ ಕಾರಣಕ್ಕೆ ಈ ಕಾಲೇಜಿಗೆ ನೇಮಕಗೊಳ್ಳಲು ಪ್ರಾಧ್ಯಾಪಕರು ಹಿಂದೇಟು ಹಾಕುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯದಲ್ಲೇ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದ್ದು, ಮತ್ತೆ ನಾಲ್ಕು ಪ್ರಾಧ್ಯಾಪಕರು ವರ್ಗಾವಣೆಗೊಳ್ಳುವ ಪಟ್ಟಿಯಲ್ಲಿದ್ದಾರೆ. ಇದರಿಂದ ಕಾಯಂ ಸಿಬ್ಬಂದಿ ಸಂಖ್ಯೆ 9ಕ್ಕೆ ಕುಸಿಯಲಿದೆ’ ಎಂದು ಪ್ರಾಚಾರ್ಯೆ ಬಿ.ಶಾಂತಲಾ ಪ್ರತಿಕ್ರಿಯಿಸಿದರು.

‘ಪ್ರತಿ 20 ವಿದ್ಯಾರ್ಥಿಗೆ ಒಬ್ಬರು ಉಪನ್ಯಾಸಕರು ಇರಬೇಕು ಎಂಬ ನಿಯಮವಿದೆ. ಆದರೆ 690 ವಿದ್ಯಾರ್ಥಿಗಳಿಗೆ ಕೇವಲ 13 ಮಂದಿ ಕಾಯಂ ಸಿಬ್ಬಂದಿ ಕಾರ್ಯನಿರ್ವಹಿಸಬೇಕಾಗಿದೆ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ಇದ್ದರೂ ಸ್ಥಳೀಯವಾಗಿ ಉಪನ್ಯಾಸಕರ ಲಭ್ಯತೆ ಕಡಿಮೆ ಇದೆ. ವೇತನ ಕಡಿಮೆ ಇರುವ ಕಾರಣ ದೂರದಿಂದ ಉಪನ್ಯಾಸಕರು ಬರಲು ಒಪ್ಪುತ್ತಿಲ್ಲ. ಅಲ್ಲದೇ ವಾರಕ್ಕೆ ಸೀಮಿತ ತರಗತಿ ಪಡೆಯಲು ಮಾತ್ರ ಅವರಿಗೆ ಅವಕಾಶ ಇದ್ದುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತಿದೆ’ ಎಂದೂ ಅಳಲು ತೋಡಿಕೊಂಡರು.

ಪ್ರಾಯೋಗಿಕ ತರಗತಿಗೆ ಸಮಸ್ಯೆ

ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿ ನಡೆಸಲು ಪ್ರಯೋಗಾಲಯಗಳಿಗೆ ಅಗತ್ಯವಿರುವ ಫೋರಮನ್ ಇನ್‌ಸ್ಪೆಕ್ಟರ್ ಮೆಕ್ಯಾನಿಕ್ ಸಹಾಯಕ ಹದ್ದೆಗಳು ಖಾಲಿ ಉಳಿದಿವೆ. ಪ್ರಯೋಗಾಲಯಕ್ಕೆ ಅಗತ್ಯವಿದ್ದ 55 ಸಿಬ್ಬಂದಿ ಪೈಕಿ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. 12 ಮಂದಿ ‘ಡಿ’ ದರ್ಜೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ.

‘ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಯೋಗಿಕ ತರಗತಿಗಳಿಗೆ ಹೆಚ್ಚು ಮಹತ್ವವಿದೆ. ಉಪನ್ಯಾಸಕರ ಕೊರತೆ ಎದುರಿಸುತ್ತಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠ ಮಾಡಲು ಸಹಾಯಕ ಸಿಬ್ಬಂದಿ ಇಲ್ಲದೆ ತರಗತಿ ನಡೆಸುವುದು ಕಷ್ಟವಾಗಿದೆ’ ಎನ್ನುತ್ತರೆ ಪ್ರಾಧ್ಯಾಪಕರೊಬ್ಬರು.

ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರ ಕೌನ್ಸೆಲಿಂಗ್ ಶೀಘ್ರವೇ ನಡೆಯಲಿದ್ದು ಕಾಲೇಜಿನ ಖಾಲಿ ಹುದ್ದೆಗಳ ಭರ್ತಿಗೆ ಪ್ರಯತ್ನಿಸಲಾಗುತ್ತದೆ. ಹೊಸ ನೇಮಕಾತಿಗೂ ಪ್ರಯತ್ನ ನಡೆದಿದೆ.
ಎಚ್.ಪ್ರಸನ್ನ, ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT