ಭಟ್ಕಳ: ತಾಲ್ಲೂಕಿನ ಮಾವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರ ಬಹುದಿನದ ಬೇಡಿಕೆಯಾದ ಉಪ್ಪು ನೀರು ತಡೆ ಅಣೆಕಟ್ಟೆ ಕಾಮಗಾರಿಗೆ ರಾಜ್ಯ ಸರ್ಕಾರ ₹17 ಕೋಟಿ ಅನುದಾನ ಒದಗಿಸಿದೆ. ಇದರಿಂದ ದಶಕಗಳ ಕಾಲ ಬೆಳೆ ಬೆಳೆಯದೆ ಪಾಳು ಬಿಟ್ಟ ಜಾಗದಲ್ಲಿ ರೈತರು ಪುನಃ ಹಸಿರಿನ ಫಲ ಕಾಣುವ ಕಾಲ ಸನ್ನಿಹಿತವಾಗಿದೆ.
ಮಾವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡಲ ತಡಿಯಲ್ಲಿ ಸುಮಾರು 400 ಎಕರೆ ಕೃಷಿ ಭೂಮಿ ಇದೆ. ಈ ಪ್ರದೇಶದಲ್ಲಿ ಭತ್ತ ಹಾಗೂ ಶೇಂಗಾ ರೈತರ ಪ್ರಮುಖ ಬೇಸಾಯವಾಗಿದೆ. ಸಮುದ್ರದ ಏರಿಳಿತದ ಸಮಯದಲ್ಲಿ ಸಮುದ್ರದ ಉಪ್ಪು ನೀರು ಹಳ್ಳದ ಮೂಲಕ ಕೃಷಿ ಭೂಮಿ ಸೇರುತ್ತಿದ್ದವು. ದಶಕಗಳಿಂದ ಉಪ್ಪು ನೀರು ಆವರಿಸಿದ ಕಾರಣ ರೈತರು ಈ ಭೂಮಿಯಲ್ಲಿ ಬೇಸಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೃಷಿಗೆ ಬಳಸದೆ ಪಾಳು ಬಿಡಲಾಗಿತ್ತು.
‘ರೈತರ ಬಹುದಿನದ ಬೇಡಿಕೆಗೆ ಶಾಸಕ ಸುನೀಲ ನಾಯ್ಕ ಸ್ಪಂದಿಸಿದ್ದಾರೆ. ಅಣೆಕಟ್ಟೆ ನಿರ್ಮಾಣವಾದರೆ ಗುಮ್ಮನಹಕ್ಕಲು, ಗರಡಿಗದ್ದೆ, ಬೈಲಹೊಳೆ, ಕಾರಿಹಳ್ಳ ಹಾಗೂ ನಾಡವಕೇರಿ ಪ್ರದೇಶಗಳಲ್ಲಿ ಲವಣಾಂಶ ಕೃಷಿ ಭೂಮಿಗೆ ನುಗ್ಗದಂತೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಆಗಲಿದೆ’ ಎನ್ನುತ್ತಾರೆ ಗ್ರಾಮದ ಪ್ರಮುಖ ಸಂತೋಷ ನಾಯ್ಕ.
‘ಉಪ್ಪು ನೀರು ತಡೆ ಅಣೆಕಟ್ಟೆ ನಿರ್ಮಿಸಲು ಆಗ್ರಹಿಸಿ ಈ ಭಾಗದ ರೈತರು ದಶಕಗಳಿಂದ ಹೋರಾಡುತ್ತಿದ್ದರು. ಉಪ್ಪು ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಯಿಂದ ವಿಮುಖಗೊಂಡಿದ್ದರು. ಅಣೆಕಟ್ಟೆ ನಿರ್ಮಾಣವಾದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ’ ಎಂದರು.
‘ಭಟ್ಕಳ ತಾಲ್ಲೂಕಿಗೆ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣಕ್ಕೆ ನೂರು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಮಾವಳ್ಳಿ ಗ್ರಾಮದಲ್ಲೂ ಅಣೆಕಟ್ಟೆಗೆ ಅನುದಾನ ಬಿಡುಗಡೆಯಾಗಿದ್ದು, ಉಪ್ಪು ನೀರು ಕೃಷಿ ಜಮೀನಿಗೆ ನುಗ್ಗದಂತೆ ತಡೆಯಲು ಕಾಮಗಾರಿ ಅನುಕೂಲ ಆಗಲಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಇಇಇ ವಿನೋದ ನಾಯ್ಕ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.