ಬುಧವಾರ, ಮಾರ್ಚ್ 29, 2023
23 °C
ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 111 ಕುಷ್ಠ ರೋಗ ಪ್ರಕರಣ

ಕಾರವಾರ | ಉಲ್ಬಣ ಹಂತದಲ್ಲಿ ಕುಷ್ಠ ರೋಗ ಪತ್ತೆ; ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 111 ಕುಷ್ಠ ರೋಗ ಪ್ರಕರಣ ವರದಿಯಾಗಿದ್ದು, ಈ ಪೈಕಿ ಬಹುತೇಕ ಉಲ್ಬಣ ಹಂತದಲ್ಲಿ ಗೋಚರಿಸಿರುವುದು ವೈದ್ಯರ ಆತಂಕಕ್ಕೆ ಕಾರಣವಾಗಿದೆ. ಸೋಂಕಿತರ ಸಂಖ್ಯೆ ಕರಾವಳಿ ಭಾಗದಲ್ಲೇ ಹೆಚ್ಚಿದೆ.

ಈ ಪೈಕಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕೆಲಸದ ಸಲುವಾಗಿ ಉತ್ತರ ಭಾರತದಿಂದ ವಲಸೆ ಬರುತ್ತಿರುವ ಕಾರ್ಮಿಕರಲ್ಲಿ ರೋಗ ಹೆಚ್ಚು ಪತ್ತೆಯಾಗಿದೆ. 111ರ ಪೈಕಿ 89 ಮಂದಿಯಲ್ಲಿ ರೋಗ ಉಲ್ಬಣ ಹಂತದಲ್ಲಿ ಪತ್ತೆಯಾಗಿದೆ. 22 ಪ್ರಕರಣಗಳು ಪ್ರಾಥಮಿಕ ಹಂತದಲ್ಲಿ ಗೋಚರಿಸಿವೆ. ರೋಗಿಗಳಿಗೆ ಅಗತ್ಯ ಚಿಕಿತ್ಸೆ, ಔಷಧೋಪಚಾರ ಒದಗಿಸಲಾಗುತ್ತಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ.

‘2015ಕ್ಕೆ ಹೋಲಿಸಿದರೆ ಕುಷ್ಠ ರೋಗ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಆರೇಳು ವರ್ಷಗಳ ಹಿಂದೆ ವರ್ಷಕ್ಕೆ ಸರಾಸರಿ 150 ಪ್ರಕರಣ ವರದಿಯಾಗುತ್ತಿತ್ತು. ಈಚೆಗೆ ಈ ಪ್ರಮಾಣದಲ್ಲಿ ಇಳಿಕೆಯಾಗಿದೆ’ ಎನ್ನುತ್ತಾರೆ ತಜ್ಞ ವೈದ್ಯರು.

‘ಉತ್ತರ ಭಾರತದ ಕೆಲವೆಡೆ ಕುಷ್ಠ ರೋಗ ಹರಡುವ ಪ್ರಮಾಣ ಹೆಚ್ಚಿದೆ. ಹೀಗಾಗಿ ಆ ಭಾಗದಿಂದ ವಲಸೆ ಬರುವ ಕಾರ್ಮಿಕರಲ್ಲಿ ಕೆಲವರಿಗೆ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಮಧ್ಯ ವಯಸ್ಕರಲ್ಲಿ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಿದೆ’ ಎಂದು ತಿಳಿಸಿದರು.

‘ಕುಷ್ಠ ರೋಗಕ್ಕೆ ಕಾರಣವಾಗುವ ವೈರಾಣುಗಳ ದುಷ್ಪರಿಣಾಮ ಗೋಚರಗೊಳ್ಳಲು ದೀರ್ಘಾವಧಿ ಸಮಯ ತಗಲುತ್ತದೆ. ಇದರಿಂದ ಬಹುತೇಕ ಪ್ರಕರಣ ಉಲ್ಬಣ ಹಂತದಲ್ಲಿ ಪತ್ತೆಯಾಗುತ್ತಿದೆ. ನಿರ್ಲಕ್ಷಿದರೆ ಸೋಂಕಿತರು ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ದೇಹದ ಯಾವುದೇ ಭಾಗದಲ್ಲಿ ಸ್ಪರ್ಷ ಜ್ಞಾನವಿಲ್ಲದ ಸಣ್ಣ ಕಲೆ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು’ ಎಂದು ತಜ್ಞ ವೈದ್ಯೆ ಡಾ.ಸವಿತಾ ತಿಳಿಸಿದರು.

ಕುಷ್ಠರೋಗ ಮುಕ್ತ ಜಿಲ್ಲೆಗೆ ಪಣ:

‘ಉತ್ತರ ಕನ್ನಡವನ್ನು ಕುಷ್ಠ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣ ತೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜತೆ ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕುಷ್ಠರೋಗದ ಕುರಿತಾದ ಮೌಢ್ಯವನ್ನು ತೊಲಗಿಸಿಬೇಕು. ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಸೋಂಕಿತರನ್ನು ಕೀಳಾಗಿ ಕಾಣದೆ ಅವರಿಗೆ ಅಗತ್ಯ ನೆರವು ಒದಗಿಸಬೇಕು’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಕುಡ್ತಲಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೂರಜಾ ನಾಯಕ, ಡಾ.ಶೃತಿ ಎಚ್.ಎನ್, ಡಾ.ಶಂಕರ ರಾವ್, ಡಾ.ರಮೇಶ್ ರಾವ್, ಡಾ. ಅನ್ನಪೂರ್ಣ ವಸ್ತ್ರದ, ಇದ್ದರು.

***

ಮುಂದಿನ ಎರಡು ವಾರ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ. ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸುತ್ತಿದ್ದೇವೆ.

- ಡಾ.ಶಂಕರ ರಾವ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು