ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುತ್ತಿನ ಚೀಲ ತುಂಬಿಸುವ ‘ಚಿಮಣಿ ದೀಪ’

ಸಾಂಪ್ರದಾಯಿಕ ಮೀನುಗಾರಿಕೆ ಪದ್ಧತಿ ಕೈಬಿಡದ ಕಡವಾಡ ಗ್ರಾಮಸ್ಥರು
Last Updated 13 ಜನವರಿ 2023, 23:00 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮವನ್ನು ಸುಂಕೇರಿ ಜತೆ ಸಂಪರ್ಕಿಸುತ್ತಿದ್ದ ಸೇತುವೆ ಶಿಥಿಲಗೊಂಡಿದ್ದರಿಂದ ಪರ್ಯಾಯವಾಗಿ ಹೊಸ ಸೇತುವೆ ಕಟ್ಟಲಾಯಿತು. ಹೊಸ ಸೇತುವೆ ಸಂಪರ್ಕಕ್ಕೆ ದಾರಿಯಾದರೆ, ಹಳೆಯ ಸೇತುವೆ ಮೀನುಗಾರರ ಜೀವನೋಪಾಯಕ್ಕೆ ಬಳಕೆಯಾಗುತ್ತಿದೆ.

ಸೇತುವೆಯ ಕಂಬಗಳ ಬುಡದಲ್ಲಿ ಸಂಜೆ ವೇಳೆಗೆ ಚಿಮಣಿ ದೀಪ ಬೆಳಗಲಾಗುತ್ತದೆ. ರಭಸದಿಂದ ಹರಿಯುವ ಕಾಳಿ ನದಿಗೆ ಕಂಬಗಳ ಬುಡದಲ್ಲಿ ಬಲೆ ಬೀಸಲಾಗುತ್ತದೆ. ಎರಡು ತಾಸುಗಳ ಕಾಲ ಕಾದು ಬಳಿಕ ರಾಶಿಗಟ್ಟಲೆ ಸಿಗಡಿ, ನೊಗ್ಲಿ, ಕುರುಡೆ, ಸೇರಿದಂತೆ ಬಗೆಬಗೆಯ ಮೀನುಗಳ ರಾಶಿ ಹೊರಕ್ಕೆಳೆಯಲಾಗುತ್ತದೆ.

ಇದು ಕಡವಾಡ ಗ್ರಾಮದ ಸುಮಾರು 108 ಕುಟುಂಬಗಳು ಜೀವನ ನಿರ್ವಹಣೆಗೆ ಇಂದಿಗೂ ಅನುಸರಿಸುತ್ತಿರುವ ಸಾಂಪ್ರದಾಯಿಕ ಮೀನುಗಾರಿಕೆ ಪದ್ಧತಿ. ಇಲ್ಲಿನ ಬಹುಪಾಲು ಮೀನುಗಾರ ಕುಟುಂಬಗಳಿಗೆ ಹಳೆಯ ಸೇತುವೆ ಜೀವನಾಧಾರವಾಗಿ ಉಳಿದುಕೊಂಡಿದೆ ಎಂಬುದು ಗ್ರಾಮಸ್ಥರ ಮಾತು.

‘ಕಾಳಿನದಿಯಲ್ಲಿ ಉಬ್ಬರವಿದ್ದರೆ ಮೀನುಗಾರಿಕೆ ನಡೆಸಲು ಆಗದು. ಇಳಿತ ಇದ್ದರೆ ಸೂರ್ಯಾಸ್ತ ಆಗುವುದನ್ನೇ ಕಾಯುತ್ತೇವೆ. ಕತ್ತಲು ಕವಿಯುತ್ತಿದ್ದಂತೆ ಸೇತುವೆ ಬಳಿ ಧಾವಿಸಿ ಚಿಮಣಿ ದೀಪ ಬೆಳಗುತ್ತೇವೆ. ಸೇತುವೆಗಳ ಕಂಬಗಳ ಬುಡದಲ್ಲಿ ಚಿಮಣಿ ಇರಿಸಲು ಸೂಕ್ತ ಸ್ಥಳಾವಕಾಶ ಇರುವದು ಅನುಕೂಲವಾಗಿದೆ’ ಎನ್ನುತ್ತಾರೆ ಮೀನುಗಾರ ಜಗನ್ನಾಥ ಭೋವಿ.

‘ನದಿಯಲ್ಲಿ ಇಳಿತ ಇದ್ದಾಗ ನೀರು ಸಮುದ್ರದತ್ತ ರಭಸದಿಂದ ಹರಿಯುತ್ತದೆ. ಚಿಮಣಿಯ ಬೆಳಕಿಗೆ ಆಕರ್ಷಿತಗೊಂಡು ಮೀನುಗಳು ಸೇತುವೆ ಬುಡದಲ್ಲಿ ಗುಂಪುಗೂಡತತ್ತವೆ. ಸೇತುವೆಯ ಕಂಬಗಳನ್ನು ಬಳಸಿ ಅಡ್ಡಲಾಗಿ ಬೀಸಿದ ಬಲೆಗೆ ಸಿಲುಕಿಕೊಳ್ಳುತ್ತವೆ’ ಎಂದು ಮೀನುಗಾರಿಕೆಯ ವಿಧಾನ ವಿವರಿಸುತ್ತಾರೆ ಹಿರಿಯ ಮೀನುಗಾರ ಲಕ್ಷ್ಮಣ ಪುರ್ಸು ಭೋವಿ.

‘ಹೆಚ್ಚಿನ ಪ್ರಮಾಣದಲ್ಲಿ ಸಿಗಡಿ ಮೀನು ಬಲೆಗೆ ಬೀಳುತ್ತದೆ. ದೊಡ್ಡ ಗಾತ್ರದ ಮೀನು ಸಿಕ್ಕರೆ ಅವುಗಳನ್ನು ಗೋವಾಕ್ಕೆ ಕಳಿಸಲಾಗುತ್ತದೆ. ಮಧ್ಯಮ ಗಾತ್ರದ್ದನ್ನು ಸ್ಥಳಿಯ ಮಾರುಕಟ್ಟೆಗೆ, ಸಣ್ಣ ಗಾತ್ರ ಸಿಗಡಿಗಳನ್ನು ಗ್ರಾಮದಲ್ಲಿ ಮಾರಾಟ ಮಾಡುತ್ತೇವೆ. ಪ್ರತಿದಿನ ಸರಾಸರಿ ₹200 ರಿಂದ ಎರಡು ಸಾವಿರ ವರೆಗೆ ಆದಾಯ ಗಳಿಸುವವರೂ ಇದ್ದಾರೆ’ ಎಂದು ಅವರು ವಿವರಿಸಿದರು.

ಮಹಾಪೂರದ ಸೇತುವೆ

‘ಕಡವಾಡ ಗ್ರಾಮದಲ್ಲಿ 1958ರಲ್ಲಿ ಮಹಾಪೂರ ಬಂದಿತ್ತು. ಆಗ ಊರಿಗೆ ಊರೇ ಮುಳುಗಿ ಹೋಗಿತ್ತು. ಅದಾದ ಬಳಿಕ ಗ್ರಾಮಕ್ಕೆ ಸೇತುವೆ ಮಂಜೂರಾಯಿತು. 1962ರಲ್ಲಿ ಪೂರ್ಣಗೊಂಡ ಬಳಿಕ ಈವರೆಗೂ ಇದೇ ಸೇತುವೆ ಬಳಸಿ ಮೀನುಗಾರಿಕೆ ನಡೆಸುತ್ತಿದ್ದೇವೆ. ಇಂದಿಗೂ ಚಿಮಣಿ ದೀಪ ಬಳಸಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರು ವಿರಳವಾಗಿದ್ದಾರೆ. ನಾವು ಅದನ್ನು ಮುಮದುವರೆಸಿದ್ದೇವೆ’ ಎನ್ನುತ್ತಾರೆ ಹಿರಿಯರಾದ ಲಕ್ಷ್ಮಣ ಪುರ್ಸು ಭೋವಿ.

ಹಳೆಯ ಸೇತುವೆ ಕೆಡವಲು ಹಿಂದೆ ನಡೆದಿದ್ದ ಪ್ರಯತ್ನ ತಡೆಯಲಾಗಿತ್ತು. ಮೀನುಗಾರ ಕುಟುಂಬಗಳಿಗೆ ಸೇತುವೆ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.

ಉದಯ ಭೋವಿ

ಮೀನುಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT