ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ಗ್ರಾಮದ ರೈತ ತನ್ನ ಐದು ಎಕರೆ ಪ್ರದೇಶದಲ್ಲಿ ಬೆಳೆದ ಗೋವಿನಜೋಳವನ್ನು ಕಟಾವು ಮಾಡಿಸಿ ದನಗಳಿಗೆ ಹಾಕಿದ್ದಾರೆ. ನಿರಂತರ ಮಳೆಗೆ ಗೋವಿನಜೋಳ ಬೆಳೆ ಹಾನಿಯಾಗಿರುವುದರಿಂದ ಈ ಕ್ರಮ ಕೈಗೊಂಡಿದ್ದಾರೆ.
‘ಎರಡು ತಿಂಗಳ ಹಿಂದೆ ಐದು ಎಕರೆ ಗದ್ದೆಯಲ್ಲಿ ಗೋವಿನಜೋಳ ಬಿತ್ತಿದ್ದೆ. ಸಸಿಗಳು ಎದೆಯೆತ್ತರ ಬೆಳೆದು ನಿಂತಿದ್ದವು. ಆದರೆ, 15 ರಿಂದ 20 ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯು ಬೆಳೆಯನ್ನು ಹಾನಿ ಮಾಡಿದೆ. ಕೊಳೆರೋಗದ ಬಾಧೆಯಿಂದ ಸಣ್ಣ ಪ್ರಮಾಣದ ತೆನೆಗಳು ಮಾತ್ರ ಬಿಟ್ಟಿವೆ. ನಿರೀಕ್ಷಿತ ಇಳುವರಿ ಬರುವುದು ದೂರದ ಮಾತು’ ಎಂದು ರೈತ ಪರಮೇಶ್ವರ ಗೊಟಗೋಡಿ ಬೇಸರಿಸಿದರು.
‘ಗದ್ದೆ ಉಳುಮೆ, ಬೀಜ ಬಿತ್ತನೆ, ಸಸಿಗಳ ಆರೈಕೆಗೆ ಸುಮಾರು ₹1 ಲಕ್ಷಕ್ಕಿಂತ ಹೆಚ್ಚು ವೆಚ್ಚವಾಗಿದೆ. ಖರ್ಚು ಮಾಡಿದಷ್ಟೂ ಫಸಲು ಬರುವುದಿಲ್ಲ. ಸಸಿ ಕಟಾವು ಮಾಡಿದರೆ ಜಾನುವಾರುಗಳಿಗೆ ಮೇವು ಆಗುತ್ತದೆ ಎಂದುಕೊಂಡು, ಎರಡು ಕೂಲಿ ಆಳುಗಳ ಸಹಾಯದಿಂದ ಬೆಳೆ ಕಟಾವು ಮಾಡಿಸಿದ್ದೇನೆ’ ಎಂದರು.
ಅತಿವೃಷ್ಟಿಯ ಪರಿಣಾಮ ತಾಲ್ಲೂಕಿನ ಬಹುತೇಕ ರೈತರ ಪರಿಸ್ಥಿತಿ ಹೀಗೆ ಆಗಿದೆ. ಗೋವಿನಜೋಳ ಬೆಳೆದ ರೈತರಿಗೆ ಬೆಳೆ ಕೈ ಹಿಡಿಯುವುದು ಅನುಮಾನವಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.