ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಹಸಿ ಕೊಳೆ ಅಡಿಕೆ ಕೆಜಿಗೆ ₹30 ಪೈಸೆ

ಅತಿವೃಷ್ಟಿ ಪರಿಣಾಮ; ಬೆಳೆಗಾರರು ಕಂಗಾಲು
Published 2 ಆಗಸ್ಟ್ 2024, 23:33 IST
Last Updated 2 ಆಗಸ್ಟ್ 2024, 23:33 IST
ಅಕ್ಷರ ಗಾತ್ರ

ಶಿರಸಿ: ಅತಿವೃಷ್ಟಿಯಿಂದ ಅಡಿಕೆಗೆ ಕೊಳೆರೋಗ ವ್ಯಾಪಿಸಿದೆ. 1 ಕೆಜಿ ಹಸಿ ಕೊಳೆ ಅಡಿಕೆ ದರವು ಕನಿಷ್ಠ ₹ 30 ಪೈಸೆಗೆ ಮತ್ತು ಗರಿಷ್ಠ ₹ 96 ಪೈಸೆಗೆ ಕುಸಿದಿದೆ. ಇದರಿಂದ ಅಡಿಕೆ ಬೆಳೆಗಾರರು ಕಂಗೆಟ್ಟಿದ್ದಾರೆ.

ಬೆಳೆಗಾರರಿಗೆ ನೆರವಾಗಲು ಸಹಕಾರಿ ಸಂಘಗಳು ಮಳೆಗಾಲದ ಅಡಿಕೆಯ ಟೆಂಡರ್ ಪ್ರಕ್ರಿಯೆ ಆರಂಭಿಸಿವೆ. ಆದರೆ, ಟೆಂಡರ್‌ನಲ್ಲಿ ವ್ಯಕ್ತವಾಗುವ ದರ ಆತಂಕಕ್ಕೀಡು ಮಾಡಿದೆ. ಒಂದು ಕೆಜಿ ಹಸಿ ಕೊಳೆ ಅಡಿಕೆಯ ದರ ಗುರುವಾರ ಕನಿಷ್ಠ ₹ 50 ಪೈಸೆ ಮತ್ತು ಗರಿಷ್ಠ ₹ 1.50 ಇತ್ತು. ಶುಕ್ರವಾರ ಅದೇ ದರವು ಕನಿಷ್ಠ ₹ 30 ಪೈಸೆ ಮತ್ತು ಗರಿಷ್ಠ ₹ 96 ಪೈಸೆಗೆ ಕುಸಿದಿದೆ. ಗುಣಮಟ್ಟ ಅಡಿಕೆ ದರ ಗರಿಷ್ಠ ₹ 9. ಕಳೆದ ವರ್ಷ ಅದರ ದರವು ₹ 12ರವರೆಗೆ ಇತ್ತು.

‘ರಭಸದ ಗಾಳಿ,ಮಳೆಗೆ ಪ್ರತಿ ಎಕರೆ ಅಡಿಕೆ ತೋಟದಲ್ಲಿ ಸರಾಸರಿ 40 ರಿಂದ 50 ಅಡಿಕೆ ಮರಗಳು ಮುರಿದುಬಿದ್ದಿದೆ. ಎಳೆಯ ಅಡಿಕೆ ಉದುರಿವೆ. ಜೊತೆಗೆ ಶೇ 30ಕ್ಕೂ ಪ್ರಮಾಣದಲ್ಲಿ ಅಡಿಕೆಗೆ ಕೊಳೆರೋಗ ಬಾಧಿಸಿದೆ. ಶೇ 20ರಿಂದ 25ರಷ್ಟು ವಾರ್ಷಿಕ ಬೆಳೆ ಈಗಾಗಲೇ ನೆಲ ಕಚ್ಚಿದೆ. ಈಗಾಗಲೇ ತೀವ್ರ ಹಾನಿ ಅನುಭವಿಸಿದ ಅಡಿಕೆ ಬೆಳೆಗಾರರು ಸದ್ಯ ಹಸಿ ಕೊಳೆ ಅಡಿಕೆ ದರ ಕೇಳಿ, ಅಡಿಕೆ ಆರಿಸುವುದನ್ನೇ ಕೈಬಿಟ್ಟಿದ್ದಾರೆ’ ಎಂದು ಬೆಳೆಗಾರ ಕೃಷ್ಣಮೂರ್ತಿ ಹೆಗಡೆ ಹೇಳಿದರು.

‘ಈ ಸಲ ಎಳೆಯ ಅಡಿಕೆ ಹೆಚ್ಚಿರುವುದಕ್ಕೆ ಖರೀದಿದಾರರಿಗೂ ವ್ಯರ್ಥ ಪದಾರ್ಥ ಹೆಚ್ಚು ಹೋಗುತ್ತದೆ. ಅದಕ್ಕೆ ಕಡಿಮೆ ದರಕ್ಕೆ ಖರೀದಿ ಅನಿವಾರ್ಯ. ಬೆಳೆಗಾರರ ದೃಷ್ಟಿಯಿಂದ, ಈಗಿನ ದರ ಯಾವುದಕ್ಕೂ ಸಾಲದು. ಇದೇ ದರ ಮುಂದುವರಿದರೆ ಬೆಳೆಗಾರರು ಮಾರುಕಟ್ಟೆಗೆ ಬರುವುದು ಕಡಿಮೆ ಆಗಬಹುದು’ ಎಂದು ವ್ಯಾಪಾರಿ ಇಸ್ಮಾಯಿಲ್ ಶೇಖ್ ಹೇಳಿದರು.

‘ಟೆಂಡರ್ ಆರಂಭದ ಎರಡು ದಿನಗಳಲ್ಲಿ ಅಂದಾಜು 350 ರೈತರು 1,400 ಚೀಲ ಹಸಿ ಕೊಳೆ ಅಡಿಕೆಯನ್ನು ಸಹಕಾರಿ ಸಂಘಕ್ಕೆ ತಂದಿದ್ದಾರೆ. ಆದರೆ, ಬೆಳೆದ ಅಡಕೆಗೆ ಕೆಜಿಗೆ ₹1.50 ರಿಂದ ₹1.75 ದರ ಲಭಿಸಿದ್ದು ಹೊರತುಪಡಿಸಿದರೆ ಶೇ 95ರಷ್ಟು ಅಡಿಕೆ ಸರಾಸರಿ ಕೆಜಿಗೆ ₹40 ಪೈಸೆ ದರಕ್ಕೆ ಮಾರಾಟವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT