ಮುಂಡಗೋಡ: ಇಲ್ಲಿನ ಪಟ್ಟಣ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಪಕ್ಷವನ್ನು ಮೀರಿ ತಮ್ಮದೇ ಬೆಂಬಲಿಗರಿಗೆ ಅಧಿಕಾರ ಕೊಡಿಸಲು ರಾಜಕೀಯ ದಾಳ ಉರುಳಿಸಿದ್ದು, ಬಿಜೆಪಿಯಿಂದ ಆರಿಸಿ ಬಂದಿದ್ದ ನಾಲ್ವರು ಸದಸ್ಯರನ್ನು ತಮ್ಮ ಬಣದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ.
ಪಟ್ಟಣ ಪಂಚಾಯಿತಿಯು 19 ಸದಸ್ಯರ ಬಲವನ್ನು ಹೊಂದಿದ್ದು, ಬಿಜೆಪಿಯ 10 ಹಾಗೂ ಕಾಂಗ್ರೆಸ್‌ನ ಒಂಬತ್ತು ಸದಸ್ಯರನ್ನು ಹೊಂದಿದೆ. ಆದರೆ ಒಂದು ವರ್ಷದಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಪಕ್ಷಾಂತರ ರಾಜಕೀಯ ಪರಿಣಾಮದಿಂದ, ಪಕ್ಷ ನಿಷ್ಠೆ ಹಾಗೂ ವ್ಯಕ್ತಿ ನಿಷ್ಠೆಯ ನಡುವಿನ ಸಂಘರ್ಷದಿಂದ ಸದಸ್ಯರು ಯಾರ ಕಡೆ ಒಲವು ಹೊಂದಿದ್ದಾರೆ ಎಂಬುದು ನಿಗೂಢವಾಗಿದೆ.
ಕೆಲವು ಸದಸ್ಯರು ಆರಿಸಿ ಬಂದ ಪಕ್ಷಕ್ಕೆ ಸೆಡ್ಡು ಹೊಡೆದು, ಮತ್ತೊಂದು ಪಕ್ಷ ಸೇರಿ ವ್ಯಕ್ತಿ ನಿಷ್ಠೆ ತೋರಿದರೆ, ಇನ್ನೂ ಕೆಲವರು ಆರಿಸಿ ಬಂದ ಪಕ್ಷದಲ್ಲಿಯೇ ಇದ್ದುಕೊಂಡು, ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಬಿಜೆಪಿಯಿಂದ 10 ಸದಸ್ಯರು ಆಯ್ಕೆಯಾಗಿ ಬಂದಿದ್ದರೂ, ಅವರಲ್ಲಿ ಒಗ್ಗಟ್ಟು ಉಳಿದಿಲ್ಲ. ಕೆಲವು ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದ ಮೊದಲ ಅವಧಿಯಲ್ಲಿ ಬಹುಮತ ಹೊಂದಿದ್ದ ಬಿಜೆಪಿ ಈ ಬಾರಿ ಅಲ್ಪಮತಕ್ಕೆ ಕುಸಿದು, ಎರಡನೇ ಅವಧಿಗೆ ಅಧಿಕಾರ ಹಿಡಿಯುವುದು ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್‌ನ ಒಂಬತ್ತು ಸದಸ್ಯರ ಪೈಕಿ ಒಬ್ಬರನ್ನು ಹೊರತುಪಡಿಸಿ, ಉಳಿದವರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇವರ ಜೊತೆ ಬಿಜೆಪಿಯ ನಾಲ್ಕು ಸದಸ್ಯರು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಸಲ ಕಾಂಗ್ರೆಸ್ ಅಧಿಕಾರಕ್ಕೇರುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ.
ಸದಸ್ಯರ ಗೈರು ಸಾಧ್ಯತೆ: ‘ಎರಡೂ ಪಕ್ಷಗಳು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿವೆ. ಕೆಲವು ಸದಸ್ಯರು ವಿಪ್‌ನಿಂದ ಪಾರಾಗಲು, ಚುನಾವಣೆಯ ದಿನ ಗೈರಾಗುವ ಮೂಲಕ ಕಾನೂನು ಕುಣಿಕೆಯಿಂದ ಪಾರಾಗುವ ತಂತ್ರ ಹೂಡಿದ್ದಾರೆ’ ಎಂದು ಬಲ್ಲ ಮೂಲಗಳು ತಿಳಿಸಿವೆ.
‘ಪಟ್ಟಣ ಪಂಚಾಯಿತಿಯ ಎರಡನೇ ಅವಧಿಗೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರುವುದು ನಿಶ್ಚಿತ. ಯಲ್ಲಾಪುರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಪಕ್ಷದಿಂದ ಆಯ್ಕೆಯಾಗಿರುವ ಪಟ್ಟಣ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ವಿ.ಎಸ್. ಪಾಟೀಲ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಶಾಸಕ ಶಿವರಾಮ ಹೆಬ್ಬಾರ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿಯ ನಾಲ್ಕು ಸದಸ್ಯರೂ ಸಭೆಯಲ್ಲಿದ್ದರು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ ಹೇಳಿದರು.
‘ಬಿಜೆಪಿಯಿಂದ ಆಯ್ಕೆಯಾಗಿರುವ 10 ಸದಸ್ಯರಿಗೂ ವಿಪ್ ನೀಡಲಾಗಿದೆ. ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಲು ಸೂಚಿಸಲಾಗಿದೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಂಜುನಾಥ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.