ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿತನ ಬೆಳೆಸಲು ಎನ್ಇಪಿ ಅಗತ್ಯ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಮರ್ಥನೆ
Last Updated 8 ಫೆಬ್ರುವರಿ 2023, 16:52 IST
ಅಕ್ಷರ ಗಾತ್ರ

ಕಾರವಾರ: ‘ಅಸಮಾಧಾನದ ಗೂಡಾಗಿ ಪರಿವರ್ತಿತವಾಗುತ್ತಿರುವ ಸಮಾಜದಲ್ಲಿ ನೆಮ್ಮದಿ, ಬದಲಾವಣೆ ತರಲು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಅನಿವಾರ್ಯ ಆಗಿದೆ. ಒತ್ತಡ ತಗ್ಗಿಸಿ ಸ್ವಾವಲಂಬಿ ಧೋರಣೆ ಬೆಳೆಸುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ’ ಎಂದು ಪ್ರಾಥಮಿಕ ಹಾಗೂ ಪ್ರೌಢಶ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಮರ್ಥಿಸಿಕೊಂಡರು.

ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದರೆ ದೇಶದ ಚಿತ್ರಣ ಬದಲಿಸಲು ಸಾಧ್ಯವಾಗುತ್ತದೆ. ಹಳೆಯ ಶಿಕ್ಷಣ ಪದ್ಧತಿ ಪರಾವಲಂಬಿ ಮನಸ್ಥಿತಿ ಸೃಷ್ಟಿ ಮಾಡಿತ್ತು. ಇದರಿಂದ ಜನರನ್ನು ಹೊರತಂದು ಸ್ವಾವಲಂಬಿ ಮಾನಸಿಕತೆ ರೂಪಿಸಲು ಹೊಸ ನೀತಿನ ಅನುಕೂಲವಾಗಲಿದೆ’ ಎಂದರು.

‘ಶಿಕ್ಷಣ ಪಡೆದ ನಂತರ ಉದ್ಯೋಗ ಪಡೆಯುವುದೇ ಗುರಿ ಎಂಬುದು ಯುವಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಸ್ವಉದ್ಯೋಗ, ಕೌಶಲ ಕ್ಷೇತ್ರದಲ್ಲಿ ಸಾಧನೆ ಸೇರಿದಂತೆ ಹಲವು ಅವಕಾಶಗಳಿರುವುದನ್ನು ಬಳಸಿಕೊಳ್ಳುವುದನ್ನು ಹೊಸ ಶಿಕ್ಷಣ ಪದ್ಧತಿ ಕಲಿಸಿಕೊಡಲಿದೆ’ ಎಂದರು.

‘ಸಮಾಜದಲ್ಲಿ ನಂಬಿಕೆ ಕಳೆದುಹೋಗುತ್ತಿದೆ. ಮನುಷ್ಯ ಮನುಷ್ಯನನ್ನು ನಂಬುವ ಸ್ಥಿತಿಯಲ್ಲಿಲ್ಲ. ಇಂತಹ ಸ್ಥಿತಿಗೆ ಬ್ರಿಟೀಷರು ರೂಪಿಸಿದ ಶಿಕ್ಷಣ ನೀತಿಯೇ ಕಾರಣ’ ಎಂದು ದೂರಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಜಿಲ್ಲೆಯಲ್ಲಿ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ‘ದೇಶದ ಭದ್ರತೆ, ಅಭಿವೃದ್ಧಿಗೆ ಶಿಕ್ಷಣವು ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸಕ ನಾಗರಾಜ ಗೌಡ, ಶುಭಾ ನಾಯ್ಕ ಉಪನ್ಯಾಸ ನೀಡಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹನುಮಂತಪ್ಪ ನಿಟ್ಟೂರು, ಡಿಡಿಪಿಐ ಈಶ್ವರ ನಾಯ್ಕ, ಎನ್.ಜಿ.ನಾಯಕ, ಪಿಡಬ್ಲ್ಯೂಡಿ ಎಇಇ ರಾಮಚಂದ್ರ ಗಾಂವಕರ ಇದ್ದರು.

ಹತ್ತು ಸಾವಿರ ಕೊಠಡಿ ನಿರ್ಮಾಣ:

‘ಸಿದ್ದರಾಮಯ್ಯ ಸರ್ಕಾರ ಐದು ವರ್ಷದಲ್ಲಿ ಕೇವಲ 3,617 ಶಾಲಾ ಕೊಠಡಿಗಳನ್ನು ನಿರ್ಮಿಸಿತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ 10,200ಕ್ಕೂ ಅಧಿಕ ಕೊಠಡಿ ನಿರ್ಮಿಸಲಾಗುತ್ತಿದೆ’ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಗುರುಭವನ , ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸೇರಿದಂತೆ ₹30 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

------------------

ಶಿಕ್ಷಕರ ಮನಸ್ಸಿನಲ್ಲಿ ಸಮಾಜಕ್ಕಾಗಿ ದುಡಿಯುವ ಆಸಕ್ತಿ ಇದೆ. ಆದರೆ ಹಳೆಯ ಶಿಕ್ಷಣ ವ್ಯವಸ್ಥೆ ಮನಸ್ಥಿತಿ ಬದಲಿಸಿತ್ತು.

ಬಿ.ಸಿ.ನಾಗೇಶ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT