ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಗಿ: ಕಚ್ಚಾ ರಸ್ತೆಯೇ ಗತಿ

ಬಸ್, ಸೇತುವೆ ಸೇರಿ ಹಲವು ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಗ್ರಾ.ಪಂ.
Published 23 ಮೇ 2023, 14:27 IST
Last Updated 23 ಮೇ 2023, 14:27 IST
ಅಕ್ಷರ ಗಾತ್ರ

ಸುಜಯ್ ಭಟ್

ಸಿದ್ದಾಪುರ: ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಾ ವಿಶಾಲವಾದ ಪ್ರದೇಶವನ್ನು ಹೊಂದಿದ್ದರೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯ್ತಿ.

ತಾಲ್ಲೂಕು ಕೇಂದ್ರದಿಂದ ಸುಮಾರು 17 ಕಿ.ಮೀ. ದೂರದಲ್ಲಿರುವ ಗ್ರಾಮ ಪಂಚಾಯ್ತಿ 3 ಗ್ರಾಮಗಳನ್ನು ಒಳಗೊಂಡಿದ್ದು, 3,128 ಜನಸಂಖ್ಯೆ ಇದೆ. 8 ಮಂದಿ ಸದಸ್ಯ ಬಲದ ಗ್ರಾಮ ಪಂಚಾಯ್ತಿ ಇದಾಗಿದೆ.

‘ಗ್ರಾಮ ಪಂಚಾಯ್ತಿ ಕಟ್ಟಡವು ಶಿಥಿಲಗೊಂಡಿದ್ದು, ನೂತನ ಕಟ್ಟಡದ ನಿರ್ಮಾಣ ನಡೆಯುತ್ತಿದ್ದರೂ ಅನುದಾನದ ಕೊರತೆಯಿಂದ ಇನ್ನೂ ಪೂರ್ಣಗೊಂಡಿಲ್ಲ. ಮುಖ್ಯರಸ್ತೆಗಳನ್ನು ಹೊರತು ಪಡಿಸಿ ಗ್ರಾಮಗಳಿಗೆ ಸಂಪರ್ಕಿಸುವ ಶೇ.70 ರಷ್ಟು ರಸ್ತೆಗಳು ಕಚ್ಚಾ ರಸ್ತೆಗಳಾಗಿವೆ. ಳೆಗಾಲದಲ್ಲಿ ಜನರು ಸಂಚರಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಬಹುಪಾಲು ರಸ್ತೆಗಳಿಗೆ ದಾರಿದೀಪದ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿಲ್ಲ. ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಸ್‍ಗಾಗಿ 2-3 ಕಿ ಮೀ ಕಾಲ್ನಡಿಗೆಯಲ್ಲಿ ಸಂಚರಿಸಿ ಮುಖ್ಯ ರಸ್ತೆಗೆ ಬರಬೇಕಿದೆ. ಮಳೆಗಾಲದಲ್ಲಿ ಇಲ್ಲಿನ ಹೆಚ್ಚಿನ ಹಳ್ಳಿಗಳು ನಡುಗಡ್ಡೆಯಾಗಿ ಮಾರ್ಪಡುತ್ತವೆ. ವ್ಯವಸ್ಥಿತವಾದ ಸೇತುವೆಗಳು ನಿರ್ಮಾಣವಾಗದ ಕಾರಣ ಜನರು ಕಾಲುಸಂಕವನ್ನೇ ಅವಲಂಭಿಸಿದ್ದಾರೆ’ ಎಂದು ಗ್ರಾಮಸ್ಥರ ಗಣಪತಿ ಗೌಡ ದೂರಿದರು.

‘ತಾರಗೋಡು ಗ್ರಾಮದ ಆಲಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಜನರು ಹೆಚ್ಚಾಗಿ ವಾಸಿಸುತ್ತಿದ್ದು ಇಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಹಳ್ಳಿಗೆ ಸರಿಯಾದ ರಸ್ತೆ ಸಂಪರ್ಕ, ಸೇತುವೆ, ದಾರಿ ದೀಪ ಮುಂತಾದ ಯಾವ ಸೌಕರ್ಯಗಳೂ ಕೂಡ ಸಿಕ್ಕಿಲ್ಲ ಎಂಬುದು ಸ್ಥಳಿಯರ ಆರೋಪ.

‘ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಳ್ಳುತ್ತದೆ. ವಿದ್ಯುತ್ ಇಲ್ಲದಿದ್ದರೆ ನೆಟ್‍ವರ್ಕ್ ಕೂಡ ಇರುವುದಿಲ್ಲ. ಸುಸಜ್ಜಿತ ಸೇತುವೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಕೆಲವು ವೇಳೆ ಹೊರಗಿನ ಪ್ರಪಂಚದ ಸಂಪರ್ಕವೇ ಕಡಿತಗೊಳ್ಳುತ್ತದೆ’ ಎಂದು ಗೋವಿಂದ ಗೌಡ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದ್ದರೂ ಹಳ್ಳಿಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿಲ್ಲ. ಇದರಿಂದ ರಸ್ತೆಗಳ ಪಕ್ಕದಲ್ಲಿ, ಚರಂಡಿಗಳಲ್ಲಿ ಕಸ ಹೆಚ್ಚಾಗುತ್ತಿದೆ. ತ್ಯಾಜ್ಯ ಸಂಗ್ರಹಿಸುವ ಕಾರ್ಯವನ್ನು ಬೇಗ ಆರಂಭಿಸಬೇಕು ಎನ್ನುವುದು ಇಟಗಿ ಗ್ರಾಮಸ್ಥರ ಆಗ್ರಹ.

ಗ್ರಾಮ ಪಂಚಾಯ್ತಿಗೆ ಸರ್ಕಾರದ ಅನುದಾನವನ್ನು ಹೊರತು ಪಡಿಸಿ ಉಳಿದ ಆದಾಯ ಬಹಳ ಕಡಿಮೆ. ಹಣಕಾಸಿನ ಕೊರತೆಯಿಂದ ತ್ಯಾಜ್ಯ ಸಂಗ್ರಹಣೆಯನ್ನು ಆರಂಭಿಸಿಲ್ಲ. ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
ಸುರೇಂದ್ರ ಗೌಡ ಇಟಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT