ಕಾರವಾರ: ಜೋಯಿಡಾ ತಾಲ್ಲೂಕಿನ ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಆರ್ಕಿಡ್ ಉದ್ಯಾನ ನಿರ್ಮಾಣಕ್ಕೆ ಮರಗಳನ್ನು ಕತ್ತರಿಸುತ್ತಿರುವ ಬಗ್ಗೆ ವನ್ಯಜೀವಿ ಕಾರ್ಯಕರ್ತರ ದೂರು ಆಧರಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಾಜ್ಯ ವನ್ಯಜೀವಿ ವಿಭಾಗಕ್ಕೆ ನೊಟೀಸ್ ಜಾರಿ ಮಾಡಿದೆ.
‘ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದ ಅರಣ್ಯ ಪ್ರದೇಶಕ್ಕೆ ಹಾನಿ ಉಂಟಾಗುತ್ತಿದೆಯೆ ಎಂಬ ಬಗ್ಗೆ ಶೀಘ್ರವಾಗಿ ವಾಸ್ತವ ವರದಿ ಸಲ್ಲಿಸಬೇಕು’ ಎಂದು ಪ್ರಾಧಿಕಾರ ನೊಟೀಸ್‍ನಲ್ಲಿ ಸೂಚಿಸಿದೆ.
‘ಮಾರ್ಚ್ 22 ರಂದು ಇ–ಮೇಲ್ ಮೂಲಕ ವನ್ಯಜೀವಿ ಕಾರ್ಯಕರ್ತರು ಸಲ್ಲಿಸಿದ್ದ ದೂರು ಆಧರಿಸಿ ನೊಟೀಸ್ ನೀಡಲಾಗುತ್ತಿದೆ. ಕೆ.ಟಿ.ಆರ್.ನ ಕೇಂದ್ರ ಪ್ರದೇಶದಲ್ಲಿಯೇ ಆರ್ಕಿಡ್ ಉದ್ಯಾನ ನಿರ್ಮಾಣಕ್ಕೆ ಹಾನಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ’ ಎಂದು ಪ್ರಾಧಿಕಾರ ತಿಳಿಸಿದೆ.
‘ಆರ್ಕಿಡ್ ಉದ್ಯಾನ ನಿರ್ಮಿಸಿರುವ ಕಾನೇರಿ ನದಿ ದಂಡೆಯ ನುಜ್ಜಿ ನರ್ಸರಿ ಪ್ರದೇಶವು ಹುಲಿ ಯೋಜನೆ ಪ್ರದೇಶದ ಕೇಂದ್ರ ಪ್ರದೇಶದಲ್ಲಿದ್ದು ಇಲ್ಲಿ ಹೊಸದಾಗಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಕಟ್ಟಡಕ್ಕಾಗಿ ನೀರಿನ ಟ್ಯಾಂಕ್ ಸಹ ತೆರವುಗೊಳಿಸಲಾಗಿದೆ. ಕೇಂದ್ರ ಸಚಿವರು ಹುಲಿ ಯೋಜನಾ ವ್ಯಾಪ್ತಿಯ ಕೇಂದ್ರ ಪ್ರದೇಶಗಳಲ್ಲಿ ಯಾವುದೇ ಹೊಸ ಕಟ್ಟಡ ಕೈಗೊಳ್ಳುವಂತಿಲ್ಲ ಎಂದು ಹೇಳಿದ್ದರು. ಆದರೂ ಇಲ್ಲಿ ನಿಯಮ ಪಾಲನೆಯಾಗದೆ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ’ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಉದ್ಯಾನ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ವನ್ಯಜೀವಿ ಪ್ರದೇಶಗಳಲ್ಲಿ ಮರ ಕಡಿಯಲು ಅಂತಹ ಚಟುವಟಿಕೆ ನಿರ್ವಹಣಾ ಯೋಜನೆಯಲ್ಲಿರಬೇಕು ಎಂಬುದಿದೆ. ಆರ್ಕಿಡ್ ಉದ್ಯಾನ ನಿರ್ಮಿಸುವ ಪ್ರಸ್ತಾವ ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖವೇ ಇಲ್ಲ. ಹಾಗಿದ್ದರೂ ಕೆ.ಟಿ.ಆರ್. ಅಧಿಕಾರಿಗಳು ಉದ್ಯಾನ ನಿರ್ಮಾಣಕ್ಕೆ ಮುಂದಾಗಿದ್ದು ಏಕೆ?’ ಎಂದು ಪ್ರಶ್ನಿಸಿದರು.
ಆರ್ಕಿಡ್ ಉದ್ಯಾನ ನಿರ್ಮಾಣಕ್ಕೆ ಆಕ್ಷೇಪ ಎದುರಾಗುತ್ತಿರುವ ಕುರಿತು ಪ್ರತಿಕ್ರಿಯೆ ಪಡೆಯಲು ಕೆ.ಟಿ.ಆರ್. ಡಿಸಿಎಫ್ ಮರಿಯಾ ಕ್ರಿಸ್ಟರಾಜು ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.