ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಗೆ ಸಜ್ಜಾದ ನಾಗಯಕ್ಷೆ ಕ್ಷೇತ್ರ

ಭಟ್ಕಳದ ನಾಗಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಭಕ್ತರ ಸಾಲು: ಉತ್ಸವಕ್ಕೆ ಅದ್ಧೂರಿ ಸಿದ್ಧತೆ
Last Updated 24 ಸೆಪ್ಟೆಂಬರ್ 2022, 14:23 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಪ್ರಸಿದ್ಧ ಶಕ್ತಿಸ್ಥಳಗಳಲ್ಲಿ ಒಂದಾಗಿರುವ, ಪಟ್ಟಣದ ವಿ.ವಿ ರಸ್ತೆಯ ನಾಗಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳಾಗಿವೆ. ಎರಡು ವರ್ಷ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಿದ ಉತ್ಸವವನ್ನು, ಈ ಬಾರಿ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ.

ನಾಗಯಕ್ಷೆ ದೇವಿಯನ್ನು ನವರಾತ್ರಿ ಸಮಯದಲ್ಲಿ ದಿನಕ್ಕೊಂದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಅಪಾರ ಭಕ್ತರನ್ನು ಹೊಂದಿರುವ ಈ ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯಗಳು ಮಾತ್ರವಲ್ಲದೇ ಅಮೆರಿಕ, ಕೆನಡಾ, ಕ್ಯಾಲಿಫೋರ್ನಿಯಾ ದೇಶಗಳಲ್ಲಿರುವ ಭಕ್ತರೂ ಬಂದು ಸೇವೆ ಸಲ್ಲಿಸುತ್ತಾರೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ದಿನವೂ ಸಾವಿರಾರು ಭಕ್ತರಿಗೆ ಅನ್ನದಾಸೋಹ ನಡೆಯುತ್ತದೆ.

ಕಷ್ಟಗಳ ಪರಿಹಾರಕ್ಕಾಗಿ ದೇವಿಗೆ ಮೊರೆ ಸಲ್ಲಿಸಿದರೆ ಶೀಘ್ರ ಒಲಿಯುತ್ತಾಳೆ, ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಅವರ ಮೈಮೇಲೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ನವರಾತ್ರಿ ಸಂದರ್ಭ ದೇವಿಯ ಆಹ್ವಾನವಾಗುತ್ತದೆ ಎಂಬ ನಂಬಿಕೆಯಿದೆ.

ಈ ಸಮಯದಲ್ಲಿ ಕಷ್ಟಗಳ ಪರಿಹಾರಕ್ಕಾಗಿ ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಂತು ದೇವಿಯಲ್ಲಿ ಪ್ರಶ್ನೆಯಿಟ್ಟು ಪರಿಹಾರ ಕಂಡುಕೊಳ್ಳುತ್ತಾರೆ. ಸಂತತಿ, ಆರೋಗ್ಯ, ಉದ್ಯೋಗ, ವ್ಯಾಜ್ಯ ಸೇರಿದಂತೆ ಅನೇಕ ಸಮಸ್ಯೆಗಳಿಗೆ ದೇವಿಯಲ್ಲಿ ಪ್ರಶ್ನೆಯಿಟ್ಟು ಒಳಿತನ್ನು ಪಡೆದುಕೊಳ್ಳುತ್ತಾರೆ.

ಸಮಾಜಮುಖಿ ಕಾರ್ಯ:

ದೇಗುಲದ ಆದಾಯವನ್ನು ಧಾರ್ಮಿಕ ಕಾರ್ಯಕ್ಕೇ ಸೀಮಿತವಾಗಿಸದೇ ಸಾಮಾಜಿಕ ಕೆಲಸಗಳಿಗೂ ಬಳಸಲಾಗುತ್ತಿದೆ. ಸುಸಜ್ಜಿತ ಸಭಾಭವನ ನಿರ್ಮಿಸಿ ಮದುವೆ ಸಮಾರಂಭಗಳಿಗೆ ಉಚಿತವಾಗಿ ನೀಡಲಾಗುತ್ತಿದೆ.

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚುಚ್ಚುಮದ್ದು ನೀಡಲು ಲಸಿಕಾ ಕೊಠಡಿ ನಿರ್ಮಿಸಲಾಗಿದೆ. ನಾಗಯಕ್ಷೆ ಸಭಾಭವನದ ಪಕ್ಕದಲ್ಲಿಯೇ ಗೋಶಾಲೆ ನಿರ್ಮಿಸಿ 50 ಹಸುಗಳನ್ನು ಸಾಕಲಾಗುತ್ತಿದೆ. ನಾಗಯಕ್ಷೆ ಬಾಲವಿಹಾರ ತೆರೆದಿದ್ದು 52 ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ, ಮೃತದೇಹಗಳನ್ನು ಇಡುವ ಎರಡು ಶೈತ್ಯಾಗಾರಗಳನ್ನು ನೀಡಲಾಗಿದೆ. ಪ್ರತಿವರ್ಷ ₹ 1 ಲಕ್ಷ ಮೌಲ್ಯದ ಉಚಿತ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗುತ್ತದೆ. ಕೊರೊನಾ ಹಾಗೂ ನೆರೆಹಾವಳಿ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಿದ ಟ್ರಸ್ಟ್, ಲಕ್ಷಾಂತರ ರೂಪಾಯಿ ಮೌಲ್ಯದ ಕಿಟ್‌ಗಳನ್ನು ವಿತರಿಸಿದೆ.

ಈ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಗಣ್ಯರು ಭೇಟಿ ನೀಡಿದ್ದಾರೆ. ರಾಜ್ಯ ಶಿಕ್ಷಣ ಸಚಿವ ನಾಗೇಶ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಲವು ಶಾಸಕರು, ಗೋವಾ, ಮುಂಬೈ ರಾಜ್ಯಗಳ ನ್ಯಾಯಾಧೀಶರು ಸೇರಿದಂತೆ ಅನೇಕ ಗಣ್ಯರು ದೇವಿಯ ದರ್ಶನ ಪಡೆದು ಹರಕೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ಕಿರಾಣಿ ದಾಸ್ತಾನುದಾರರು ನವರಾತ್ರಿಗೆ ₹ 2 ಲಕ್ಷ ಮೌಲ್ಯದ ಕಿರಾಣಿ ಸಾಮಗ್ರಿಯನ್ನು ಕಾಣಿಕೆ ನೀಡುತ್ತಿದ್ದಾರೆ.

‘ನನ್ನ ಪತ್ನಿಗೆ ಗರ್ಭಕೋಶ ಕಾನ್ಸರ್ ಇದೆಯೆಂದು ಗೋವಾದಲ್ಲಿ ವೈದ್ಯರು ತಿಳಿಸಿದ್ದರು. ನಾನು ನಾಗಯಕ್ಷೆ ದೇವಸ್ಥಾನದಲ್ಲಿ ಪ್ರಶ್ನೆ ಇಟ್ಟಾಗ ಕ್ಯಾನ್ಸರ್ ಇಲ್ಲ, ಮಣಿಪಾಲದಲ್ಲಿ ಪರೀಕ್ಷೆ ಮಾಡಿಸುವಂತೆ ಉತ್ತರ ದೊರೆಯಿತು. ಮಣಿಪಾಲದಲ್ಲಿ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬಂದಿತು’ ಎನ್ನುತ್ತಾರೆ ಗೋವಾದಲ್ಲಿ ಹೋಟೆಲ್ ಉದ್ಯಮಿಯಾಗಿರುವ ಮಂಜುನಾಥ ಪ್ರಭು.

ಸಭಾಭವನ ಉದ್ಘಾಟನೆ 1ರಂದು:

‘ನಾಗಯಕ್ಷೆ ಚಾರಿಟೆಬಲ್ ಟ್ರಸ್ಟ್‌ನಿಂದ ₹ 11 ಲಕ್ಷ ವೆಚ್ಚದಲ್ಲಿ ಗುರುಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ, ಸದ್ಗುರು ಶ್ರೀಧರ ಸಭಾಭವನವನ್ನು ನಿರ್ಮಿಸಲಾಗಿದೆ. ಅದನ್ನು ನವರಾತ್ರಿ ಪರ್ವಕಾಲದಲ್ಲಿ ದೇವಿಯ ಆಣತಿಯಂತೆ ಅ.1ರಂದು ಲೋಕಾರ್ಪಣೆ ಮಾಡಲಿದ್ದೇವೆ’ ಎಂದು ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT